ಶಾಲೆ ಆರಂಭಕ್ಕೂ ಮುನ್ನ ಪಠ್ಯ ಪುಸ್ತಕ ವಿತರಣೆಗೆ ಶಿಕ್ಷಣ ಇಲಾಖೆ ಅಗತ್ಯ ಕ್ರಮ
ಬೆಂಗಳೂರು, ಮೇ 19: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಪಠ್ಯಪುಸ್ತಕಗಳನ್ನು ಶಾಲೆಗಳು ಆರಂಭಕ್ಕೂ ಮೊದಲೇ ಜೂ.1 ರೊಳಗೆ ಎಲ್ಲ ಶಾಲೆಗಳಿಗೆ ಕಳುಹಿಸಲು ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ.
ಪಠ್ಯಪುಸ್ತಕ ಮುದ್ರಣದ ಜವಾಬ್ದಾರಿ ವಹಿಸಿಕೊಂಡಿರುವ ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯು ಶಾಲೆ ಪ್ರಾರಂಭವಾಗುವ ಮೊದಲೇ ಪಠ್ಯಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದೆ. ಇದುವರೆಗೆ, ನಾನಾ ಕಾರಣಗಳಿಂದ ಪಠ್ಯಪುಸ್ತಕಗಳು ಶಾಲೆಗಳಿಗೆ ತಲುಪುವುದು ತಡವಾಗುತ್ತಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮುಂಚಿತವಾಗಿ ಮುದ್ರಣಾಲಯಕ್ಕೆ ಪಠ್ಯವನ್ನು ನೀಡಲಾಗಿದ್ದು, ಶೇ.85ರಷ್ಟು ಮುದ್ರಣ ಪೂರ್ಣಗೊಂಡಿದೆ. ಮೊದಲೇ ತಪ್ಪುಗಳನ್ನು ಗುರುತಿಸಿ ಸರಿಪಡಿಸಲಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮರಾಠಿ, ಉರ್ದು ಭಾಷಾ ಹಾಗೂ ವಿಷಯವಾರು ಪುಸ್ತಕಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಕಚೇರಿಗಳಿಗೆ ರವಾನಿಸಲಾಗಿದೆ ಎಂದು ಸರ್ವಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕ ಡಾ.ಎಂ.ಟಿ.ರೇಜು ತಿಳಿಸಿದ್ದಾರೆ.
ಕಳೆದ ಬಾರಿ ಶಾಲೆ ಪ್ರಾರಂಭವಾಗಿ ಎರಡು ತಿಂಗಳು ಕಳೆದಿದ್ದರೂ ಕೆಲವು ಜಿಲ್ಲೆಗಳಿಗೆ ಪಠ್ಯಪುಸ್ತಕಗಳು ಸರಬರಾಜು ಆಗಿರಲಿಲ್ಲ. ಸಾಕಷ್ಟು ತಪ್ಪುಗಳು ಇದ್ದುದ್ದರಿಂದ ಮರುಮುದ್ರಣ ಮಾಡಬೇಕಾಯಿತು. ಮುದ್ರಣಕ್ಕೆ ಪೇಪರ್ ಕೊರತೆ ಉಂಟಾಗಿದ್ದರಿಂದ ವಿತರಣೆ ತಡವಾಗಿತ್ತು.
ಆನ್‌ಲೈನ್ ಹಣಪಾವತಿ: ಖಾಸಗಿ ಶಾಲೆಗಳು ಪಠ್ಯ ಪುಸ್ತಕ ಖರೀದಿಸಲು ಬ್ಯಾಂಕ್‌ಗೆ ಹೋಗಿ ಹಣಪಾವತಿ ಮಾಡಬೇಕಿತ್ತು. ಇದು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಈ ಬಾರಿಯಿಂದ ಆನ್‌ಲೈನ್ ಹಣ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಬಹಳಷ್ಟು ಪ್ರಕ್ರಿಯೆಯನ್ನು ಆನ್‌ಲೈನ್ ವ್ಯವಸ್ಥೆ ಮಾಡಿರುವುದರಿಂದ ಕೆಲಸಗಳು ವೇಗಗೊಂಡಿವೆ ಎಂದು ರೇಜು ಹೇಳಿದ್ದಾರೆ.