ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣವಚನ ಮುಂದೂಡಿಕೆ

Update: 2018-05-19 17:27 GMT

ಬೆಂಗಳೂರು, ಮೇ 19: ಸೋಮವಾರ ಬೆಳಗ್ಗೆ ಕಂಠೀರವ ಸ್ಟೇಡಿಯಂನಲ್ಲಿ ತಾನು ಪ್ರಮಾಣವಚನ ಸ್ವೀಕರಿಸಲಿದ್ದೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿರುವ ನಡುವೆಯೇ ಇದೀಗ ಪ್ರಮಾಣವಚನ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

ಸೋಮವಾರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನುವುದು ಬಹುತೇಕ ಖಚಿತಗೊಂಡಿತ್ತು. ಆದರೆ ಸೋಮವಾರ ರಾಜೀವ್ ಗಾಂಧಿ ಪುಣ್ಯತಿಥಿಯಿದ್ದು, ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸಹಿತ ಪ್ರಮುಖ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಹಾಗು ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಿದ್ದು, ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಬುಧವಾರಕ್ಕೆ ಮುಂದೂಡಲು ಎಚ್ ಡಿಕೆ ಒಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬುಧವಾರವೇ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತಗೊಂಡಿದೆ ಎನ್ನಲಾಗಿದೆ.

ಇನ್ನು ಬುಧವಾರ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಹಾಗು ಉಪಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ್ ಮಾತ್ರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಚಿವಸಂಪುಟದ ಯಾರೂ ಮಂಗಳವಾರ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎನ್ನಲಾಗಿದೆ. ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕುಮಾರಸ್ವಾಮಿ ವಿಶ್ವಾಸಮತಕ್ಕೆ ದಿನಾಂಕ ನಿಗದಿಗೊಳಿಸಲಿದ್ದಾರೆ. ವಿಶ್ವಾಸಮತಯಾಚನೆ ಬಳಿಕ ಸಚಿವಸಂಪುಟದ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಎಲ್ಲಾ ಪ್ರಕ್ರಿಯೆಗಳು 4ರಿಂದ 5 ದಿನಗಳ ಕಾಲ ನಡೆಯಲಿದ್ದು, ಅಲ್ಲಿಯವರೆಗೂ ಉಭಯ ಪಕ್ಷಗಳು ಶಾಸಕರು ಹೊಟೇಲ್ ಬಿಟ್ಟು ಹೊರಹೋಗದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. 

ಕಾಂಗ್ರೆಸ್-ಜೆಡಿಎಸ್ ನೂತನ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯರನ್ನು ಆಯ್ಕೆ ಮಾಡಲಾಗಿದ್ದು. ಈ ಸರಕಾರದ ಎಲ್ಲಾ ಪ್ರಮುಖ ನಿರ್ಧಾರಗಳು ಈ ಸಮಿತಿಯಲ್ಲಿ ತೀರ್ಮಾನವಾಗಲಿದೆ ಎನ್ನಲಾಗಿದೆ. ನೂತನ ಸರಕಾರದಲ್ಲಿ 17ರಿಂದ 20 ಕಾಂಗ್ರೆಸ್ ಸಚಿವರು ಹಾಗು 13ರಿಂದ 15 ಜೆಡಿಎಸ್ ಸಚಿವರು ಇರಲಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News