ರಂಗಭೂಮಿ ಎನ್ನುವುದು ನಮ್ಮದೇ ಪ್ರತಿಬಿಂಬ

Update: 2018-05-20 05:41 GMT

ಪ್ರಸಾದ್ ರಕ್ಷಿದಿ ಕರ್ನಾಟಕದ ನಾಟಕ ಕ್ಷೇತ್ರದ ಹೆಸರಾಂತ ಕಲಾವಿದ-ರಂಗ ನಿರ್ದೇಶಕರು.ರಂಗಭೂಮಿಯಲ್ಲದೆ ಬರವಣಿಗೆ, ಪರಿಸರ, ಸಾಕ್ಷರತೆ ಹಾಗೂ ಕೃಷಿ ಕಾರ್ಮಿಕರ ನಡುವೆಯೂ ಹಲವು ದಶಕಗಳಿಂದ ಕೆಲಸ ಮಾಡುತ್ತಾ ಬಂದಿದ್ದಾರೆ. ಜನರ ಬದುಕನ್ನು ಹತ್ತಿರದಿಂದ ನೋಡುತ್ತಾ, ಜನರೊಂದಿಗೆ ಬದುಕುತ್ತಾ ಆ ಮೂಲಕ ಪಡೆಯುವ ತಿಳುವಳಿಕೆಯನ್ನು ವಿವೇಕವಾಗಿಸಿ ಜೊತೆಗೆ ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಂಡು ಬರುತ್ತಿರುವ ಪ್ರಸಾದ್ ರಕ್ಷಿದಿ ಓರ್ವ ಅಪರೂಪದ ವ್ಯಕ್ತಿ. ಸಮಾನ ಮನಸ್ಕ ಮಿತ್ರರೊಂದಿಗೆ ಸದಾ ಕ್ರಿಯಾಶೀಲರಾಗಿರುವ ಪ್ರಸಾದ್‌ರ ಜೀವನ ದೃಷ್ಟಿ ಹಾಗೂ ಗ್ರಹಿಕೆಯನ್ನು ಅನಾವರಣಗೊಳಿಸುವ ಸಂದರ್ಶನ ಇದು.

ರಂಗ ಭೂಮಿಯೆಂದರೆ ಅದು ಸಾಮುದಾಯಿಕ ಕಲೆ ಮತ್ತು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಯೇ ಇರಬೇಕು, ಆ ದೃಷ್ಟಿಯಿಂದ ಅದನ್ನು ಎಂದೂ ವೃತ್ತಿಯಾಗಿಯೇ ಸ್ವೀಕರಿಸದೆ ನಮ್ಮ ಬದುಕಿನ ತುಡಿತದ ಫಲವಾಗಿ ಇರಬೇಕೆನ್ನುವುದು, ಇದುವರೆಗಿನ ನಮ್ಮ ಎಲ್ಲ ಚಟುವಟಿಕೆಗಳು ಹಾಗೆಯೇ ನಡೆದು ಬಂದಿವೆ, ನಮ್ಮ ರಂಗತಂಡದಲ್ಲಿ, ಇಂದಿಗೂ ಕೃಷಿ ಕಾರ್ಮಿಕರು, ಬಡಗಿಗಳು, ಗಾರೆ ಕೆಲಸದವರು, ಟೈಲರ್, ಸಣ್ಣ ರೈತರು, ಪೌರ ಕಾರ್ಮಿರು, ಸಣ್ಣ ಉದ್ಯೋಗಿಗಳು ಇದ್ದಾರೆ.

ನಿಮ್ಮ ಹಾಗೂ ರಂಗಭೂಮಿಯ ನಂಟು ಆರಂಭವಾದ ಬಗೆ ಹೇಗೆ?
-ಶಾಲಾ ದಿನಗಳಲ್ಲಿ ಸ್ಕೂಲ್ ಡೇ ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ, ಮಿಡ್ಲ್ ಸ್ಕೂಲ್‌ನಲ್ಲಿ ಚಿಕ್ಕ ಮೊಗಯ್ಯ ಅಂತ ಒಬ್ರು ಮೇಷ್ಟ್ರು ಇದ್ರು ಅವರು ಐದನೇ ಕ್ಲಾಸಲ್ಲಿ ನಾಟಕದಲ್ಲಿ ಪಾತ್ರ ಮಾಡಿಸಿದರು. ಹಾಗೇ ಓದಿನ ಹುಚ್ಚನ್ನೂ ಹತ್ತಿಸಿದರು, ನಂತರ ಹೈಸ್ಕೂಲಿನಲ್ಲಿ ವಿಶ್ವನಾಥ ರಾವ್ ಅಂತ ಒಬ್ಬರು ಹೆಡ್ ಮಾಸ್ತರು ಆ ಕಾಲದಲ್ಲೇ ಶೇಕ್ಸ್‌ಪಿಯರ್ ಇಬ್ಸೆನ್ ಬಗ್ಗೆ ಪಠ್ಯೇತರ ವಿಷಯವಾಗಿ ಓದಿಸುತ್ತಿದ್ದರು. ನಂತರ ಉಡುಪಿ ಯಲ್ಲಿ ಕಾಲೇಜು ದಿನಗಳಲ್ಲಿ ರಾಮದಾಸ್ ಉದ್ಯಾವರ ಮಾಧವಾಚಾರ್ಯ, ಬಿ.ವಿ. ಕಾರಂತ ರಂಥವರ ನಾಟಕಗಳನ್ನು ನೋಡುತ್ತ ಕಲಿಯುವ ಅವಕಾಶ ದೊಕಿತು.

ರೈತ ಕುಟುಂಬದ ನಿಮ್ಮನ್ನು ರಂಗಭೂಮಿ ಆಕರ್ಷಿಸಿದ್ದು ಯಾವ ಸ್ವರೂಪದಲ್ಲಿ?
-ನಮ್ಮದು ರೈತ ಕುಟುಂಬವಾದರೂ ಜಮೀನೆಲ್ಲ ನನ್ನ ಅಜ್ಜನ ಕಾಲಕ್ಕೇ ಮುಗಿದಿತ್ತು, ಜೀವನೋಪಾಯಕ್ಕೆ ಕೊಡಗಿನಿಂದ ಬಂದು ನನ್ನ ತಂದೆ ಕಾಫಿ ತೋಟವೊಂದರಲ್ಲಿ ಉದ್ಯೋಗಿಯಾಗಿದ್ದರು, ನಾನು ಕೂಡಾ ವಿದ್ಯಾಭ್ಯಾಸ ಮುಗಿಸಿ ಅದೇ ಸಂಸ್ಥೆಯಲ್ಲಿ ದಿನಗೂಲಿ ನೌಕರನಾಗಿ ಸೇರಿದೆ. ಕಾಲೇಜು ದಿನಗಳಲ್ಲೇ ಎಡಪಂಥೀಯ ವಿಚಾರಧಾರೆಯಿಂದ ಆಕರ್ಷಿತನಾಗಿದ್ದೆ. ಸಮುದಾಯ ಜಾಥಾವೊಂದರಲ್ಲಿ ಭಾಗವಹಿಸಿದ್ದೆ. ಹಾಗಾಗಿ ಹಳ್ಳಿಯಲ್ಲಿ ಕಾರ್ಮಿಕ ಸಂಘಟನೆ ಪ್ರಾರಂಭಿಸಿದೆ.

ನಿಮ್ಮ ಸಂಘ ಆರಂಭಿಸಿದ ಕಾಲಘಟ್ಟದ ಬಗ್ಗೆ ಹೇಳಿ
-1975-76ರ ಸುಮಾರಿಗೆ ನಾನು ಊರಿಗೆ ಬಂದೆ. ತೋಟ ಕಾರ್ಮಿಕರು ಮತ್ತು ಮಕ್ಕಳು ಯಾರಿಗೂ ಅಕ್ಷರಾಭ್ಯಾಸ ಇರಲಿಲ್ಲ. ಕಾಟಾಚಾರಕ್ಕೆ ಒಂದೆರಡು ಮಕ್ಕಳು ಶಾಲೆಗೆ ಹೋಗಿದ್ದರು, ದೊಡ್ಡವರು ಮತ್ತು ಮಕ್ಕಳನ್ನು ಜೊತೆಯಾಗಿಯೇ ಸೇರಿಸಿಕೊಂಡು ಸಂಜೆ ಶಾಲೆ ಪ್ರಾರಂಭಿಸಿದೆ, ಯಾವುದೇ ಪಠ್ಯ ಪುಸ್ತಕವೂ ಇರಲಿಲ್ಲ, ಅಕ್ಷರಾಭ್ಯಾಸ ಮಾಡಿಸುತ್ತ, ಅವರ ನಿತ್ಯದ ಅನುಭವಗಳನ್ನು ಕುರಿತ ಓದು, ಬರಹ, ಅವರ ದಿನ ಗೂಲಿಯನ್ನು ಲೆಕ್ಕಹಾಕುವುದು ಇತ್ಯಾದಿ ಕಲಿಸುತ್ತ. ಸಿನೆಮಾ ಹಾಡುಗಳನ್ನು ಬರೆದುಕೊಳ್ಳುವಂತೆ ಮಾಡುತ್ತ ಶಾಲೆ ಮುಂದುವರಿದಿತ್ತು. ನಿಧಾನವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಪ್ರಯತ್ನ ಮಾಡಿದೆ. ಆ ಸಮಯದಲ್ಲೇ ಅವರಿಗೆ ಒಂದು ನಾಟಕ ಕಲಿಸಿದೆ. 1978ರಲ್ಲಿ ಅದಕ್ಕಾಗಿ ‘ಕಾರ್ಮಿಕ ಮಿತ್ರ ಸಂಘ’ ಅಂತ ಒಂದು ಹೆಸರಿಟ್ಟುಕೊಂಡೆವು. ನಾಟಕ ತುಂಬ ಚೆನ್ನಾಗಿ ಆಗಿ ಕಾರ್ಮಿಕರಲ್ಲಿ ಆತ್ಮ ವಿಶ್ವಾಸವನ್ನು ತುಂಬಿತು. ನಾವೂ ಕೂಡಾ ಇತರರಂತೆ ಏನನ್ನಾದರೂ ಸಾಧಿಸಹುದೆಂಬ ಧೈರ್ಯವನ್ನು ತಂದು ಕೊಟ್ಟಿತು. ಮುಂದೆ ನಮ್ಮ ಚಟುವಟಿಕೆಯನ್ನು ನಾವು ಕೆಲಸ ಮಾಡುತ್ತಿದ್ದ ತೋಟದ ಹೊರಕ್ಕೂ ವಿಸ್ತರಿಸಿಕೊಂಡೆವು. ಆಗ ನಮಗೆ ಒಂದು ಸಂಘಟನೆಯ ಅಗತ್ಯ ಕಂಡುಬಂತು ಹಾಗೆ ಸ್ಥಾಪಿಸಿಕೊಂಡದ್ದು ‘ಜೈ ಕರ್ನಾಟಕ ಸಂಘ ಬೆಳ್ಳೇಕೆರೆ’ ಅದು 1988 ರಲ್ಲಿ. ನಂತರ ಅದು ವಿಸ್ತಾರವಾಯಿತು.

ಕಲಾಮಂದಿರ ಕಟ್ಟುವ ಕಲ್ಪನೆ ಬಂದದ್ದು , ಹಾಗೂ ಅದರ ಅನುಭವವನ್ನ್ನು ವಿವರಿಸುತ್ತೀರಾ?
-ನಮ್ಮ ‘ಜೈ ಕರ್ನಾಟಕ ಸಂಘ’ ಸ್ಥಾಪನೆಯಾದ ನಂತರ ನಮ್ಮ ರಂಗ ಚಟುವಟಿಕೆ ಮಾತ್ರವಲ್ಲ ಇತರ ಸಾಮಾಜಿಕ ಚಟುವಟಿಕೆಗಳೂ ಹೆಚ್ಚಾದವು. ರಂಗ ತರಬೇತಿ ಶಿಬಿರಗಳಾದವು. ನಾಟಕೋತ್ಸವಗಳಾದವು, ನಮ್ಮ ತಂಡವೇ ರಾಜ್ಯಾದ್ಯಂತ ಪ್ರದರ್ಶನ ನೀಡಲಾರಂಭಿಸಿತು, ಪ್ರಶಸ್ತಿ ಮನ್ನಣೆಗಳು ಬಂದುವು. ಪರಿಸರದ ಬಗ್ಗೆ, ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆವು, ನಮ್ಮೂರಿನಲ್ಲೇ ಒಂದು ಸರಕಾರಿ ಶಾಲೆಯನ್ನು ತಂದೆವು. ಸಾಕ್ಷರತಾ ಅಂದೋಲನ. ಕೃಷಿ ಸಂಬಂಧದ ಅನೇಕ ಕಾರ್ಯಕ್ರಮಗಳಾದುವು. ನಮ್ಮ ಸಂಘದ ಸದಸ್ಯರು ಸ್ಥಳೀಯ ಚುನಾವಣೆಗಳಲ್ಲೂ ಭಾಗವಹಿಸಿ ಆಯ್ಕೆಯಾದರು. ಇವೆಲ್ಲ ಚಟುವಟಿಕೆಗಳಿಗೆ ನಮ್ಮೂರ ಶಾಲೆಯ ಆವರಣವೇ ನಮಗೆ ಸ್ಥಳವಾಗಿತ್ತು. ಆದರೆ ಮುಂದೆ ನಮಗೆ ಶಾಲಾ ಅವರಣದಲ್ಲಿ ಕೆಲಸ ಮಾಡಲು ಕಾನೂನಾತ್ಮಕ ತೊಡಕುಗಳು ಪ್ರಾರಂಭವಾದವು. ಆಗ ನಮ್ಮದೇ ಜಾಗ ಮತ್ತು ರಂಗ ಮಂದಿರ ಬೇಕೆಂಬ ಯೋಜನೆ ಪ್ರಾರಂಭಿಸಿದೆವು.

ಮೊದಲಿಗೆ ನಮಗೆ ಸ್ವಂತ ಸ್ಥಳವೇ ಇರಲಿಲ್ಲ. ನಾವೊಂದಷ್ಟು ಗೆಳೆಯರು ಸೇರಿ ಒಂದು ಬಿಳಿಯ ಹಾಳೆಯಲ್ಲಿ ಸ್ಥಳಕ್ಕಾಗಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪನವರಿಗೆ ಒಂದು ಅರ್ಜಿಯನ್ನು ಬರೆದು, ನಮ್ಮ ಚಟುವಟಿಕೆಗಳ ಮಾಹಿತಿಗಾಗಿ ಒಂದಷ್ಟು ಪತ್ರಿಕಾ ವರದಿಗಳ ತುಣುಕನ್ನು ಇಟ್ಟು, ಅಂಚೆಯ ಮುಖಾಂತರ ಕಳುಹಿಸಿಕೊಟ್ಟೆವು. ಆಗ ನಮ್ಮಲ್ಲಿ ಲೆಟರ್ ಹೆಡ್ ಕೂಡಾ ಇರಲಿಲ್ಲ. ಆದರೆ ಬಂಗಾರಪ್ಪನವರು ಆ ಅರ್ಜಿಯನ್ನೇ ಸ್ವೀಕರಿಸಿ ನಮಗೆ ಊರಿನಲ್ಲಿ ಒಂದು ಎಕರೆ ಸ್ಥಳವನ್ನು ಮಂಜೂರು ಮಾಡಿಕೊಟ್ಟರು. ಆ ಸ್ಥಳದಲ್ಲೇ ಈಗ ನಮ್ಮ ಎಲ್ಲ ಚಟುವಟಿಕೆಗಳೂ ನಡೆಯುತ್ತಿವೆ. ರಂಗ ವುಂದಿರ ಸಂಕೀರ್ಣ ನಿರ್ಮಾಣವಾಗುತ್ತಿದೆ.

ನಿಮ್ಮ ಪರಿಸರದಲ್ಲಿನ ಸಂಘಟನೆಯ ಏಳುಬೀಳುಗಳ ಬಗ್ಗೆ ತಿಳಿಸಿ
-ನಮ್ಮ ಚಟುವಟಿಕೆ ಹೆಚ್ಚಾದಂತೆ ಅನುಕೂಲ ಅನನುಕೂಲ ಎರಡೂ ಇದ್ದದ್ದೇ, ನಾವೊಂದಷ್ಟು ಜನರು ರೈತ ಚಳವಳಿಯಲ್ಲಿ ನೇರವಾಗಿ ಭಾಗಿಗಳಾಗಿದ್ದವು, ವೈಯಕ್ತಿಕವಾಗಿ ನಾನು ದಲಿತ ಚಳವಳಿಯ ಜೊತೆ ಹೆಚ್ಚು ಗುರುತಿಸಿಕೊಂಡಿದ್ದೆ. ಹೀಗಾಗಿ ಇದೂ ಕೂಡಾ ನಮ್ಮ ರಂಗ ಚಟುವಟಿಕೆಯ ಮೇಲೆ ಮಾತ್ರವಲ್ಲ ಅನೇಕ ಬಾರಿ ಊರಿನ ಮುಖ್ಯಸ್ಥರ ವಿರೋಧಕ್ಕೂ ಕಾರಣವಾಗುತ್ತಿತ್ತು, ಜಾತಿ ಸಂಘರ್ಷಕ್ಕೂ ಎಡೆಯಾಗುತ್ತಿತ್ತು ಇದನ್ನೆಲ್ಲ ನಿಭಾಯಿಸಿಕೊಂಡು ಮುಂದುವರಿಯಬೇಕಾಗುತ್ತಿತ್ತು. ಹಣ ಕಾಸಿನ ಸಮಸ್ಯೆಯಂತೂ ನಿರಂತರವಾಗಿತ್ತು. ಆದರೆ ಆಗಲೂ ಕೆಲವರು ಸಹಾಯ ಮಾಡುವವರಿದ್ದರು. (ಇವೆಲ್ಲ ವನ್ನೂ ನನ್ನ ‘‘ಬೆಳ್ಳೇಕರೆ ಹಳ್ಳಿ ಥೇಟರ್ ಒಂದು ಗ್ರಾಮೀಣ ರಂಗ ಭೂಮಿ ಆತ್ಮ ಕಥನ’’ ಎಂಬ ಪುಸ್ತಕದಲ್ಲಿ ಬರೆದಿದ್ದೇನೆ.)

ನಿಮ್ಮ ವೈಯಕ್ತಿಕ ಬದುಕು ಹಾಗೂ ಸಂಘಟನೆಯ ಸರಿದೂಗುವಿಕೆ ಸಾಧ್ಯವಾಯಿತೇ?
-ಹೌದು ಅದು ಸಾಧ್ಯವಾದ್ದರಿಂದಲೇ ಇದೆಲ್ಲ ಸಾಧ್ಯವಾಯಿತು. ಮನೆಯಲ್ಲಿ ಕೂಡಾ ಅಷ್ಟೆ. ನನ್ನ ಪತ್ನಿಗೂ ರಂಗಭೂಮಿಯ ಹಿನ್ನೆಲೆ ಇದ್ದುದರಿಂದ ಸಮಸ್ಯೆಯಾಗಲಿಲ್ಲ.

ನಿಮ್ಮ ತಾತ್ವಿಕ ನಿಲುವು ರಂಗಭೂಮಿ ಮೂಲಕ ಸಾಕಾರಗೊಂಡಿತಾ?
-ರಂಗ ಭೂಮಿಯೆಂದರೆ ಅದು ಸಾಮುದಾಯಿಕ ಕಲೆ ಮತ್ತು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಯೇ ಇರಬೇಕು, ಆ ದೃಷ್ಟಿಯಿಂದ ಅದನ್ನು ಎಂದೂ ವೃತ್ತಿಯಾಗಿಯೇ ಸ್ವೀಕರಿಸದೆ ನಮ್ಮ ಬದುಕಿನ ತುಡಿತದ ಫಲವಾಗಿ ಇರಬೇಕೆನ್ನುವುದು, ಇದುವರೆಗಿನ ನಮ್ಮ ಎಲ್ಲ ಚಟುವಟಿಕೆಗಳು ಹಾಗೆಯೇ ನಡೆದು ಬಂದಿವೆ. ನಮ್ಮ ರಂಗತಂಡದಲ್ಲಿ, ಇಂದಿಗೂ ಕೃಷಿ ಕಾರ್ಮಿಕರು, ಬಡಗಿಗಳು, ಗಾರೆ ಕೆಲಸದವರು, ಟೈಲರ್, ಸಣ್ಣ ರೈತರು, ಪೌರ ಕಾರ್ಮಿಕರು, ಸಣ್ಣ ಉದ್ಯೋಗಿಗಳು ಇದ್ದಾರೆ. ನಮ್ಮ ಈ ಎಲ್ಲ ಉದ್ಯೋಗಗಳನ್ನು ಮಾಡುತ್ತಲೇ ಉಳಿದ ಹವ್ಯಾಸಗಳನ್ನು ಮುಂದುವರಿಸುತ್ತಾ ಬಂದಿದ್ದೇವೆ.

ರಂಗವೇದಿಕೆ ಮೂಲಕ ನೀವು ಇಲ್ಲಿಯವರೆಗೆ ಸಮಾಜಕ್ಕೆ ತಲುಪಿಸಿದ್ದೇನು?
-ನಾವು ತಲುಪಿಸಿದ್ದು ಎನ್ನುವುದಕ್ಕಿಂತ ಪಡೆದದ್ದು ಎನ್ನಬಹುದು, ಒಂದು ಹಳ್ಳಿಯಲ್ಲಿ ಒಂದಷ್ಟು ಜನರು ಸೇರಿ ನಮ್ಮ ಸಾಂಸ್ಕೃತಿಕ ಬದುಕನ್ನು ರೂಪಿಸುತ್ತಾ ಹೋಗುವುದಿದೆಯಲ್ಲ ಅದು ನಾವು ಪಡೆದದ್ದು.

ನಿಮ್ಮ ರಂಗಪಯಣ ಹಾಗೂ ಸಂಘಟನೆಗೆ ದಕ್ಕಿದ ಸ್ಪಂದನೆ, ಗೆಳೆಯರು..?
-ನಮ್ಮ ರಂಗ ಪಯಣಕ್ಕೆ ದಕ್ಕಿದ ಸ್ಪಂದನೆಯೂ ಅದ್ಭುತವಾದದ್ದು. ಹೊರಗಿನ ಮನ್ನಣೆಗಳೇನೇ ಇರಲಿ ಇಂದಿಗೂ ಒಳ್ಳೆಯ ರಂಗ ಪ್ರದರ್ಶಕ್ಕೆ ಸೇರುವ ಸಾವಿರ ಸಂಖ್ಯೆಯ ಜನ ಮತ್ತು ಅಸಂಖ್ಯಾತ ಗೆಳೆಯರು ನಮ್ಮ ಆಸ್ತಿ. ಇಲ್ಲಿಗೆ ಬಂದು ಭಾಗವಹಿಸಿದ ಅನೇಕರಿದ್ದಾರೆ. ಕಲೆ ರಂಗಭೂಮಿ ಸಾಹಿತ್ಯ, ಪರಿಸರ ಹೋರಾಟಗಾರರು ಸಾಹಿತಿಗಳು ಇವರೆಲ್ಲರ ಪಟ್ಟಿ ದೊಡ್ಡದು. ಖ್ಯಾತ ಪರಸರವಾದಿ ಸುಂದರಲಾಲ ಬಹುಗುಣ ಇಲ್ಲಿ ಬಂದು ಹೋರಾಟದಲ್ಲಿ ಭಾಗವಹಿಸಿದರು, ನಮ್ಮೂರಿನಲ್ಲಿ ಉಳಿದರು, ಸಾಹಿತಿ ಬರಹಗಾರರಾದ ವೈದೇಹಿ, ಅಬ್ದುಲ್ ರಶೀದ್, ನಾಗೇಶ ಹೆಗಡೆ, ಮುಂತಾದ ಅನೇಕರು ನಾಡಿನ ಹೆಸರಾಂತ ರಂಗ ಕರ್ಮಿಗಳು, ಕಲಾವಿದರು ಇಲ್ಲಿ ಬಂದಿದ್ದಾರೆ ಭಾಗವಹಿಸಿದ್ದಾರೆ. ರಂಗಾಯಣ, ನೀನಾಸಂ ಸೇರಿದಂತೆ ನಾಡಿನ ಹೆಸರಾಂತ ಎಲ್ಲ ರಂಗ ತಂಡಗಳು ನಮ್ಮೂರಲ್ಲಿ ಪ್ರದರ್ಶನ ನೀಡಿವೆ. ನಮ್ಮ ತಂಡ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿ ಪ್ರದರ್ಶನ ನೀಡಿದೆ. ನಮ್ಮ ತಂಡದ ಸದಸ್ಯರು ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ, ಸಿನೆಮಾಗಳಲ್ಲೂ ನಟಿಸಿದ್ದಾರೆ.

ರಾತ್ರಿ ಶಾಲೆಯಲ್ಲಿ ಅಕ್ಷರಾಭ್ಯಾಸ ಮಾಡುತ್ತ ಕೂಲಿಕಾರ್ಮಿಕರು ಕಟ್ಟಿದ ಸಂಸ್ಥೆಯೊಂದು ಬೆಳೆದು ಬದುಕು ಕಟ್ಟಿಕೊಳ್ಳುತ್ತ ರಾಜ್ಯದ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲೊಂದನ್ನು ಕಟ್ಟಿದ್ದೇ ಒಂದು ಅಪೂರ್ವ ಅನುಭವ

ನಿಮಗೆ ಸಂದ ಗೌರವಗಳು..
-ಮುಖ್ಯವಾಗಿ ಹಾಸನ ಜಿಲ್ಲಾ ಪಂಚಾಯತ್‌ನಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಸುವರ್ಣ ರಂಗ ಸಮ್ಮಾನ್, ಮಂಡ್ಯದ ಕೆ.ವಿ, ಶಂಕರಗೌಡ ರಂಗಪ್ರಶಸ್ತಿ ಮುಂತಾದವು.

ನಿಮಗೆ ಮತ್ತೇನಾದರೂ ಹೇಳುವುದಿದ್ದರೆ?
-ರಂಗ ಭೂಮಿಯೆನ್ನುವುದು ನಮ್ಮದೇ ಪ್ರತಿರೂಪ ಪ್ರತಿಬಿಂಬ. ನಾವು ಹೇಗೆ ಬದುಕುತ್ತೇವೋ ಅದಕ್ಕೆ ಸರಿಯಾದ ರಂಗಭೂಮಿ ನಮ್ಮದಾಗುತ್ತದೆ. ಮತ್ತು ನಾವು ಅದರಲ್ಲಿ ಬದುಕುತ್ತೇವೆ.

Writer - ಮಮತಾ ಅರಸಿಕೆರೆ

contributor

Editor - ಮಮತಾ ಅರಸಿಕೆರೆ

contributor

Similar News