2019ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿದೆಯೇ 'ಸಂಯುಕ್ತ ರಂಗ'?

Update: 2018-05-20 07:13 GMT

ಬೆಂಗಳೂರು, ಮೇ 20: ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವುದನ್ನು ಯಶಸ್ವಿಯಾಗಿ ತಡೆದ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟಕ್ಕೆ ಪ್ರಾದೇಶಿಕ ಪಕ್ಷಗಳಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದ್ದು, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳ ಒಕ್ಕೂಟ ಸಂಘಟಿತವಾಗಿ ಬಿಜೆಪಿ ವಿರುದ್ಧ ಹೋರಾಡಲು ಬಲ ಬಂದಂತಾಗಿದೆ.

ಕಾಂಗ್ರೆಸ್ ಪಕ್ಷ ತನ್ನ ಮಹತ್ವಾಕಾಂಕ್ಷೆಯನ್ನು ಬದಿಗಿಟ್ಟು ಪ್ರಾದೇಶಿಕ ಪಕ್ಷಗಳ ಜತೆ ಸಂಯುಕ್ತ ರಂಗ (ಫೆಡರಲ್ ಫ್ರಂಟ್‍)ದಲ್ಲಿ ಸೇರಲು ಸಿದ್ಧವಿದೆ ಎಂಬ ವಿಶ್ವಾಸ ಪ್ರಾದೇಶಿಕ ಪಕ್ಷಗಳಲ್ಲಿ ಮೂಡಿದೆ, ಆದರೆ ಸ್ಥಳೀಯವಾಗಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ಪಕ್ಷಗಳ ನಡುವಿನ ಅಧಿಕಾರ ಹಂಚಿಕೆಯಲ್ಲಿ ಹೆಚ್ಚು ಎಚ್ಚರ ವಹಿಸಬೇಕು ಎಂದು ವಿಶ್ಲೇಷಕರು ಸಲಹೆ ಮಾಡಿದ್ದಾರೆ. ಜತೆಗೆ ಇಂತಹ ಗುಂಪಿನಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮಾನ ಸಂದೇಶ ರವಾನೆಯಾಗಬೇಕಾದ ಅಗತ್ಯವಿದೆ ಎಂದು ಸೂಚಿಸಿದ್ದಾರೆ.

ಬಿಜೆಪಿಯ ಎರಡು ದಿನಗಳ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ತಕ್ಷಣ ಟ್ವೀಟ್ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಸಂಯುಕ್ತ ರಂಗದ ಪ್ರತಿಪಾದಕಿ ಮಮತಾ ಬ್ಯಾನರ್ಜಿ, "ಪ್ರಜಾಪ್ರಭುತ್ವ ಗೆದ್ದಿದೆ ಕರ್ನಾಟಕಕ್ಕೆ ಅಭಿನಂದನೆಗಳು. ದೇವೇಗೌಡ, ಕುಮಾರಸ್ವಾಮಿ, ಕಾಂಗ್ರೆಸ್‍ಗೂ ಅಭಿನಂದನೆ. ಇದು ಪ್ರಾದೇಶಿಕ ಒಕ್ಕೂಟದ ಜಯ" ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಆ ಬಳಿಕ  ಮಮತಾ ಜತೆ ದೂರವಾಣಿ ಮೂಲಕ ಮಾತನಾಡಿದ್ದು, ಪ್ರಮಾಣಚನ ಸ್ವೀಕಾರಕ್ಕೆ ಆಹ್ವಾನಿಸಿದ್ದಾರೆ ಎಂದು ಇನ್ನೊಂದು ಟ್ವೀಟ್‍ನಲ್ಲಿ ಮಮತಾ ಸ್ಪಷ್ಟಪಡಿಸಿದ್ದಾರೆ.

ಮಮತಾ ಅವರ ಎದುರಾಳಿ ಹಾಗೂ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಕೂಡಾ ದೇವೇಗೌಡ ಮತ್ತು ಕುಮಾರಸ್ವಾಮಿ ಜತೆ ಸಂಪರ್ಕದಲ್ಲಿದ್ದರೆ. ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಅವರು ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ. ಆರ್ ಜೆಡಿ ರಾಜ್ಯಸಭಾ ಸದಸ್ಯ ಮನೋಜ್ ಝಾ ಪ್ರತಿಕ್ರಿಯಿಸಿ, "ಬಿಜೆಪಿಗೆ ಸವಾಲೊಡ್ಡಬೇಕಾದರೆ ಕರ್ನಾಟಕ ಚುನಾವಣೆಯಿಂದ ಕಲಿಯುವುದು ಸಾಕಷ್ಟಿದೆ" ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಸೇರಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಆರ್ ಜೆಡಿ ತೇಜಸ್ವಿ ಯಾದವ್, ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ, ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಡಿಎಂಕೆಯ ಎಂ.ಕೆ. ಸ್ಟಾಲಿನ್, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ ಸ್ಥಾಪನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News