ಜಾತಿ ಪದ್ಧತಿಯ ಸೂಕ್ಷತೆ ಅರಿತಾಗ ಜಾತಿ ವ್ಯವಸ್ಥೆ ನಿರ್ಮೂಲನೆ ಸಾಧ್ಯ: ಜಿ.ಎನ್.ನಾಗರಾಜ್
ಬೆಂಗಳೂರು, ಮೇ 20 : ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು ಎಂದು ತೋರಿಕೆಗೆ ಸೀಮಿತವಾಗದೇ, ಜಾತಿ ಪದ್ಧತಿಯನ್ನು ಆಳಕ್ಕಿಳಿದು ಅರ್ಥ ಮಾಡಿಕೊಂಡಾಗ ಮಾತ್ರ ಅದನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಹಾಗೂ ಚಿಂತಕ ಜಿ.ಎನ್. ನಾಗರಾಜ್ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ಕ್ರಿಯಾ-ನವಕರ್ನಾಟಕ ಜಂಟಿಯಾಗಿ ಆಯೋಜಿಸಿದ್ದ ಜಾತಿ ದಮನ-ಅಸ್ಪಶ್ಯತೆಗಳ ವಿನಾಶ ಮತ್ತು ವರ್ಗ ಹೋರಾಟ-ಮಾರ್ಕ್ಸ್‌ವಾದಿ ಕಣ್ಣೋಟ’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭೂ ಮಾಲಕತ್ವ ಹಾಗೂ ಜಾತಿ ವ್ಯವಸ್ಥೆ ಮತ್ತು ಆಧುನಿಕ ಬಂಡವಾಳಶಾಹಿ ವ್ಯವಸ್ಥೆ ಒಂದಕ್ಕೊಂದು ಆಂತರಿಕವಾಗಿ ತಳಕು ಹಾಕಿಕೊಂಡಿದೆ. ಅದನ್ನು ಅರ್ಥ ಮಾಡಿಕೊಂಡು ನಿವಾರಿಸಿಕೊಳ್ಳಬೇಕಿದೆ ಎಂದರು.
ಉತ್ಪಾದನಾ ಸಂಬಂಧ, ಉತ್ಪಾದನಾ ಪ್ರಕ್ರಿಯೆ, ಸಾಮಾಜಿ ರಚನೆಯೊಳಗೆ ಒಳ ಸಂಬಂಧವಿದ್ದು, ಅದನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು, ಒಕ್ಕಲಿಗ, ದಲಿತ, ಕುರುಬ ಎಂಬ ಜಾತಿ ಆಧಾರದ ಮೇಲೆ ವಿಶ್ಲೇಷಣೆ ಮಾಡುತ್ತಿದ್ದರೆ ಏನೂ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಜಾತಿ ವ್ಯವಸ್ಥೆಯನ್ನು ಕೇವಲ ಜಾತಿಗಳ ಆಧಾರದ ಮೇಲೆ ವಿಂಗಡಿಸುವ ಬದಲಿಗೆ, ಸೂಕ್ಷ್ಮ ವಿಶ್ಲೇಷಣೆ ಮಾಡಬೇಕು ಎಂದು ಅವರು ಹೇಳಿದರು.
ಆಧುನಿಕ ಕಾಲಘಟ್ಟದಲ್ಲಿ ವರ್ಣ ವ್ಯವಸ್ಥೆ ಎಂದರೆ ಬಂಡವಾಳಶಾಹಿ ಹಾಗೂ ದುಡಿಯುವ ವರ್ಗ ಎಂದು ಬಿಂಬಿಸಲಾಗಿದೆ. ಆದರೆ, ಜಾತಿ ವ್ಯವಸ್ಥೆಯೂ ವರ್ಣ ವ್ಯವಸ್ಥೆಯ ಭಾಗವಾಗಿದೆ. ಅದನ್ನು ಮಾರ್ಕ್ಸ್ ಮಾತ್ರವಲ್ಲ, ಅಂಬೇಡ್ಕರ್ ಅವರೂ ಅರ್ಥ ಮಾಡಿಕೊಂಡಿದ್ದರು. ಸವರ್ಣ ಹಿಂದೂಗಳು ಎಲ್ಲರನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದು, ದಲಿತರು ಶೋಷಣೆಗೆ, ದಮನಕ್ಕೆ ಒಳಗಾಗುತ್ತಿದ್ದಾರೆ ಎಂದು ಅಂಬೇಡ್ಕರ್ ಹೇಳಿದ್ದರು ಎಂದು ನಾಗರಾಜ್ ತಿಳಿಸಿದರು.
ವರ್ಣ ಹಾಗೂ ಜಾತಿ ವ್ಯವಸ್ಥೆಯು ಅಂದಿನ ಕಾಲಘಟ್ಟದಲ್ಲಿ ಉದಯವಾದ ಭಾರತೀಯ ವರ್ಗ ವ್ಯವಸ್ಥೆಯಾಗಿದ್ದು, ಆರ್ಯರ ಕಾಲಘಟ್ಟದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಎಂಬ ಮೂರು ವರ್ಣಗಳು ಮಾತ್ರ ಇದ್ದವು. ಅನಂತರ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆ ವಿಸ್ತಾರವಾದಂತೆ ಶೂದ್ರ ಎಂಬ ವರ್ಣವನ್ನು ಸೃಷ್ಟಿಸಿಕೊಂಡಿದ್ದು, ದುಡಿಯುವ ವರ್ಗವಾಗಿದ್ದ ವೈಶ್ಯರು ತಮ್ಮ ವೃತ್ತಿಯನ್ನು ಶೂದ್ರರಿಗೆ ವರ್ಗಾಯಿಸಿದ್ದರು ಎಂದು ಅವರು ಹೇಳಿದರು.
ಬ್ರಾಹ್ಮಣರು ಕರ್ನಾಟಕಕ್ಕೆ ಪ್ರವೇಶ ಮಾಡುವ ಮೂಲಕ ತಮ್ಮ ಪ್ರಭುತ್ವವನ್ನು ವಿಸ್ತರಿಸಿಕೊಂಡರು. ಇಲ್ಲಿ ಆಡಳಿತ ನಡೆಸುತ್ತಿದ್ದ ಕುಲ ಪ್ರಭುತ್ವ ಹಾಗೂ ರಾಜಪ್ರಭುತ್ವಗಳಿಗೆ ವೈದಿಕಶಾಹಿ ಸಿದ್ಧಾಂತ ಆಕರ್ಷವಾಗಿ ಕಾಣಲಾರಂಭಿಸಿತು. ಕಾಲ ಕಳೆದಂತೆ ಎಲ್ಲರೂ ವರ್ಣ ವ್ಯವಸ್ಥೆಯನ್ನು ಅಪ್ಪಿಕೊಳ್ಳಲಾರಂಭಿಸಿದರು. ವೀರಶೈವರಾಗಿದ್ದ ಕೆಳದಿ ರಾಜವಂಶಸ್ಥರೂ ವೈದಿಕರನ್ನು ಅಪ್ಪಿಕೊಂಡರು ಎಂಬುದು ಶಿಲಾಶಾಸನಗಳಲ್ಲಿ ಉಲ್ಲೇಖವಾಗಿದೆ. ಅಲ್ಲದೆ, ಜೈನ ಧರ್ಮವೂ ಅವರನ್ನು ಒಪ್ಪಿಕೊಂಡಿದ್ದರಿಂದ ತಮ್ಮ ಪ್ರಾಭಲ್ಯವನ್ನು ವಿಸ್ತರಿಸಲು ಹೆಚ್ಚು ಸಮಯಾವಕಾಶ ಹಿಡಿಸಲಿಲ್ಲ ಎಂದರು.
ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಭು ಗಾಮಂಡರು ಎಂಬ ಬುಡಕಟ್ಟು ಜನರು ಅಧಿಕಾರ ನಡೆಸುತ್ತಿದ್ದರು. ಆದರೆ, ವೈದಿಕರು ಪ್ರವೇಶ ಮಾಡುತ್ತಿದ್ದಂತೆ, ಅವರ ನಡುವೆ ಮೇಲ್ವರ್ಗ-ಕೆಳವರ್ಗ ಎಂದು ವಿಂಗಡಿಸಲಾಯಿತು. ಅನಂತರ ಶೂದ್ರರ ಒಳಗೆ ಮೇಲ್ವರ್ಗದವರು ಅತಿ ಹಿಂದುಳಿದವರನ್ನು ಶೋಷಣೆ ಮಾಡುವ ಮೂಲಕ ಭೂ ಮಾಲಕತ್ಪವನ್ನು ಕಾಪಾಡಿಕೊಳ್ಳಲು ಆರಂಭಿಸಿದರು ಎಂದ ಅವರು ಹೇಳಿದರು.
ಹಿಂದಿನ ಪಾಳೇಗಾರಿ ವರ್ಣ, ಜಾತಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ನಾಶ ಮಾಡದೇ ಇಂದಿನ ಪ್ರಜಾಪ್ರಭುತ್ವಕ್ಕೆ ಪೂರಕವಾಗಿ ನಿರ್ಮಾಣವಾಗಿರುವ ಆಧುನಿಕ ಬಂಡವಾಳಶಾಹಿ ಜಾತಿ ಪದ್ಧತಿ ನಿರ್ಮೂಲನೆ ಮಾಡಲು ಅಸಾಧ್ಯ. ಹಳೆಯ ಶೋಷಣೆಯ ಮೇಲೆಯೇ ಆಧುನಿಕ ಶೋಷಣೆ ಪದ್ಧತಿ ರೂಪುಗೊಂಡಿದೆ ಎಂದು ಅವರು ತಿಳಿಸಿದರು.