ಆರ್‌ಟಿಒ ಕಚೇರಿಯಲ್ಲಿ ಮುಗಿಯದ ಅವಾಂತರ !

Update: 2018-05-19 18:19 GMT

ಭಾಗ- 44

ನನ್ನ ಮತ್ತೊಂದು ವಾಹನ ವರ್ಗಾವಣೆಗಾಗಿ ಹೋದಗಾಲೂ ಇಂತಹದ್ದೇ ಸಮಸ್ಯೆ. ಪ್ರತೀ ಬಾರಿ ಆರ್‌ಟಿಒ ಕಚೇರಿಗೆ ಹೋದಾಗಲೂ ಒಂದಿಲ್ಲೊಂದು ಸಮಸ್ಯೆ, ತಕರಾರು. ಈ ಬಾರಿಯೂ ನಾನು ನನ್ನ ವಾಹನ ವರ್ಗಾವಣೆಗೆ ಹೋದಾಗ ಸಮರ್ಪಕ ದಾಖಲೆ ನೀಡಿದ್ದೆ. ಅದಕ್ಕೊಂದು ಪೂರಕ ದಾಖಲೆಯನ್ನು ನನ್ನ ಬ್ಯಾಗ್‌ನಲ್ಲಿ ನಾನು ಹುಡುಕಬೇಕಾಗಿತ್ತು. ಅದಕ್ಕಾಗಿ ಆರ್‌ಟಿಒ ಕಚೇರಿ ಒಳಗಡೆ ಇದ್ದ ಮೇಜಿನ ಬಳಿ ತೆರಳಿದೆ. ಅಲ್ಲಿ ಕುರ್ಚಿ ಹಾಗೂ ಮೇಜು ಖಾಲಿಯಾಗಿತ್ತು. ನಾನು ಮೇಜಿನ ಮೇಲೆ ನನ್ನ ಬ್ಯಾಗ್ ಇರಿಸಿ ದಾಖಲೆ ಹುಡುಕುತ್ತಿದ್ದೆ. ಅಷ್ಟರಲ್ಲಿ ಅಲ್ಲಿಗೆ ಕುರ್ಚಿಯ ವಾರಿಸುದಾರ ಬಂದ. ‘ಏನ್ರೀ ಇಲ್ಲಿ ಮಾಡುತ್ತಿದ್ದೀರಿ, ಗೆಟ್‌ಔಟ್’ ಅಂದ. ಗೆಟ್‌ಔಟ್ ಅಂದಾಗ ನನಗೆ ನಿಜಕ್ಕೂ ಕೋಪ ಬಂದಿತ್ತು. ‘ಯಾವನೋ ನೀನು’ ಎಂದು ಆತನನ್ನು ಪ್ರಶ್ನಿಸಿದೆ. ‘ನಾನು ಕೇಸ್ ವರ್ಕರ್’ ಎಂದ. ‘ಇದೇನು ನಿನ್ನ ಕುಟುಂಬದವರ ಮನೆಯಾ. ನನ್ನನ್ನು ಗೆಟ್‌ಔಟ್ ಅನ್ನಲು ನೀನ್ಯಾರು’ ಎಂದು ಧ್ವನಿ ಏರಿಸಿಯೇ ಪ್ರಶ್ನಿಸಿದೆ. ಆಗ ನನ್ನ ದಾಖಲೆಯ ಮೂಲ ಪ್ರತಿ ಪಡೆದವ ದೂರದಲ್ಲಿದ್ದವ ಓಡಿ ಬಂದ. ‘ಸರ್, ಏನು ಸರ್ ಏನು’ ಎಂದು ಆತ ಕೇಳಿದ. ‘ಇವನ್ಯಾರೋ, ಇವನ ಮನೆಗೆ ಬಂದ ಹಾಗೆ ವರ್ತಿಸುತ್ತಿದ್ದಾನೆ’ ಎಂದು ನಾನು ಆತನಲ್ಲಿ ಹೇಳಿದೆ. ‘ಕ್ಷಮಿಸಿ ಸರ್’ ಎಂದ

ಅಷ್ಟರಲ್ಲಿ ನನ್ನನ್ನು ಪ್ರಶ್ನಿಸಿದವನೂ ‘ಕ್ಷಮಿಸಿ’ ಎಂದ. ‘ಗೆಟ್ ಔಟ್ ಎಂದು ಹೇಳಿ ಸಾರಿ ಬೇರೆ ಕೇಳುತ್ತಿಯಲ್ಲಾ. ನೀನೆಂಥ ವ್ಯಕ್ತಿಯೋ’ ಎಂದೆ. ಬಳಿಕ ನನ್ನ ಅರ್ಜಿ ಬರೆದು ಕೊಟ್ಟೆ. ನಾಳೆ ಮಧ್ಯಾಹ್ನ 4 ಗಂಟೆಗೆ ಬನ್ನಿ ಎಂದವರು ಹೇಳಿದರು. ನಾನು ಮರುದಿನ ನಾಲ್ಕು ಗಂಟೆಗೆ ಹೋಗಿ ಆರ್‌ಟಿಒ ಕಚೇರಿಯ ಬಾಗಿಲಲ್ಲಿ ನಿಂತಾಗ ಹಿಂದಿನ ದಿನ ದಬಾಯಿಸಿದ್ದ ವ್ಯಕ್ತಿ ನನ್ನ ಬಳಿ ಬಂದು ದಾಖಲೆಯನ್ನು ನೀಡಿದ.‘ ಸರ್, ನೀವು ಒಮ್ಮೆ ಸಹಿ ಹಾಕಿ ಹೋಗಿ’ ಎಂದ. ‘ಯಾಕೆ’ ಎಂದು ಪ್ರಶ್ನಿಸಿದೆ. ‘ನಿನ್ನೆಯೇ ಸಿದ್ಧವಾಗಿತ್ತು. ನಿಮ್ಮ ಬೈಗುಳವನ್ನು ಯಾರೂ ಕೇಳುವುದು ಬೇಡ. ನಾನು ಇಲ್ಲಿಯೇ ಕೊಡುತ್ತೇನೆ. ಇಲ್ಲಿಂದಲೇ ನಿಮ್ಮನ್ನು ಕಳುಹಿಸುತ್ತೇನೆ. ಒಳಗೆ ಬಂದು ಮತ್ತೆ ಸಿಟ್ಟುಮಾಡಿಕೊಳ್ಳಬೇಡಿ’ ಎಂದ. ಹೀಗೆ ಪ್ರತೀ ಬಾರಿಯೂ ಆರ್‌ಟಿಒ ಕಚೇರಿಗೆ ಹೋದಾಗ ಜನಸಾಮಾನ್ಯರು ಇಂತಹ ಅವ್ಯವಸ್ಥೆ, ದುರ್ವರ್ತನೆಯನ್ನು ಎದುರಿಸಬೇಕಾಗುತ್ತದೆ. ಇದು ಸಾಮಾನ್ಯ. ಮತ್ತೊಂದು ಬಾರಿ, ಪುತ್ತೂರಿನ ಗಾಡಿಯನ್ನು ನಾನು ಖರೀದಿಸಿದ್ದೆ. ಅದನ್ನು ಮಂಗಳೂರಿಗೆ ವರ್ಗಾವಣೆ ಮಾಡಬೇಕಿತ್ತು. ಅರ್ಜಿಯನ್ನು ನಾನು ತುಂಬಿಸಿ ಆರ್‌ಟಿಒ ಕಚೇರಿಗೆ ನೀಡಿದೆ. ಕೊಟ್ಟಾಗ, ಅರ್ಜಿ ಪಡೆದಾತ, ಎರಡು ಮೂರು ದಿನ ಬಿಟ್ಟು ಬನ್ನಿ ಎಂದ. ‘ಹಾಗೆ ಎರಡು ಮೂರು ದಿನ ಅಂತ ಬೇಡ. ಯಾವ ದಿನ ಬರಬೇಕು ಎಂಬುದನ್ನು ಸಮರ್ಪಕವಾಗಿ ಬರೆದು ಕೊಡು’ ಎಂದು ಹೇಳಿದೆ. ‘ಆತ ನಾನು ಅಕ್ನಾಲೆಡ್ಜ್‌ಮೆಂಟ್ ನೀಡುವುದಿಲ್ಲ’ಎಂದ. ‘ಯಾಕೆ’ಎಂದು ನಾನೂ ಪ್ರಶ್ನಿಸಿದೆ. ‘ಇಲ್ಲಿ ಅಕ್ನಾಲೆಡ್ಜ್‌ಮೆಂಟ್ ಸ್ಲಿಪ್’ ಇಲ್ಲ ಎಂದ. ‘ಯಾರು ನಿನ್ನ ಮೇಲಿನ ಅಧಿಕಾರಿ’ ಎಂದೆ. ಆತ ಸಮೀಪದ ಮಹಿಳೆಯನ್ನು ತೋರಿಸಿದ. ನಾನು ಆಕೆಯ ಬಳಿ ಹೋಗಿ, ‘ಏನಮ್ಮಾ ನಿಮ್ಮ ಬಳಿ ಅಕ್ನಾಲೆಡ್ಜ್ ಮೆಂಟ್ ಸ್ಲಿಪ್ ಇಲ್ಲವಂತೆ. ಅದಕ್ಕೇನು ಸಮಸ್ಯೆ’’ ಎಂದು ಪ್ರಶ್ನಿಸಿದೆ. ‘ಇಲ್ಲ ಇದೆ ಇದೆ’ ಎಂದು ಆಕೆ ಹೇಳಿದಳು. ‘ಹಾಗಿದ್ದರೆ ಆತನಿಂದ ಕೊಡಿಸು’ ಎಂದೆ. ಆಕೆ ಹೇಳಿದಾಕ್ಷಣ ಆತ ಬರೆದ. ‘ನಾನು ಅದರಲ್ಲಿ ಯಾವ ದಿನ ಬರಬೇಕು ಎಂದು ಬರೆ’ ಎಂದು ಹೇಳಿದೆ. ಆತ ಬರೆದು ಕೊಟ್ಟ. ನಾನು ಸ್ಲಿಪ್‌ನಲ್ಲಿ ಬರೆಯಲಾಗಿದ್ದ ದಿನದ ಒಂದು ದಿನ ಕಳೆದು ಆರ್‌ಟಿಒ ಕಚೇರಿಗೆ ಹೋಗಿದ್ದೆ. ಅಲ್ಲಿ ಹೋದಾಗ, ನನ್ನ ಸ್ಲಿಪ್ ನೋಡಿ ಲೆಡ್ಜರ್ ಹುಡುಕಲಾರಂಭಿಸಿದ. ‘ಏನು ಈಗ ಹುಡುಕುತ್ತಿದ್ದೀಯಾ?’ ಎಂದು ಪ್ರಶ್ನಿಸಿದೆ. ‘ಅಲ್ಲ ಬೇರೆ ಕೆಲಸ ಇತ್ತು’ ಎಂದ. ಆತನ ಎದುರು ಕೆಲ ಆರ್‌ಸಿ ದಾಖಲೆಗಳಿತ್ತು. ನಾನು ತೆಗೆದು ನೋಡಿದೆ. ನಂತರ ಆತನನ್ನು ಉದ್ದೇಶಿಸಿ, ‘ಇದರಲ್ಲಿ ನಿನ್ನೆ ಕೊಟ್ಟ ಅರ್ಜಿ ಇಂದು ಸಿದ್ಧ್ದವಾಗಿದೆ. ಅದು ಮಾಡಲು ನಿನಗೆ ಸಮಯವಿತ್ತು. ಆದರೆ ನಾನು ಕೊಟ್ಟು ಕೆಲ ದಿನಗಳಾದರೂ ಅದನ್ನು ಮಾಡಲು ಟೈಮ್ ಇರಲಿಲ್ಲವಾ’ ಎಂದು ಕೇಳಿದೆ. ‘ಸರ್, ನರ್ವಸ್ ಆಗುತ್ತೆ ಸರ್’ ಎಂದ. ‘ಹೌದು, ಕೆಲಸ ಮಾಡದಿದ್ದರೆ ನರ್ವಸ್ ಆಗುತ್ತೆ. ನಿನ್ನೆ ಬಂದ ಅರ್ಜಿಯನ್ನು ಹೇಗೆ ಇಂದು ವಿಲೇ ಮಾಡಿದ್ದೀ. ಆತ ನಿನಗೇನಾಗಬೇಕು’ ಎಂದು ಪ್ರಶ್ನಿಸಿದೆ. ‘ನೀವು ಪಬ್ಲಿಕ್ ಅದಕ್ಕೆ ಹೀಗೆಲ್ಲಾ ಮಾತನಾಡುತ್ತೀರಿ’ ಎಂದ. ಹೌದು ನಾವು ಪಬ್ಲಿಕ್. ನಿನಗೆ ಸಂಬಳ ಸಿಗುವುದು ಈ ಪಬ್ಲಿಕ್‌ನಿಂದಲೇ. ಅದಕ್ಕೆ ನೀನು ಹೀಗೆ ಮಾತನಾಡುತ್ತಿ. ನನಗೆ ಈಗಲೇ ಮಾಡಿಕೊಡು ಎಂದು ಹೇಳಿದೆ. ಆತ ಎಲ್ಲಿಂದಲೋ ದಾಖಲೆ ಹುಡುಕಿ ತಂದು, ‘ಸರ್ ನೀವು ನಿಲ್ಲಬೇಡಿ, ನನಗೆ ನರ್ವಸ್ ಆಗುತ್ತೆ’ ಎಂದ. ನಾನು ಕುಳಿತುಕೊಳ್ಳುತ್ತೇನೆ. ನೀನು ಮಾಡಿಕೊಡು ಎಂದೆ. ಎಆರ್‌ಟಿಒ ಸಹಿ ಹಾಕಬೇಕು ಎಂದ. ನೀನು ಮಾಡಿಕೊಡು. ಎಆರ್‌ಟಿಒ ಬಳಿ ನಾನೇ ಹೋಗಿ ಸಹಿ ಹಾಕಿಸುತ್ತೇನೆ ಎಂದು ಹೇಳಿದೆ. ಮತ್ತೆ ಮಾಡಿಕೊಟ್ಟ. ಸಾರ್ವಜನಿಕರ ಸಂಬಳ ಪಡೆದು ಕೆಲಸ ಸರಿಯಾಗಿ ಮಾಡಲು ಆಗುವುದಿಲ್ಲ ಎಂದು ನಾನು ಆತನಿಗೆ ಹೇಳಿದೆ. ಅಷ್ಟರಲ್ಲಿ ಹಿಂದೆ ಬಂದಿದ್ದಾಗ ಮಾತನಾಡಿದ್ದ ಮಹಿಳೆ ಬಂದು, ‘ಸರ್, ತುಂಬಾ ಜನ ರಜೆಯಲ್ಲಿದ್ದಾರೆ’ ಎಂದಳು. ‘ಹೋ, ಹಾಗಿದ್ದರೆ, ನಿನ್ನೆ ಬಂದ ಅರ್ಜಿ ರೆಡಿ ಮಾಡಲು ಅವರು ರಜೆಯಲ್ಲಿರಲಿಲ್ಲವೇ? ನನ್ನ ಅರ್ಜಿ ಬರೆಯಲು ಮಾತ್ರವೇ ಅವರು ರಜೆಯೇ? ಅಂತಹ ವ್ಯವಸ್ಥೆ ಇದ್ದಲ್ಲಿ ಕಚೇರಿಗೆ ಬೀಗ ಹಾಕಿ ಮನೆಗೆ ಹೋಗಿ’ ಎಂದೆ. ಅಷ್ಟರಲ್ಲಿ ಅಲ್ಲಿದ್ದ ಏಳೆಂಟು ಮಂದಿ ಕ್ಲಾಪ್ ಹೊಡೆದರು. ನಾನು ಹೇಳಿದೆ, ಕ್ಲಾಪ್ ಯಾಕೆ ಹೊಡೆಯುವುದು, ಇಷ್ಟರವರೆಗೆ ಸುಮ್ಮನಿಸಿದ್ದಿರಿ ಎಂದು ಅವರನ್ನೂ ಪ್ರಶ್ನಿಸಿದೆ. ನನ್ನಲ್ಲಿಗೆ ಇಬ್ಬರು ಬಂದು, ಸರ್ ನಮಗೇನಾದರೂ ಮಾಡಿ. ನಾವು ಸರಕಾರಿ ಆ್ಯಂಬುಲೆನ್ಸ್ ಚಾಲಕರು. ಚಿಕ್ಕಮಗಳೂರಿನಿಂದ ವರ್ಗಾವಣೆ ಮಾಡಿದ ಆ್ಯಂಬುಲೆನ್ಸ್ ಇಲ್ಲಿಗೆ ನಮಗೆ ಆರ್‌ಸಿ ವರ್ಗಾವಣೆಗೆ ಸತಾಯಿಸುತ್ತಿದ್ದಾರೆ ಎಂದರು. ನಾನು ಹೇಳಿದೆ. ಇದು ಸರಕಾರಿ ಕಚೇರಿ. ನೀವು ಯಾವ ರೀತಿ ರೋಗಿಗಳನ್ನು ಸತಾಯಿಸುತ್ತೀರೋ ಅದೇ ರೀತಿ ಇಲ್ಲಿ ನಿಮ್ಮನ್ನೂ ಸತಾಯಿಸುತ್ತಾರೆ. ನೀವು ಮಾಡಿಕೊಳ್ಳಿ ಎಂದು ನಾನು ಆ ದಿನ ಹೊರ ಬಂದುಬಿಟ್ಟೆ.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News