ಗಿರಡ್ಡಿ: ಇಲ್ಲವಾದರೂ ‘ಇನ್ನಿಲ್ಲ ಎನ್ನಲುಂಟೇ?

Update: 2018-05-19 18:32 GMT

ಗಿರಡ್ಡಿಯವರ ವಿಮರ್ಶೆಯ ಹಾಸುಬೀಸು ದೊಡ್ಡದು. ಅದು ಜಾನಪದದಿಂದ, ಶಿಷ್ಟ ಅತಿಶಿಷ್ಟದವರೆಗೆ ತನ್ನ ಕಬಂಧ ಬಾಹುಗಳನ್ನು ಚಾಚಿದೆ. ‘ನವ್ಯ ವಿಮರ್ಶೆ’, ‘ಜಾನಪದ ಕಾವ್ಯ’, ‘ಕಾದಂಬರಿ ವಸ್ತು ಮತ್ತು ತಂತ್ರ’, ‘ಸಾಹಿತ್ಯ ಮತ್ತು ಪರಂಪರೆ’, ‘ನಾಟಕ ಸಾಹಿತ್ಯ ಮತ್ತು ರಂಗಭೂಮಿ’-ಇವೆಲ್ಲ ಕನ್ನಡ ವಿಮರ್ಶೆಯಲ್ಲಿ ಗಿರಡ್ಡಿಯವರಿಗೆ ಮಹತ್ವದ ಸ್ಥಾನ ತಂದುಕೊಟ್ಟಿರುವ ಕೃತಿಗಳು. ‘ವಚನ ವಿನ್ಯಾಸ’ ಇವಕ್ಕೆಲ್ಲ ಕಿರೀಟ ಪ್ರಾಯವಾದ ಕೃತಿ. ವಿಮರ್ಶೆಯಲ್ಲಿ ಗಿರಡ್ಡಿಯವರ ಮೇರು ಕೃತಿ. ವಚನಗಳ ರಾಚನಿಕ ವಿನ್ಯಾಸ, ಆಶಯ, ಅರ್ಥಗಳ ಮೇಲೆ ಹೊಸ ಬೆಳಕು ಚೆಲ್ಲುವ ಗಂಭೀರ ಅಧ್ಯಯನ ಇದಾಗಿದೆ.


ಒಂದೆರಡು ಒಬ್ಬೆ ಮಳೆ ಬಂದರೂ ಬೇಸಿಗೆಯ ಧಗೆ ಆರಿಲ್ಲ, ಭೂತಾಯಿ ಬಿಸಿಯುಸಿರು ಬಿಟ್ಟಂತೆ ಮೈಮನಗಳಿಗೆಲ್ಲ ಅಡರಿಕೊಳ್ಳುವ ಸುಡು ಕಾವು. ಚುನಾವಣೆಯ ರಗಳೆ-ರಾದ್ಧಾಂತಗಳನ್ನೇ ಮೈತುಂಬ ಹಾಸುಹೊಕ್ಕಾಗಿಸಿಕೊಂಡ ಪತ್ರಿಕೆಯನ್ನು ಒಲ್ಲದ ಮನಸ್ಸಿನಿಂದಲೇ ಕೈಗೆತ್ತಿಕೊಂಡಾಗ ಮೊದಲ ಕಾಲಮ್ಮಿನಲ್ಲೇ ಕಣ್ಣಿಗೆ ಬಿದ್ದದ್ದು ಗಿರಡ್ಡಿ ಇನ್ನಿಲ್ಲ ಎಂಬ ರಾವುಬಡಿದಂಥ ಸುದ್ದಿ. ಓರಿಗೆಯ ಗೆಳೆಯನನ್ನು ಕಳೆದುಕೊಂಡು ಎದೆ ಭಾರ. ಮನದೊಳಗೆ ಅರವತ್ತು ವರ್ಷಗಳಿಗೂ ಹಿಂದಣ ಹಿಮ್ಮಿಂಚು ಸುಳಿದಾಡಿತು. ಆಗಷ್ಟೆ ‘ಸಣ್ಣ ಕಥೆಯ ಹೊಸ ಒಲವು’ ಪ್ರಕಟವಾಗಿ ಸಾಹಿತ್ಯಾಸಕ್ತರಲ್ಲಿ ‘ಯಾರು ಈ ಗಿರಡ್ಡಿ ಗೋವಿಂದ ರಾಜ?’ ಎಂಬ ಆಸಕ್ತಿಗೆ ಇಂಬು ಕೊಟ್ಟಿತ್ತು. 1966ರ ಸುಮಾರಿನಲ್ಲಿ ಮೊದಲ ಸಲ ಭೇಟಿಯಾದ ಯುವಕನ ಚಿತ್ರ ಮನಃಪಟಲದಲ್ಲಿ ಮೂಡಿತು....

ಎತ್ತರದ ವ್ಯಕ್ತಿ. ಎತ್ತರದ ವ್ಯಕ್ತಿತ್ವವೂ ಹೌದು. ಹತ್ತಿರಹತ್ತಿರ ಆರು ಅಡಿ ಸಪೂರ. ಉತ್ತರ ಕರ್ನಾಟಕದ ಕಪ್ಪುಮಣ್ಣಿನ ಬಣ್ಣವೇ ಮೈವೆತ್ತಿದ ಕಾಂತಿ. ಮೆಟ್ಟಿಲು ಮೆಟ್ಟಿಲು ಕ್ರಾಪು. ನೇರ-ಸ್ಪಷ್ಟ ದೃಷ್ಟಿಯ ಕಣ್ಣುಗಳು. ಮಟ್ಟಸದ ಮೂಗಿನ ಕೆಳಗೆ ಪೊತ್ತೆಯೂ ಅಲ್ಲದ ಪೊದೆಯೂ ಅಲ್ಲದ ಹಗುರ ಮೀಸೆ. ಈ ಚಹರೆಯ ಗಿರಡ್ಡಿ ಯುವಕನಾಗಿದ್ದಾಗ ಇಳಕಲ್ ಸೀರೆಯ ಸೊಬಗಿಯರ ಚೆಲುವಿನಿಂದ ಆಕರ್ಷಿತರಾಗಿ ಅವರ ಎದಿ ಒಳಗ ಕಥೀ-ಕಾವ್ಯ ದಾಂಗುಡಿ ಇಟ್ಟಿತು.

ಗಿರಡ್ಡಿ ಗೋವಿಂದರಾಜ ಹುಟ್ಟಿದ್ದು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ, 1939ರ ಸೆಪ್ಟಂಬರ್ 23ರಂದು. ತಂದೆ ಅಂದಾನಪ್ಪ, ತಾಯಿ ಸಂಗಮ್ಮ. ಒಕ್ಕಲು ಮನೆತನ. ಕೂರಗಿ ಹೊಲಕ್ಕ ರೆಂಟೆ ಹೊಡಿಯೋ ಮೇಟಿ ವಿದ್ಯೆ ಸಾಕು ಅಂತ ಹಿರಿಯರ ಅಂಬೋಣ. ಆದರೆ ಬಾಲಕ ಗೋವಿಂದರಾಜನ ತಲೆಯಲ್ಲಿ ‘ಶಾರದಾ ಲಹರಿ’. ಈ ಲಹರಿ ಅಬ್ಬಿಗೇರಿಯ ಮಾಧ್ಯಮಿಕ ಶಾಲೆಯಿಂದ ನರೇಗಲ್ಲ-ರೋಣದಗುಂಟ ಧಾರವಾಡದ ಕರ್ನಾಟಕ ಕಾಲೇಜನ್ನು ಮುಟ್ಟಿಸಿತು. ವಿ.ಕೃ.ಗೋಕಾಕ್, ವಿ.ಎಂ. ಇನಾಂದಾರ್, ಸ.ಸ.ಮಾಳವಾಡ ಅವರುಗಳಂಥ ದಿಗ್ಗಜ ಮಾಸ್ತರುಗಳ ಶಿಷ್ಯತ್ವ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರರಾದ ಗಿರಡ್ಡಿಯವರು ಹನುಮನಹಟ್ಟಿಯ ಗ್ರಾಮೀಣ ಮಹಾವಿದ್ಯಾಲಯದಲ್ಲಿ ಮಾಸ್ತರಿಕೆ ವೃತ್ತಿ ಜೀವನ ಆರಂಭಿಸಿದರು.

ಹನುಮನಹಟ್ಟಿಯಿಂದ ಧಾರವಾಡದ ಕರ್ನಾಟಕ ಕಾಲೇಜಿಗೆ ಭಡ್ತಿ, ಇಂಗ್ಲಿಷ್ ಅಧ್ಯಾಪಕರಾಗಿ(1964-70). ಬೋಧನೆಯ ಮಧ್ಯೆ ಬಿಡುವು ಮಾಡಿಕೊಂಡು ಹೈದರಾಬಾದಿನ ಸೆಂಟ್ರಲ್ ಸ್ಕೂಲ್ ಆಫ್ ಇಂಗ್ಲಿಷ್‌ನಲ್ಲಿ ಉನ್ನತ ಅಧ್ಯಯನ. 1972-73ರರಲ್ಲಿ ಬ್ರಿಟಿಷ್ ಕೌನ್ಸಿಲ್ ಶಿಷ್ಯವೇತನ ನೀಡಿ ಗಿರಡ್ಡಿಯವರನ್ನು ಭಾಷಾ ಶಾಸ್ತ್ರದಲ್ಲಿ ವಿಶೇಷ ಅಧ್ಯಯನಕ್ಕಾಗಿ ಲ್ಯಾಂಕಸ್ಟರ್ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿತು. ಅಲ್ಲಿ ಮತ್ತೊಂದು ಸ್ನಾತಕೋತ್ತರ ಪದವಿಯ ಗರಿ ಸಿಕ್ಕಿಸಿಕೊಂಡರು. ಶೈಲಿ ಶಾಸ್ತ್ರದಲ್ಲಿ ಸಂಪ್ರಬಂಧ ರಚಿಸಿ ಡಾ.ಗಿರಡ್ಡಿ ಗೋವಿಂದರಾಜ ಆದರು. ವೃತ್ತಿಜಿವನ ಹೆಚ್ಚಾಗಿ ಕಲ್ಬುರ್ಗಿ ಮತ್ತು ಧಾರವಾಡಗಳಲ್ಲಿ. ಕಲ್ಬುರ್ಗಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಹದಿನಾಲ್ಕು ವರ್ಷಗಳ ಕಾಲ(1970-84) ಇಂಗ್ಲಿಷ್ ಸಾಹಿತ್ಯ ಬೋಧಿಸಿದರು. 1984ರಲ್ಲಿ ಮರಳಿ ತೌರಿಗೆ, ತಾವು ಕಲಿತ ಕರ್ನಾಟಕ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರೊಫೆಸರ್ ಆದರು. ನಿವೃತ್ತಿಗೆ ಮುನ್ನ ವಿಭಾಗದ ಮುಖ್ಯಸ್ಥರೂ ಆದರು. ಇದು ಗಿರಡ್ಡಿಯವರ ವೃತ್ತಿ ಜೀವನದ ಏರುಚಿತ್ರ.

ಗಿರಡ್ಡಿಯವರಿಗೆ ಹೈಸ್ಕೂಲು ದಿನಗಳಿಂದಲೇ ಸಾಹಿತ್ಯದಲ್ಲಿ ಅಭಿರುಚಿ. ಓದು-ಬರಹಗಳಲ್ಲಿ ಗಾಢ ಅನುರಕ್ತಿ. ಕಾವ್ಯ ರಚನೆಯಿಂದ ಸಾಹಿತ್ಯ ಕೃಷಿ ಪ್ರಾರಂಭಿಸಿ, ವಿಮರ್ಶಕರಾಗಿ ದೊಡ್ಡದಾಗಿ ಬೆಳೆದ ಗಿರಡ್ಡಿಯವರ ಮೊದಲ ಕೃತಿ ‘ಶಾರದಾ ಲಹರಿ’ -ನೀಳ್ಗವಿತೆ(1956). ವಿದ್ಯಾರ್ಥಿ ದೆಸೆಯಲ್ಲೇ ಮೂಡಿದ ‘ಶಾರದಾ ಲಹರಿ’, ಮುಂದೆ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕ ವೃತ್ತಿಯೊಂದಿಗೆ ಸಾಂಗತ್ಯವಾಗಿ ಸಾಗಿತು. ಭರ್ತಿ ಪ್ರಾಯದಲ್ಲಿ ಈ ಇಂಗ್ಲಿಷ್ ಮೇಷ್ಟ್ರಿಗೆ ಇಳಕಲ್ ಸೀರೆಯ ಹುಡುಗಿಯರಲ್ಲಿ ಕೀಟ್ಸ್‌ನ ಕಾವ್ಯವನ್ನು ಕಾಣುವ ಸಂಭ್ರಮ. ಜೊತೆಗೆ ಈ ಸಂಭ್ರಮ ಉತ್ಸಾಹಗಳಿಗೆ ಪುಟವಿಕ್ಕುವಂಥ ಧಾರವಾಡದ ಕಾವ್ಯೋದ್ದೀಪನ ವಾತಾವರಣ.

ಚಂದ್ರಶೇಖರ ಪಾಟೀಲ, ಸಿದ್ದಲಿಂಗಪಟ್ಟಣ ಶೆಟ್ಟಿ, ಬಿ.ಟಿ.ದೇಸಾಯಿ ಮೊದಲಾದ ನವನವ್ಯೋತ್ಸಾಹದ ಗೆಳೆಯರ ಗುಂಪಿನೊಂದಿಗೆ ಸಾಹಿತ್ಯಕ ಒಡನಾಟ. ‘ಸಂಕ್ರಮಣ’ ಸಾಹಿತ್ಯ ಪತ್ರಿಕೆಯ ಸಂಸ್ಥಾಪಕ ಸಂಪಾದಕರಲ್ಲಿ ಒಬ್ಬರು. ಮರಣ ಕಾಲಕ್ಕೆ ‘ಸಮಾಹಿತ’ ಪ್ರಧಾನ ಸಂಪಾದಕರು. ‘ರಸವಂತಿ’ ಗಿರಡ್ಡಿಯವರ ಮೊದಲ ಕವಿತಾ ಸಂಕಲನ ವಿದ್ಯಾರ್ಥಿಯಾಗಿದ್ದಾಗಲೆ ಪ್ರಕಟ. ಹಾಗೆ ನೋಡಿದರೆ ಇದಕ್ಕೂ ಮೊದಲು ಪ್ರಕಟವಾದ ‘ಶಾರದಾ ಲಹರಿ’(1956) ಗಿರಡ್ಡಿಯವರ ಮೊದಲ ಕವನ ಸಂಕಲನವಾದರೂ ಕವಿಯಾಗಿ ಸಾಹಿತ್ಯಾಸಕ್ತರ ಕಣ್ಣಿಗೆ ಬಿದ್ದದ್ದು ‘ರಸವಂತಿ’ಯಿಂದ. ‘ಮರ್ಲಿನ್ ಮನ್ರೋ’ ಗಿರಡ್ಡಿಯವರ ಮನೋಜ್ಞ ಕವನಗಳಲ್ಲಿ ಒಂದು.ರಸಿಕರೆದೆಯಲ್ಲಿ ಗಾಢವಾದ ‘ಮರ್ಲಿನ್ ಅನುರಕ್ತಿ’ಯನ್ನೂ ಈ ಬೆಡಗಿ ನಟಿಯ ಅಕಾಲ ಮರಣದ ವಿರಹವನ್ನೂ ಏಕಕಾಲದಲ್ಲಿ ಅನುಭವಕ್ಕೆ ತಂದುಕೊಟ್ಟ ಕವನವಿದು. ‘..ಇನ್ನಿತರ ಕವನಗಳೂ’ ಕಾವ್ಯಾಸಕ್ತರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಯಿತು.

‘ಆ ಮುಖಾ ಈ ಮುಖಾ’(1970),‘ಹಂಗು ಮತ್ತು ಇತರ ಕಥೆಗಳು’(1978) ಮತ್ತು ‘ಒಂದು ಬೇವಿನಮರದ ಕಥೆ’(1981) ಕಥಾ ಸಂಕಲನಗಳು ಗಿರಡ್ಡಿಯವರ ಸಣ್ಣಕಥೆಯ ಒಲವಿನ ದ್ಯೋತಕಗಳಾದರೆ ‘ಮಣ್ಣು’(1976) ಒಂದು ಕಿರು ಕಾದಂಬರಿ. ಕಥಿ, ಕಾವ್ಯ ಅಂತ ಸೃಜನಶೀಲ ಪ್ರತಿಭಾ ಜೋಡಿ ಆಡ್ಕೋತಾಡ್ಕೋತಾ ಗಿರಡ್ಡಿಯವರೊಳಗಿನ ವಿಮರ್ಶಕನೂ ಬೆಳ್ಕೋತಾ ನಡೆದ. ಮುಂದೆ ಕಥಿ, ಕಾವ್ಯ ಹಿಂದಾಗಿ, ವಿಮರ್ಶಕ ಗಿರಡ್ಡಿ ಗೋವಿಂದರಾಜ ಎಂಬ ಮಾನ್ಯತೆಯ ಛಾಪು ಢಾಳಾಗಿ ಬೀಳುವಷ್ಟು ದೊಡ್ಡದಾಗಿ ಬೆಳೆದ. ಗಿರಡ್ಡಿಯವರು ಇಲ್ಲಿಯವರೆಗೂ ಹನ್ನೆರಡು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಗಿರಡ್ಡಿಯವರ ಮೊದಲ ವಿಮರ್ಶಾ ಕೃತಿ ‘ಸಣ್ಣ ಕಥೆಯ ಹೊಸ ಒಲವುಗಳು’ ಅರವತ್ತರ ದಶಕದಲ್ಲಿ ಸಣ್ಣ ಕಥೆ ಕೇಂದ್ರಿತ ಹೊಸ ವಿಮರ್ಶೆ ಮಾರ್ಗಕ್ಕೆ ನಾಂದಿ ಹಾಡಿತು. ಸಣ್ಣ ಕಥೆಗಳನ್ನು ಕುರಿತು ಸಮಗ್ರವಾದ ವಿಮರ್ಶೆಯ ಪ್ರಯತ್ನ ಅಲ್ಲಿಯವರೆಗೂ (ಕುರ್ತಕೋಟಿಯವರ ‘ಯುಗ ಧರ್ಮ ಮತ್ತು ಸಾಹಿತ್ಯ ದರ್ಶನ’ ಹೊರತಾಗಿ) ಹೆಚ್ಚಾಗಿ ಯಾರೂ ಮಾಡಿರಲಿಲ್ಲ. ಕುರ್ತಕೋಟಿಯವರದು ನವೋದಯ ಪರಂಪರೆಗೆ ಸೀಮಿತವಾದರೆ, ಗಿರಡ್ಡಿಯವರದು ಸಂಕಲನದ ಹೆಸರೇ ಸೂಚಿಸುವಂತೆ ಹೊಸ ಒಲವುಗಳತ್ತ ಮುಖ ಮಾಡಿತು. ಅಲ್ಲಿಯವರೆಗೆ ಕಾವ್ಯ ಮತ್ತು ಕಾದಂಬರಿ ಕೇಂದ್ರಿತವಾಗಿದ್ದ ವಿಮರ್ಶೆ ಇದರೊಂದಿಗೆ ಸಣ್ಣಕಥೆಯತ್ತಲೂ ವಿಶೇಷ ಗಮನಹರಿಸಲಾರಂಭಿಸಿತು. ಇದು ಗಿರಡ್ಡಿಯವರಿಂದ ದೊರೆತ ಪ್ರೇರಣೆ. ಹೊಸ ಒಲವಿನಿಂದ ಮುಂದುವರಿದ ಸಣ್ಣಕಥೆಯ ವಿಮರ್ಶೆಯನ್ನು ನಾವು ‘ಮರೆಯಬಾರದ ಹಳೆಯ ಕಥೆಗಳು’ ಸಂಕಲನದಲ್ಲಿ ಕಾಣುತ್ತೇವೆ. ಕನ್ನಡ ಸಣ್ಣ ಕಥೆಯ ಆಮೂಲಾಗ್ರ ವಿಮರ್ಶೆ; ವಸ್ತು, ಶೈಲಿ, ರಚನೆ, ತಂತ್ರ, ವಿನ್ಯಾಸಗಳಲ್ಲಿ ಕನ್ನಡ ಸಣ್ಣ ಕಥೆಯ ಪರಂಪರೆಯನ್ನು ಗುರುತಿಸುವ ಒಂದು ಶಾಸ್ತ್ರೀಯ ಪ್ರಯತ್ನ ಇಲ್ಲಿದೆ. ಸಣ್ಣ ಕಥೆಯಂತೆ ಕಾದಂಬರಿಯ ವಿಮರ್ಶೆಯಲ್ಲೂ ಗಿರಡ್ಡಿಯವರ ಸಾಧನೆ ವಿಶಿಷ್ಟವಾದುದು. ‘ಕಾದಂಬರಿ: ವಸ್ತು ಮತ್ತು ತಂತ್ರ’ ಕೃತಿಯನ್ನು ಈ ಮಾತಿಗೆ ನಿದರ್ಶನವಾಗಿ ನೋಡಬಹುದು.

ಗಿರಡ್ಡಿಯವರ ವಿಮರ್ಶೆಯ ಹಾಸುಬೀಸು ದೊಡ್ಡದು. ಅದು ಜಾನಪದದಿಂದ, ಶಿಷ್ಟ ಅತಿಶಿಷ್ಟದವರಗೆ ತನ್ನ ಕಬಂಧ ಬಾಹುಗಳನ್ನು ಚಾಚಿದೆ. ‘ನವ್ಯ ವಿಮರ್ಶೆ’, ‘ಜಾನಪದ ಕಾವ್ಯ’, ‘ಕಾದಂಬರಿ ವಸ್ತು ಮತ್ತು ತಂತ್ರ’, ‘ಸಾಹಿತ್ಯ ಮತ್ತು ಪರಂಪರೆ’, ‘ನಾಟಕ ಸಾಹಿತ್ಯ ಮತ್ತು ರಂಗಭೂಮಿ’-ಇವೆಲ್ಲ ಕನ್ನಡ ವಿಮರ್ಶೆಯಲ್ಲಿ ಗಿರಡ್ಡಿಯವರಿಗೆ ಮಹತ್ವದ ಸ್ಥಾನ ತಂದುಕೊಟ್ಟಿರುವ ಕೃತಿಗಳು. ‘ವಚನ ವಿನ್ಯಾಸ’ ಇವಕ್ಕೆಲ್ಲ ಕಿರೀಟ ಪ್ರಾಯವಾದ ಕೃತಿ. ವಿಮರ್ಶೆಯಲ್ಲಿ ಗಿರಡ್ಡಿಯವರ ಮೇರು ಕೃತಿ. ವಚನಗಳ ರಾಚನಿಕ ವಿನ್ಯಾಸ, ಆಶಯ, ಅರ್ಥಗಳ ಮೇಲೆ ಹೊಸ ಬೆಳಕು ಚೆಲ್ಲುವ ಗಂಭೀರ ಅಧ್ಯಯನ ಇದಾಗಿದೆ.ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅರ್ಥಪೂರ್ಣ ಕೊಡುಗೆ ನೀಡಿರುವ ವಚನ ಸಾಹಿತ್ಯವು ಸಾಹಿತ್ಯಕವಾಗಿಯೂ ಅಷ್ಟೇ ಮಹತ್ವದ ಕೊಡುಗೆ ನೀಡಿದೆ ಎಂದು ಗಿರಡ್ಡಿ ವಚನ ಸಾಹಿತ್ಯ ಅಧ್ಯಯನದಲ್ಲಿ ಪ್ರತಿಪಾದಿಸುತ್ತಾರೆ.

‘ವಚನ ವಿನ್ಯಾಸ’ದಂತೆ ಗಿರಡ್ಡಿಯವರ ಮತ್ತೊಂದು ಮಹತ್ವದ ವಿಮರ್ಶಾ ಕೃತಿ ‘ಸಾತತ್ಯ’. ಕನ್ನಡ ವಿಮರ್ಶೆಯ ಹಲವು ಮುಖಗಳನ್ನು ಪರಿಚಯಿಸುವ ಲೇಖನಗಳುಳ್ಳ ಈ ಕೃತಿಯಲ್ಲಿ ‘ಪಠ್ಯ ಕೇಂದ್ರಿತ ನಿಲುವಿನ ಕಡೆಗೆ’ ವಿಮರ್ಶೆಯನ್ನು ಕೊಂಡೊಯ್ಯುವ ಪ್ರಯತ್ನವನ್ನು ಗಿರಡ್ಡಿ ಮಾಡಿದ್ದಾರೆ. ವಿಮರ್ಶಕನಾಗಿ ಗಿರಡ್ಡಿಯವರ ಸ್ಪಷ್ಟತೆ, ಅಧ್ಯಯನಶೀಲತೆ, ನಿರ್ಭಾವುಕತೆ ಹಾಗೂ ಅನನ್ಯತೆಯನ್ನು ಇಲ್ಲಿನ ಲೇಖನಗಳಲ್ಲಿ ಕಾಣಬಹುದು ಎಂಬುದು ಕೇಶವ ಶರ್ಮರು ಅಭಿಪ್ರಾಯಪಡುತ್ತಾರೆ. ಕಥೆ, ಕಾವ್ಯಗಳಂತೆ ಗಿರಡ್ಡಿಯವರ ವಿಮರ್ಶೆಯ ಆಸಕ್ತಿಯ ಇನ್ನೊಂದು ತಂಗುದಾಣ ರಂಗಭೂಮಿ. ನಾಟಕ ಮತ್ತು ರಂಗಭೂಮಿ ಕುರಿತು ಅವರು ‘ಇಂಗ್ಲೆಂಡಿನ ರಂಗಭೂಮಿ’ (1983) ಮತ್ತು ‘ನಾಟಕ ಸಾಹಿತ್ಯ ಮತ್ತು ರಂಗಭೂಮಿ’(1989) ಕೃತಿಗಳನ್ನು ರಚಿಸಿದ್ದಾರೆ. ಶ್ರೀರಂಗ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಮೊದಲಾದ ನಮ್ಮ ಶ್ರೇಷ್ಠ ನಾಟಕಕಾರರ ಕೃತಿ ವಿಮರ್ಶೆಯಲ್ಲದೆ ಜಾನಪದ- ವೃತ್ತಿ-ಹವ್ಯಾಸಿ ನರಂಗಭೂಮಿಯ ಪ್ರಯೋಗಗಳು ಮತ್ತು ಹವ್ಯಾಸಿ ರಂಗಭೂಮಿಯ ಹೊಸ ಒಲವುಗಳನ್ನು ವಿಶ್ಲೇಷಿಸುವ ಹಲವಾರು ಲೇಖನಗಳನ್ನೂ ಅವರು ಬರೆದಿದ್ದಾರೆ.

ವಿಶೇಷವಾಗಿ ಗಿರಡ್ಡಿ ಗೋವಿಂದರಾಜರ ವಿಮರ್ಶೆಯ ಮುಖ್ಯ ಲಕ್ಷಣವೆಂದರೆ ಸಂವೇದನಾಶೀಲತೆ. ಅವರು ತಮ್ಮ ಸಮಗ್ರ ವಿಮರ್ಶೆಯ ಮುನ್ನುಡಿಯಲ್ಲಿ ಹೇಳಿರುವಂತೆ, ಸಾಹಿತ್ಯದ ಬಗೆಗೆ ನಿಜವಾದ ಸಂವೇದನಾಶೀಲತೆ ಇಲ್ಲದಿದ್ದರೆ ಶುಷ್ಕ ಪಾಂಡಿತ್ಯ ಕೇವಲ ಹೊರೆಯಾಗಿಬಿಡುತ್ತದೆ. ಸಾಹಿತ್ಯ ನಿರ್ಮಿತಿಯ ವ್ಯಕ್ತಿಗತ ಮತ್ತು ಕಾಲಗತ ಸಂವೇದನಾಶೀಲತೆಯ ಹಿನ್ನೆಲೆಯಲ್ಲಿ ಸೃಜನಶೀಲ ಕೃತಿಯೊಂದನ್ನು ವಿಶ್ಲೇಷಿಸುವುದು ಗಿರಡ್ಡಿಯವರ ವಿಮರ್ಶಾ ವಿಧಾನವಾಗಿದೆ. ಈ ಕ್ರಮದಲ್ಲಿ ಅವರು, ವಿಮರ್ಶೆಯಲ್ಲಿ ಇತ್ತೀಚೆಗೆ ಅಪರೂಪವಾಗುತ್ತಿರುವ ಅಧ್ಯಯನಶಿಸ್ತನ್ನು ಪಾಲಿಸಿಕೊಂಡು ಬಂದಿರುವುದು ಗಮನಾರ್ಹವಾದ ಸಂಗತಿ. ಒಂದು ಕೃತಿಯನ್ನು ವಿಮರ್ಶೆಗೆತ್ತಿಕೊಂಡಾಗ ಈವರೆಗೆ ಅ ಕೃತಿಯ ಬಗ್ಗೆ ಬಂದಿರುವ ವಿಮರ್ಶೆಯನ್ನು ತಪಶೀಲು ಮಾಡುವುದು, ಚರ್ಚಿಸುವುದು, ಪುನರ್ ಮೌಲ್ಯಮಾಪನದ ಸಾಧ್ಯತೆಗಳನ್ನು ಪರಾಮರ್ಶಿಸುವುದು ಗಿರಡ್ಡಿಯವರ ವಿಮರ್ಶೆಯ ಮತ್ತೊಂದು ಮುಖ್ಯ ಲಕ್ಷಣವಾಗಿದೆ.

ವಿಮರ್ಶೆಯಲ್ಲದೆ ಗಿರಡ್ಡಿಯವರ ಮತ್ತೊಂದು ಸಾಧನೆ ಗ್ರಂಥ ಸಂಪಾದನೆ. ಸಂಶೋಧನಾ ಸಾಮರ್ಥ್ಯ, ಪಾಂಡಿತ್ಯ, ಸೃಜನಶೀಲ ಪ್ರತಿಭೆ ಮತ್ತು ವಿಮರ್ಶಾ ಪ್ರಜ್ಞೆ ಇವೆಲ್ಲವನ್ನೂ ಬೇಡುವ ಗ್ರಂಥ ಸಂಪಾದನೆ ಗಿರಡ್ಡಿಯವರಿಗೆ ಹೇಳಿ ಮಾಡಿಸಿದ ಕ್ಷೇತ್ರ. ಅವರ ಹಲವಾರು ಸಂಪಾದಿತ ಕೃತಿಗಳಲ್ಲಿ ಈ ಪರಿಯ ಕೆಲಸವನ್ನು ನಾವು ಕಾಣಬಹುದಾಗಿದೆ.

ಗಿರಡ್ಡಿ ಗೋವಿಂದರಾಜರ ಕೆಲಸದಷ್ಟೇ ಎತ್ತರದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ.

 ಕೇಂದ್ರ ಸಾಹಿತ್ಯ ಅಕಾಡಮಿ, ಕರ್ನಾಟಕ ಸಾಹಿತ್ಯ ಅಕಾಡಮಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಸಾಲುಸಾಲಾಗಿ. ‘ತಲಸ್ಪರ್ಶಿ’ ಅಭಿಮಾನಿಗಳು ಅರ್ಪಿಸಿರುವ ಅಭಿನಂದನಾ ಗ್ರಂಥ. ಗಿರಡ್ಡಿ ಗೋವಿಂದರಾಜ ಸ್ವಭಾವತಃ ಅಂತರ್ಮುಖಿಗಳು. ಚಿಪ್ಪಿನೊಳಗಣ ಕೂರ್ಮ ಅವರು. ಹೊರಕ್ಕೆ ಎಳೆದು ತರುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಆತ್ಮೀಯ ವಲಯಗಳಲ್ಲಿ ಪ್ರಾಂಜಲ ಮನಸ್ಸಿನಿಂದ ಮಾತನಾಡುತ್ತಿದ್ದರು. ದೇಶದಲ್ಲಿನ ಇತ್ತೀಚಿನ ಕೆಲವು ಬೆಳವಣಿಗೆಗಳಿಂದಾಗಿ ಅವರು ಹೆಚ್ಚು ಅಂತರ್ಮುಖಿಯಾಗಿದ್ದರು. ಎಡ-ಬಲ ರಾಜಕೀಯ/ಸಾಂಸ್ಕೃತಿಕ ವಿದ್ಯಮಾನಗಳು ಅವರನ್ನು ಕಂಗೆಡಿಸಿದ್ದೂ ಉಂಟು.

ಎಡ-ಬಲಗಳ ಪರಾಕಾಷ್ಠೆಗಳಿಂದ ಬಿಡಿಸಿಕೊಂಡು, ರಾಜಕೀಯವನ್ನು ದೈನಂದಿನ ಲೌಕಿಕಕ್ಕೂ, ಧರ್ಮವನ್ನು ಆಧ್ಯಾತ್ಮಿಕಕ್ಕೂ ನೆಮ್ಮಿಕೊಂಡು ಮಧ್ಯಮದಲ್ಲಿ ಬದುಕನ್ನು ಹಸನಾಗಿಸಿಕೊಳ್ಳಲಿಚ್ಛಿಸುವ ಲಕ್ಷಾಂತರ ಮಂದಿಯ ಕನಸುಗಳ ಬಗ್ಗೆಯೂ ಅವರು ಕಾಳಜಿವಹಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಕಂಡುಬರುತ್ತಿರುವ ಅಸಹಿಷ್ಣುತೆಯ ವಾತಾವರಣ ಅವರನ್ನು ಅಲುಗಾಡಿಸಿತ್ತು. ಪ್ರೊ. ಎಂ. ಎಂ. ಕಲಬುರ್ಗಿಯವರ ಹತ್ಯೆ ಕುರಿತ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ಅವರನ್ನು ಮತ್ತು ಕವಿ ಕಣವಿಯವರನ್ನು ಪರಿವಾರದವರು ಗುರಿಮಾಡಿಕೊಂಡಿದ್ದರು. ನಂತರ ಸರಕಾರ ಅವರಿಗೆ ಪೊಲೀಸ್ ಭದ್ರತೆ ಒದಗಿಸಿತ್ತು. ಇವೆಲ್ಲ ಅವರನ್ನು ಹೈರಾಣಾಗಿಸಿತ್ತು. ಪೊಲೀಸ್ ಭದ್ರತೆ ಹೇಗೆ ತಮ್ಮ ಸ್ವಾತಂತ್ರ್ಯಕ್ಕೆ ಮುಳುವಾಯಿತೆಂಬುದನ್ನು ಅವರು ಈ ಅಂಕಣಕಾರನ ಜೊತೆ ಈಚಿನ ದಿನಗಳಲ್ಲಿ ಹಂಚಿಕೊಂಡಿದ್ದುಂಟು. ವ್ಯಕ್ತಿ ಸ್ವಾತಂತ್ರ್ಯಕ್ಕೆ ಬಾಧಕವಾದ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಅವರು ನೊಂದಿದ್ದರು. ಈ ಮಧ್ಯಮ ಪರಿಕಲ್ಪನೆಯ ಬಗ್ಗೆ ಬರೆಯುವಂತೆ ನಾನು ಅವರನ್ನು ಒಂದೆರಡು ಬಾರಿ ಒತ್ತಾಯಿಸಿದ್ದುಂಟು. ಬರೆಯುವ ಮನಸ್ಸಿದೆ ಎನ್ನುತ್ತಿದ್ದರು. ಕಾಲ ಕೂಡಿ ಬರಲಿಲ್ಲವೇನೂ? ಕಾಲ ಕಾಯುವುದಿಲ್ಲ.

ಗೆಳೆಯರು ಒಂದುಕಡೆ ಸೇರಿ ಚರ್ಚಿಸುವುದು, ಸೌಹಾರ್ದ ಜಗಳವಾಡುವುದು, ತಕರಾರುಗಳನ್ನು ತೆಗೆಯುವುದು ಧಾರವಾಡದ ಮಣ್ಣಿನ ಗುಣವೇ ಇದ್ದೀತು. ಇದು ಬೇಂದ್ರೆ, ಶಂಬಾ ಕಾಲದಿದಂದ ನಡೆದು ಬಂದ ರೂಢಿ. ಇಂಥ ಚರ್ಚೆಗೆ ಸಾಧನ ಕೇರಿಯ ಓಣಿಯೂ ಆದೀತು ಅಥವಾ ಜಿ.ಬಿ.ಯವರ ಮನೋಹರ ಗ್ರಂಥ ಮಾಲೆಯ ಅಟ್ಟವೂ ಆದೀತು. ಇತ್ತೀಚಿನ ವರ್ಷಗಳಲ್ಲಿ ಗಿರಡ್ಡಿ ತಾಳಿದ ಆಸಕ್ತಿಯಿಂದಾಗಿ ಧಾರವಾಡದ ಗೆಳೆಯರ ಗುಂಪು ಮತ್ತೆ ಕ್ರಿಯಾಶೀಲವಾಗಿತ್ತು. ಇದೊಂದು ಸಾಂಸ್ಥಿಕ ಸ್ವರೂಪವನ್ನು ಪಡೆದುಕೊಂಡು ವಾರ್ಷಿಕ ‘ಸಾಹಿತ್ಯ ಸಂಭ್ರಮ’ವಾಗಿ ಸಾಹಿತಿ-ಕಲಾವಿದರ ಸಮಾವೇಶ ಶುರುವಾಯಿತು. ‘ಸಾಹಿತ್ಯ ಸಂಭ್ರಮ’ ಐದಾರು ವರ್ಷಗಳಿಂದ ನಡೆದು ಬಂದಿದೆ. ಇದರ ಅಧ್ವರ್ಯು ಗಿರಡ್ಡಿ ಗೋವಿಂದರಾಜ. ಮೂರು ದಿನಗಳ ಈ ‘ಸಂಭ್ರಮ’ ಸಾಹಿತ್ಯ ಸಂಸ್ಕೃತಿ ಚರ್ಚೆಗೆ ಮುಕ್ತ ವೇದಿಕೆಯಾಗಬೇಕೆಂಬುದು ಗಿರಡ್ಡಿಯವರ ಮಹದಾಶಯವಾಗಿತ್ತು.ಅದಕ್ಕಾಗಿ ಅವರು ಪ್ರತಿವರ್ಷ ಸಾಕಷ್ಟು ಶ್ರಮಿಸುತ್ತಿದ್ದರು. ಇವೆಲ್ಲದರ ಮಧ್ಯೆ ಇದ್ದುಕೊಂಡೂ ಗಿರಡ್ಡಿ ತಮ್ಮ ಸಾಹಿತ್ಯಕ ನೀತಿನಿಲುವುಗಳಿಂದ ಎಂದೂ ರಾಜಿಮಾಡಿಕೊಂಡವರಲ್ಲ. ಗಿರಡ್ಡಿ ಗೋವಿಂದರಾಜ ಈಗಿಲ್ಲ. ಅವರು ಇನ್ನಿಲ್ಲ ಎನ್ನುವುದು ಎಂದಿನ ಕ್ಲೀಷೆಯಾದೀತು. ಕನ್ನಡ ಸಾಹಿತ್ಯ ಸಂಭ್ರಮದಲ್ಲಿ ಅವರ ಸೊಲ್ಲು ಇದ್ದೇ ಇರುತ್ತದೆ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News