ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಕೆ. ಚೆಂಗಲರಾಯರೆಡ್ಡಿ

Update: 2018-05-20 08:01 GMT
ಕೆ. ಚೆಂಗಲರಾಯರೆಡ್ಡಿ

ಕರ್ನಾಟಕ ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯು ಆಯ್ಕೆಯಾದ ಸಂದರ್ಭದಲ್ಲಿ ಈ ನಾಡಿನ ಮೊದಲ ಮುಖ್ಯಮಂತ್ರಿಯಾಗಿದ್ದ ಕ್ಯಾಸಂಬಳ್ಳಿ ಚೆಂಗಲರಾಯರೆಡ್ಡಿ ಅವರ ವ್ಯಕ್ತಿತ್ವ ಬಿಂಬಿಸುವ ಲೇಖನ.

ಕೆ.ಸಿ. ರೆಡ್ಡಿ ಎಂದೇ ರಾಜಕೀಯ ವಲಯದಲ್ಲಿ ವಿಖ್ಯಾತರಾಗಿದ್ದ ಚೆಂಗಲರಾಯರೆಡ್ಡಿಯವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದವರು. ವೆಂಕಟರೆಡ್ಡಿ ಹಾಗೂ ಗಂಗೋಜಮ್ಮರ ಪುತ್ರ. ಇವರು ಹುಟ್ಟಿದ್ದು 4.5.1906 ರಂದು. ಅಂದು ‘ಮೈಸೂರು ಸಂಸ್ಥಾನ’ ಎಂದು ಹೆಸರಾಗಿದ್ದ ಹಳೆಯ ಮೈಸೂರು ಪ್ರದೇಶದ ಪ್ರಪ್ರಥಮ ಮುಖ್ಯಮಂತ್ರಿ ಆಗಿ ನೇಮಕಗೊಂಡದ್ದು 1947 ರಲ್ಲಿ; ಶ್ರೀ ರೆಡ್ಡಿಯವರ 45ನೆಯ ವಯಸ್ಸಿನಲ್ಲಿ. ಅದಕ್ಕೂ ಮೊದಲು ಅವರು ಮೈಸೂರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಸ್ಥಾಪಿತವಾಗಲು ತುಂಬ ನೆರವಾದ ನಾಯಕರಾಗಿದ್ದರು.

ಕೆ.ಸಿ. ರೆಡ್ಡಿಯವರ ವಿದ್ಯಾಭ್ಯಾಸ ತಮ್ಮ ಜಿಲ್ಲೆ ಮತ್ತು ಬೆಂಗಳೂರಿನಲ್ಲಿ ನಡೆಯಿತು. 1918 ರಲ್ಲಿ ಎಸೆಸೆಲ್ಸಿ ಮುಗಿಸಿದರು. ಆನಂತರದ ಕಾಲೇಜು ವಿದ್ಯಾಭ್ಯಾಸಕ್ಕೆಂದು ಅವರು ಮದ್ರಾಸಿಗೆ ಹೋದರು. 1924 ರಲ್ಲಿ ಬಿ.ಎ. ಪದವಿಯನ್ನೂ 1926 ರಲ್ಲಿ ಬಿ.ಎಲ್. ಪದವಿಯನ್ನೂ ಸುವರ್ಣ ಪದಕದೊಂದಿಗೆ ಪಡೆದು ಹಿಂದಿರುಗಿದರು. ಅವರು ಅರ್ಥಶಾಸ್ತ್ರದಲ್ಲಿ ಪರಿಣತರಾಗಿದ್ದುಕೊಂಡು, ಡೆಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್ ಸಂಸ್ಥೆಯ ಸ್ಥಾಪನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ಮದ್ರಾಸಿನಲ್ಲಿದ್ದಾಗಲೆ ಕಾಂಗ್ರೆಸ್ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದು, ಖಾದಿ ವಸ್ತ್ರ ತೊಡಲು ಆರಂಭಿಸಿದ್ದರು. ಯುವಜನ ಸಂಘ ಒಂದನ್ನು ಸ್ಥಾಪಿಸಿ ಅದರ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಅಂದು ಕಾಂಗ್ರೆಸ್ ಪಕ್ಷ ದೇಶದ ಎಲ್ಲ ಕಡೆಯೂ ತುಂಬ ಪ್ರಬಲವಾಗಿದ್ದ ಕಾಲ; ಸ್ವಾತಂತ್ರ ಚಳವಳಿ ತೀವ್ರಗೊಂಡಿದ್ದ ಪರಿಸ್ಥಿತಿ. ಅಂಥ ಸಂದರ್ಭದಲ್ಲಿ ತಮ್ಮ ಜಿಲ್ಲೆಯವರೇ ಆಗಿದ್ದ ಸಾಹಿತಿ ಡಿ.ವಿ. ಗುಂಡಪ್ಪನವರು ಮತ್ತು ವಿ. ವೆಂಕಟಪ್ಪನವರು ಮೊದಲಾದವರ ಮಾರ್ಗದರ್ಶನದಲ್ಲಿ ಕೆ.ಸಿ. ರೆಡ್ಡಿಯವರು ಜವಾಬ್ದಾರಿ ಸರಕಾರ ರಚನೆಯಲ್ಲಿ ಸಂಘಟಕರಾಗಿದ್ದರು. ವಕೀಲಿ ವೃತ್ತಿಯಲ್ಲಿ ನಿರಾಸಕ್ತರಾಗಿದ್ದರು.
ರೆಡ್ಡಿಯವರು ಮೈಸೂರಿನ ಮುಖ್ಯಮಂತ್ರಿಗಳಾಗುವುದಕ್ಕೆ ಮೊದಲು, 1932-36 ರ ಅವಧಿಯಲ್ಲಿ ಕೋಲಾರ ಜಿಲ್ಲಾ ಬೋರ್ಡಿನ ಅಧ್ಯಕ್ಷರಾಗಿದ್ದರು. ಆ ಅವಧಿಯಲ್ಲಿ ಜಿಲ್ಲೆಯ ವಿದ್ಯಾಭ್ಯಾಸ, ಸಾರಿಗೆ ವ್ಯವಸ್ಥೆಯೇ ಆದಿಯಾಗಿ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ಒಳ್ಳೆಯ ಕೆಲಸ ಮಾಡಿದ್ದರು. ಅದರಿಂದ ಅವರು ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾದರು. ಕೋಲಾರ ಚಿನ್ನದ ಗಣಿಯ ಕಾರ್ಮಿಕ ಸಂಘದ ಅಧ್ಯಕ್ಷರಾಗಿದ್ದುಕೊಂಡು ಗಣನೀಯ ಸೇವೆ ಸಲ್ಲಿಸಿದ್ದರು. 1932 ರಲ್ಲಿ ಚಿತ್ರದುರ್ಗ ಜಿಲ್ಲೆಯ ರೈತ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡರು.

ವಿಶೇಷವಾಗಿ 1934 ರಲ್ಲಿ ಗಾಂಧೀಜಿ ಅವರು ಮೈಸೂರು ಪ್ರದೇಶದ ಪ್ರವಾಸ ಕೈಗೊಂಡಿದ್ದಾಗ, ಬಾಪೂಜಿ ಅವರೊಡನೆ ಮಾತುಕತೆ ನಡೆಸಿ, ಕಾಂಗ್ರೆಸ್ಸಿನತ್ತ ಹೆಚ್ಚು ಒಲವುಗೊಂಡು ಆ ಪಕ್ಷದ ಸಂವರ್ಧನೆಗೆ ದುಡಿಯಲು ಕಂಕಣ ತೊಟ್ಟರು. 1934ನೆಯ ಇಸವಿಯಲ್ಲಿಯೇ ರೆಡ್ಡಿಯವರ ವಿವಾಹ ಸರೋಜಮ್ಮ ಎಂಬವರೊಡನೆ ಆಯಿತು. ಅವರಿಗೆ ಐವರು ಗಂಡು ಮಕ್ಕಳು ಒಬ್ಬಳು ಮಗಳೂ ಆದರು.

ಮೈಸೂರು ಕಾಂಗ್ರೆಸ್ ಸಮಿತಿಯ ಪ್ರಥಮ ಅಧಿವೇಶನ ಮದ್ದೂರಿನ ಬಳಿಯ ಶಿವಪುರದಲ್ಲಿ 1937ರಲ್ಲಿ ಎಪ್ರಿಲ್ ತಿಂಗಳಿನಲ್ಲಿ ಟಿ. ಸಿದ್ದಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಆಗ ಪೊಲೀಸರು ಕಾಂಗ್ರೆಸ್ಸಿಗರ ವಿರುದ್ಧ ಗೋಲಿಬಾರು ನಡೆಸಿದರು. ಆ ಸಂದರ್ಭದಲ್ಲಿ ನಡೆದದ್ದೇ ಪ್ರಸಿದ್ಧವಾದ ಶಿವಪುರದ ಧ್ವಜ ಸತ್ಯಾಗ್ರಹ. ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಕೆ.ಸಿ. ರೆಡ್ಡಿಯವರಿಗೆ ಒಂದೂವರೆ ತಿಂಗಳವರೆಗಿನ ಜೈಲುಶಿಕ್ಷೆ ಆಯಿತು. ಆ ಕಾಲದಲ್ಲಿ ಪ್ರಸಿದ್ಧವಾಗಿದ್ದ ಜನವಾಣಿ ಎಂಬ ದಿನಪತ್ರಿಕೆಯ ಸಂಪಾದಕರಾಗಿಯೂ ರೆಡ್ಡಿಯವರು ಏಳೆಂಟು ತಿಂಗಳವರೆಗೆ ಕಾರ್ಯನಿರ್ವಹಿಸಿದರು.

1938 ರಲ್ಲಿ ವಿಧುರಾಶ್ವತ್ಥದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿಯೂ ರೆಡ್ಡಿ ಭಾಗವಹಿಸಿದ್ದರು. ಗೋಲಿಬಾರು ನಡೆಯಿತು. ಆ ಸಂದರ್ಭದಲ್ಲಿಯೇ ವಾರ್ಧಾದಲ್ಲಿ ನೆಲಸಿದ್ದ ಮಹಾತ್ಮಾ ಗಾಂಧಿಯವರಿಗೆ ಆಪ್ತರಾಗಿದ್ದುಕೊಂಡು ಅವರ ಸಹಚರರಾಗಿ ದುಡಿಯುವಂಥ ವಿರಳ ಅವಕಾಶ ರೆಡ್ಡಿ ಅವರಿಗೆ ಒದಗಿ, ಅವರು ವಾರ್ಧಾಕ್ಕೆ ಹೋದರು. ಅಲ್ಲಿ ಗಾಂಧಿಯವರಿಂದ ಶಿಸ್ತು, ಪ್ರಾಮಾಣಿಕತೆ, ಸ್ವಚ್ಛತೆ ಮತ್ತು ಸ್ವಾವಲಂಬನೆ ಮೊದಲಾದ ಹಲವಾರು ಜೀವನಾದರ್ಶಗಳನ್ನು ಅಳವಡಿಸಿಕೊಳ್ಳಬೇಕಾದ ಪಾಠಗಳನ್ನು ರೆಡ್ಡಿಯವರು ಕಲಿತರು.

ಅಲ್ಲಿಂದಾಚೆಗೆ ರೆಡ್ಡಿಯವರು ಸಂಪೂರ್ಣ ಬದಲಾದ ವ್ಯಕ್ತಿಯಾದರು. ಅದುವರೆಗೆ ಅವರು ಆಗಾಗ ತೊಡುತ್ತಿದ್ದ ಕೋಟು, ರೇಷ್ಮೆ ಜುಬ್ಬ್ಬಾ, ಜರಿತಾರಿ ಪೇಟವೇ ಮೊದಲಾದವುಗಳಿಗೆ ವಿದಾಯ ಹೇಳಿ, ಸರ್ವವಿಧದಲ್ಲಿಯೂ ಖಾದಿಯನ್ನು ಬಳಸತೊಡಗಿದರು. ಹಿರಿಯ ಕಾಂಗ್ರೆಸ್ ಧುರೀಣರಾಗಿದ್ದ ಎಚ್.ಕೆ. ವೀರಣ್ಣಗೌಡರಿಂದ ಕಾಂಗ್ರೆಸ್ ಟೋಪಿಯನ್ನು ಪಡೆದುಕೊಂಡು ಧರಿಸತೊಡಗಿದರು.

ಕೆ.ಸಿ. ರೆಡ್ಡಿಯವರು ಸಮತೂಕದ ಹಸನ್ಮುಖಿ ವ್ಯಕ್ತಿ. ಅವರು 1937 ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಪರವಾಗಿದ್ದಂತಹ ಮೈಸೂರಿನ ದಿವಾನರ ಧೋರಣೆಯನ್ನು ಖಂಡಿಸಿ ಚಳವಳಿ ನಡೆಸಿದರು. 1939 ರಲ್ಲಿ ಜವಾಬ್ದಾರಿ ಸರಕಾರದ ರಚನೆ ಆಗಬೇಕು ಎಂದು ಒತ್ತಾಯಿಸಿ ತುಮಕೂರು, ಚಿತ್ರದುರ್ಗ, ಶಿವಮೊಗ್ಗ ಮೊದಲಾದ ಜಿಲ್ಲೆಗಳಲ್ಲಿ ರೈತ ಸಂಘಟನೆ ನಡೆಸಿದರು. ಆ ಸಂದರ್ಭದಲ್ಲಿ ಹಲವರು ರೈತರು ಬಂಧನಕ್ಕೊಳಗಾದರು.
ಅದೇ ಬಗೆಯ ಚಳವಳಿಯನ್ನು ರೆಡ್ಡಿಯವರು ಕೋಲಾರ ಜಿಲ್ಲೆಯಲ್ಲಿಯೂ ನಡೆಸಿದರು. ಆಗಲೂ ಅವರು ಬಂಧನಕ್ಕೊಳಗಾದರು. ಅದರಿಂದ ಸಿಟ್ಟಿಗೆದ್ದ ಜನ ಕೆಜಿಎಫ್‌ನಲ್ಲಿ ಸತ್ಯಾಗ್ರಹ ನಡೆಸಿದರು. ಇದೆಲ್ಲದರಿಂದ ಕಾಂಗ್ರೆಸ್ ಪಕ್ಷದ ಪ್ರಾಬಲ್ಯ ದಿನದಿನಕ್ಕೆ ಹೆಚ್ಚುತ್ತ ಹೋದಂತೆ ರೆಡ್ಡಿಯವರ ಜನಪ್ರಿಯತೆಯೂ ಹೆಚ್ಚಿತು.

ಮುಂದೆ 1942 ರಲ್ಲಿ ‘ಚಲೇ ಜಾವ್- ದೇಶಬಿಟ್ಟು ತೊಲಗಿ’ ಎಂಬ ಮಹಾ ಚಳವಳಿಯಲ್ಲಿ ಭಾಗಿಗಳಾಗಿದ್ದ ರೆಡ್ಡಿಯವರು ಬಂಧಿತರಾಗಿ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ವಾಸಮಾಡಬೇಕಾಯಿತು. 1943 ರಲ್ಲಿ ಬಿಡುಗಡೆಯಾಯಿತು. ಆಗ ಆದ ತೊಂದರೆಯಿಂದಾಗಿ ಅವರ ಒಂದು ಕಿವಿಗೆ ಕಿವುಡುತನ ಉಂಟಾಯಿತು.

ಕ್ವಿಟ್ ಇಂಡಿಯಾ ಚಳವಳಿ ಮುಗಿದ ನಂತರ 1947 ರಲ್ಲಿ ರಾಷ್ಟ್ರ ಸ್ವಾತಂತ್ರ ದೊರೆಯುವವರೆಗಿನ ಕಾಲಾವಧಿಯ ಮಧ್ಯದ ದಿನಗಳು ರೆಡ್ಡಿಯವರ ಜೀವನದಲ್ಲಿ ತಾಪತ್ರಯದಿಂದ ಕೂಡಿದ್ದವು. ಆದರೂ ತಾವು ನಂಬಿದ್ದ ಕಾಂಗ್ರೆಸ್ ತತ್ವಗಳನ್ನು ಬಿಡದೆ ಕಾಪಾಡಿಕೊಂಡು ಬಂದದ್ದು ಮಹತ್ವದ ವಿಷಯ. 1946ರಲ್ಲಿ ಕೆ.ಸಿ. ರೆಡ್ಡಿಯವರು ಮೈಸೂರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಆಗ ಮೈಸೂರಿನ ಮಹಾರಾಜರು ಹಾಗೂ ದಿವಾನರ ವಿರುದ್ಧ ಪ್ರತಿಭಟನೆ ನಡೆಸಿ ರೆಡ್ಡಿಯವರು ಚಳವಳಿ ಮಾಡಬೇಕಾಗಿ ಬಂದಿತು. ಅದನ್ನು ಅರಮನೆ ಸತ್ಯಾಗ್ರಹ ಎಂದು ಕರೆಯಲಾಯಿತು. ಮೈಸೂರು ಚಲೋ ಎಂಬ ಚಳವಳಿಯೂ ಆಗಲೇ ನಡೆಯಿತು. ರೆಡ್ಡಿಯವರ ಜೊತೆಗೆ ಸಾವಿರಾರು ಜನರನ್ನು ಬಂಧಿಸಲಾಯಿತು. ಗೋಲಿಬಾರಿನಲ್ಲಿ ಹತ್ತಾರು ಜನ ಪ್ರಾಣತೆತ್ತರು.
ಕೊನೆಗೂ ಮೈಸೂರು ಮಹಾರಾಜರ ಸರಕಾರ ತನ್ನ ಸೋಲೊಪ್ಪಿ ಸಂಧಾನಕ್ಕೆ ಬರಬೇಕಾಯಿತು. ಕೆ.ಸಿ. ರೆಡ್ಡಿಯವರ ನಾಯಕತ್ವಕ್ಕೆ ಮನ್ನಣೆ ನೀಡಿ ಅವರನ್ನು ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳುವುದು ಅನಿವಾರ್ಯವಾಯಿತು. ಅದರ ಪ್ರಕಾರ, ದಿನಾಂಕ 29.10.1947 ರಂದು ರೆಡ್ಡಿ ಸರಕಾರ ಅಸ್ತಿತ್ವಕ್ಕೆ ಬಂದಿತು. ಅದರಲ್ಲಿ ಒಟ್ಟು ಒಂಬತ್ತು ಮಂದಿ ಮಂತ್ರಿಗಳಿದ್ದು, ರೆಡ್ಡಿಯವರು ಮುಖ್ಯಮಂತ್ರಿಗಳಾದರು. ಆ ಒಂಬತ್ತು ಮಂದಿಯ ಪೈಕಿ 6 ಜನ ಕಾಂಗ್ರೆಸ್ ಪಾರ್ಟಿಯವರಿದ್ದರೆ ಮಿಕ್ಕ ಮೂವರು ಸ್ವತಂತ್ರ ಪಕ್ಷಕ್ಕೆ ಸೇರಿದವರಾಗಿದ್ದರು.

ಹಾಗೆ ಪ್ರಪ್ರಥಮ ಬಾರಿಗೆ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರಕಾರ ರಚನೆಯಾದಾಗ, ಅದುವರೆಗೆ ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರು ಬ್ರಿಟಿಷರಿಂದ ರಾಜಪ್ರಮುಖರೆಂದು ನೇಮಿತರಾದರು. ಆಗ ದಿವಾನರಾಗಿದ್ದ ಆರ್ಕಾಟ್ ರಾಮಸ್ವಾಮಿಯವರು ಕೆಲವು ಕಾಲದ ನಂತರ ನಿವೃತ್ತರಾದರು.

1948 ರಲ್ಲಿ ಮೈಸೂರು ರಾಜ್ಯಕ್ಕೆ ಹೊಸ ಸಂವಿಧಾನ ರಚಿಸುವ ಉದ್ದೇಶದಿಂದ ವಿಧಾನಸಭೆಗೆ ಚುನಾವಣೆ ನಡೆಯಿತು. ಆಗಲೂ ಕಾಂಗ್ರೆಸ್ ಪಕ್ಷವೇ ಬಹುಮತ ಗಳಿಸಿ ಜಯಗಳಿಸಿತು. 1950 ರಲ್ಲಿ ಮೈಸೂರು ಸಂಸ್ಥಾನ ‘ಬಿ’ ವರ್ಗದ ರಾಜ್ಯವೆಂದು ಪರಿಗಣಿತವಾಯಿತು. ಆಗ ರಾಜಪ್ರಮುಖರಾಗಿದ್ದ ಮಹಾರಾಜರೇ ರಾಜ್ಯಪಾಲರೆಂದು ಪರಿಗಣಿತರಾದರು.

6.2.1950 ರಲ್ಲಿ ರೆಡ್ಡಿಯವರ ಮಂತ್ರಿಮಂಡಲ ಮತ್ತೆ ಅಧಿಕಾರಕ್ಕೆ ಬಂದಿತು. ಸಂವಿಧಾನ ಸಭೆ ಎಂದಿದ್ದುದು ವಿಧಾನಸಭೆ ಎಂದು ಪುರ್ನನಾಮಕರಣಗೊಂಡಿತು. ಆಗಿನ ವಿಧಾನಸಭೆಯಲ್ಲಿ ನೂರು ಜನ ಸದಸ್ಯರಿದ್ದರು. ನಲವತ್ತು ಜನರಿದ್ದ ವಿಧಾನ ಪರಿಷತ್ತು ಕೂಡ ಅಸ್ತಿತ್ವಕ್ಕೆ ಬಂದಿತು.
ಕೆ.ಸಿ. ರೆಡ್ಡಿಯವರು ಮೂರು ವರ್ಷ ಕಾಲ ಮುಖ್ಯಮಂತ್ರಿ ಯಾಗಿದ್ದು, ಅವರ ಹೊಸ ಮಂತ್ರಿಮಂಡಲ ಹಲವು ಬಗೆಯ ಹೊಸ ನಿಯಮಗಳನ್ನು ಜಾರಿಗೊಳಿಸಿತು. ಉದಾಹರಣೆಗೆ ಮಾರಾಟ ತೆರಿಗೆ, ಪಾನನಿರೋಧ ಕಾಯ್ದೆ, ಜೋಗದಲ್ಲಿ ಶರಾವತಿ ಜಲವಿದ್ಯುತ್ ಯೋಜನೆ - ಇವು ಪ್ರಮುಖವಾದಂಥವು. 1949 ರಲ್ಲಿ ಬೆಂಗಳೂರು ಕಾರ್ಪೊರೇಷನ್ ಅಸ್ತಿತ್ವಕ್ಕೆ ಬಂದಿತು. ತುಂಗಭದ್ರಾ ನೀರಾವರಿ ಯೋಜನೆಯೂ ಜಾರಿಗೊಂಡಿತು.

ವಿಶೇಷವಾಗಿ, 13.7.1951 ರಂದು ಆಗಿನ ಪ್ರಧಾನಮಂತ್ರಿಯಾಗಿದ್ದ ಜವಾಹರಲಾಲ್ ನೆಹರೂ ಅವರಿಂದ ಬೆಂಗಳೂರಿನಲ್ಲಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ಆಯಿತು. ಆದರೆ ಆ ಭವನ ನಿರ್ಮಾಣ ಕಾರ್ಯ ಮುಂದಿನ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ ಅವರಿಂದ ನೆರವೇರಿತು.
ಹೀಗೆ ತುಂಬು ಉತ್ಸಾಹದಿಂದ ಮೈಸೂರು ರಾಜ್ಯದ ಹಲವು ಬಗೆಯ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದ ಕೆ.ಸಿ. ರೆಡ್ಡಿ ಅವರು 1952 ರ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಎಂ.ಎಲ್.ಎ. ಆಗಿ ಸ್ಪರ್ಧಿಸಲಿಲ್ಲ. ಬದಲಿಗೆ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡು, ದಿಲ್ಲಿಯ ನೆಹರೂ ಮಂತ್ರಿಮಂಡಲದಲ್ಲಿ ಕೇಂದ್ರ ಉತ್ಪಾದನಾ ಸಚಿವರಾಗಿ ನೇಮಕಗೊಂಡರು.

ಅವರ ಅವಧಿಯಲ್ಲಿ ಕೇಂದ್ರ ಸರಕಾರ ಬೃಹತ್ ಉಕ್ಕಿನ ಕಾರ್ಖಾನೆಗಳನ್ನು ದುರ್ಗಾಪುರ, ರೂರ್ಕೆಲ ಮತ್ತು ಭಿಲಾಯ್‌ಗಳಲ್ಲಿ ಸ್ಥಾಪಿಸಿತು. ಆ ಸಂಬಂಧವಾಗಿ ರೆಡ್ಡಿಯರಿಗೆ ಜರ್ಮನಿ, ರಶ್ಯಾ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡುವ ಅವಕಾಶ ಒದಗಿತು.
ಆನಂತರದ ವರ್ಷಗಳಲ್ಲಿ ಅವರು ಬಿಹಾರದ ರಾಂಚಿಯಲ್ಲಿ, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮತ್ತು ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಎಚ್.ಎಂ.ಟಿ ಅಂತಹ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವುದರಲ್ಲಿ ನೆರವಾದರು. 1960 ರಲ್ಲಿ ರೆಡ್ಡಿಯವರು ಕೈಗಾರಿಕೆ ಮತ್ತು ವಾಣಿಜ್ಯ ಮಂತ್ರಿಯಾಗಿ ಕೇಂದ್ರ ಸರಕಾರದಲ್ಲಿ ನೇಮಕಗೊಂಡು 1962ರ ವರೆಗೂ ಮುಂದುವರಿದರು.

1962 ರಲ್ಲಿ ರೆಡ್ಡಿಯವರು ಮತ್ತೆ ಲೋಕಸಭಾ ಸದಸ್ಯರಾಗಿ ಆಯ್ಕೆಗೊಂಡರು. ಆದರೆ ಈ ಬಾರಿ ಅವರು ಮಂತ್ರಿ ಆಗದೆ ಕಾಂಗ್ರೆಸ್ ಪಕ್ಷದ ಉಪನಾಯಕರಾಗಿ ನಿಯುಕ್ತರಾದರು. ಅನಂತರ 1964ರಲ್ಲಿ ಅವರು ಮಧ್ಯಪ್ರದೇಶದ ರಾಜ್ಯಪಾಲರಾಗಿ ನಿಯುಕ್ತರಾದರು. ಅದೇ ಹುದ್ದೆಯಲ್ಲಿ 1971 ರವರೆಗೂ ಮುಂದುವರಿದು, ಕೊನೆಗೆ ಬೆಂಗಳೂರಿಗೆ ಹಿಂದಿರುಗಿ ನಿವೃತ್ತಜೀವನ ನಡೆಸತೊಡಗಿದರು. ಆದರೆ ದಿನಾಂಕ 27.2.1976ರಲ್ಲಿ, ತಮ್ಮ 74ನೆಯ ವಯಸ್ಸಿನಲ್ಲಿ ದೈವಾಧೀನರಾದರು.

ಕೆ.ಸಿ. ರೆಡ್ಡಿಯವರು ಗಾಂಧೀಜಿ ಅವರ ನೇರ ಸಂಪರ್ಕ ಹೊಂದಿ ರೂಪುಗೊಂಡದ್ದರಿಂದ, ಸಾತ್ವಿಕರೂ ಧರ್ಮಬೀರುಗಳೂ ದಯಾಪರರೂ ಹರಿಜನ ಗಿರಿಜನ ಆದಿಯಾದ ದೀನದಲಿತರ ಬಗೆಗೆ ಕರುಣೆ ಉಳ್ಳ ಹೃದಯವಂತರೂ ಆಗಿದ್ದರು. ಇದಕ್ಕೆ ನಿದರ್ಶನವಾಗಿ, ಅವರು ಕೋಲಾರ ಮತ್ತು ಬಂಗಾರಪೇಟೆಗಳಲ್ಲಿ ಹರಿಜನ ವಿದ್ಯಾರ್ಥಿಗಳಿಗೆಂದು ಸ್ಥಾಪಿಸಿದ ವಿದ್ಯಾರ್ಥಿನಿಲಯಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ. ಅವು ಸರಕಾರದ ಬೆಲೆಯುಳ್ಳ ಕೊಡುಗೆಗಳಾಗಿವೆ.
ಹಾಗೆಯೇ ಅವರು ಸ್ಥಾಪಿಸಿದ ಖಾದಿಭಂಡಾರಗಳೂ ಗಮನಾರ್ಹವಾಗಿವೆ. ಒಟ್ಟಿನ ಮೇಲೆ ಹೇಳುವುದಾದರೆ, ಕೆ. ಚೆಂಗಲರಾಯರೆಡ್ಡಿಯವರು ಅಂದಿನ ಮೈಸೂರು ರಾಜ್ಯಕ್ಕೆ (ಏಕೆಂದರೆ ಆಗಿನ್ನೂ ವಿಶಾಲ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿರಲಿಲ್ಲ. ಅದಾದದ್ದು ದಿನಾಂಕ 1.11.1956ರಲ್ಲಿ) ಗಣನೀಯ ಸೇವೆ ಸಲ್ಲಿಸಿ ಸ್ಮರಣಾರ್ಹರಾಗಿದ್ದಾರೆ. ಕನ್ನಡಿಗರ ಪ್ರಪ್ರಥಮ ಮುಖ್ಯಮಂತ್ರಿ ಮತ್ತು ಕೇಂದ್ರ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Writer - ಡಾ.ನಂ. ತಪಸ್ವೀಕುಮಾರ್

contributor

Editor - ಡಾ.ನಂ. ತಪಸ್ವೀಕುಮಾರ್

contributor

Similar News