ಜಾತಿ ವ್ಯವಸ್ಥೆ ಹೊಸ ರೂಪ ಪಡೆಯುತ್ತಿದೆ: ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ
ಬೆಂಗಳೂರು, ಮೇ 20: ಆಧುನಿಕ ಕಾಲದಲ್ಲಿ ಜಾತಿ ವ್ಯವಸ್ಥೆಯು ಹೊಸ ರೂಪ ಪಡೆಯುತ್ತಿದ್ದು, ಹಿಂದಿನ ಜಾತಿ ಪದ್ಧತಿಗಿಂತ ಹೆಚ್ಚು ಪ್ರಬಲವಾಗುತ್ತಿದೆ ಎಂದು ಆಂಗ್ಲ ಪ್ರಾಧ್ಯಾಪಕ ಹಾಗೂ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ಕ್ರಿಯಾ-ನವಕರ್ನಾಟಕ ಜಂಟಿಯಾಗಿ ಆಯೋಜಿಸಿದ್ದ ಜಾತಿ ದಮನ-ಅಸ್ಪಶ್ಯತೆಗಳ ವಿನಾಶ ಮತ್ತು ವರ್ಗ ಹೋರಾಟ-ಮಾರ್ಕ್ಸ್‌ವಾದಿ ಕಣ್ಣೋಟ’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಧುನಿಕತೆ ಆರಂಭವಾದ ಮೇಲೆ ಜಾತಿ ವ್ಯವಸ್ಥೆ ನಾಶವಾಗಿದೆ ಅಥವಾ ಆಗುತ್ತಿದೆ ಎಂದು ವಾದಿಸುವ ಮೂಲಕ ಜಾತಿ ಪದ್ಧತಿಯನ್ನು ಮರೆ ಮಾಚುವ ವ್ಯವಸ್ಥಿತ ಷ್ಯಡ್ಯಂತರ ನಡೆಯುತ್ತಿದೆ ಎಂದರು.
ಜಾತಿ ವ್ಯವಸ್ಥೆಯೇ ಇಲ್ಲ ಎಂದು ಹೇಳುತ್ತಾ, ಮತ್ತೊಂದು ಕಡೆ ಅದೇ ಜಾತಿಯನ್ನು ಮುಂದಿಟ್ಟುಕೊಂಡು ಅಧಿಕಾರ ಹಾಗೂ ಅನುಕೂಲಗಳನ್ನು ಪಡೆಯುತ್ತಿರುವ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ. ಆಧುನಿಕತೆಯಿಂದ ಜಾತಿ ಪದ್ಧತಿ ನಾಶವಾಗುತ್ತಿದೆ ಎಂದು ಸಮರ್ಥಿಸಿಕೊಳ್ಳುವವರು ಹಿಂದುಳಿದ ಹಾಗೂ ತಳ ಜಾತಿಗಳ ಸಾಮಾಜಿಕ ಸ್ಥಿತಿ ಯಾವ ಪರಿಸ್ಥಿತಿಯಲ್ಲಿದೆ ಎಂದು ವ್ಯಾಖ್ಯಾನಿಸಿ ಹೇಳಲಿ ಎಂದು ನುಡಿದರು.
ಆಧುನಿಕತೆಯ ಹೆಸರಿನಲ್ಲಿ ದೇಶದೊಳಗೆ ಕಾಲಿಟ್ಟಿರುವ ಬಂಡವಾಳಶಾಹಿ ವ್ಯವಸ್ಥೆ ಎಲ್ಲದಕ್ಕೂ ಕುಮ್ಮಕ್ಕು ನೀಡುತ್ತಿದ್ದು, ತಮ್ಮನ್ನು ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನ ಹಾಗೂ ಬ್ರಾಹ್ಮಣ್ಯಶಾಹಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿ ಮಾಡುವ ಸತತವಾದ ಪ್ರಯತ್ನ ನಡೆಯುತ್ತಿದ್ದು, ಅದಕ್ಕೆ ಮತ್ತೊಮ್ಮೆ ತಳ ಸಮುದಾಯಗಳನ್ನು ಬಲಿ ನೀಡಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದರು.
ವಿಶ್ವದಾದ್ಯಂತ ಎಲ್ಲ ಕಷ್ಟಗಳನ್ನು ಎದುರಿಸಿ, ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಲಾಗಿದೆ ಎಂಬ ಭ್ರಮೆಯಲ್ಲಿದ್ದ ಬಂಡವಾಳಶಾಹಿ ವ್ಯವಸ್ಥೆ ಇಂದು ಅತ್ಯಂತ ತೀವ್ರವಾದ ಸಂಕಷ್ಟದಲ್ಲಿ ಸಿಲುಕಿದೆ. ಅದನ್ನು ಮರೆ ಮಾಚಲು ಹೊಸ ಜನಾಂಗೀಯ ಧೋರಣೆ ಹುಟ್ಟಿಕೊಂಡಿದೆ. ಅದನ್ನು ಜಾರಿ ಮಾಡುವ ಉದ್ದೇಶದಿಂದ ಧರ್ಮ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಹಾಗೂ ಜಾತಿ-ಜಾತಿಗಳ ನಡುವೆ ಗಲಭೆ ಸೃಷ್ಟಿಸಲು ತೀವ್ರತರವಾದ ಪ್ರಯತ್ನ ನಡೆಯುತ್ತಿದೆ. ಸ್ಪಶ್ಯ ಹಾಗೂ ಅಸ್ಪಶ್ಯ ಎಂಬುದನ್ನು ಮರುಸ್ಥಾಪಿಸಲು ಮುಂದಾಗಿದೆ ಎಂದು ತಿಳಿಸಿದರು.
ಅಂಕಣಕಾರ ಶಿವಸುಂದರ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಜಾತಿಗಳು ಜಾಗೃತಿಗೊಳ್ಳುತ್ತಿವೆ. ನಮಗೆ ಶತ್ರು ಯಾರು ಎಂಬ ಸ್ಪಷ್ಟತೆ ತಳ ಸಮುದಾಯಗಳಿಗೆ ಇಲ್ಲದಾಗಿದೆ. ಜಾತಿಯು ದಮನ ಹಾಗೂ ಅಸ್ಪಶ್ಯತೆಯನ್ನು ದಾಟಿ ರಾಜಕಾರಣದಲ್ಲಿ ಅಡಗಿದೆ ಎಂದ ಅವರು, ಶೋಷಿತರಿಗೆ ಬ್ರಾಹ್ಮಣ್ಯ ಪ್ರಧಾನ ಶತ್ರುವಾಗಿತ್ತು ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ, ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ಹೀಗಾಗಿ, ಅಸ್ಪಶ್ಯರು ಎನಿಸಿಕೊಂಡವರು ಎಲ್ಲರೂ ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಂಬೇಡ್ಕರ್ ಬದುಕಿದ್ದರೂ ಇಂದಿನ ಜಾತಿ ವ್ಯವಸ್ಥೆಯನ್ನು ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಸೋಲುತ್ತಿದ್ದರು. ಇಂದಿನ ಸಂದರ್ಭಕ್ಕೆ ಅಂಬೇಡ್ಕರ್ ರಂಹತವರು ಮೂರು ಜನ ಬೇಕಾಗಿದೆ. ಬ್ರಾಹ್ಮಣವಾದ ಜಾತಿ ವ್ಯವಸ್ಥೆಯ ಪುನರುತ್ಥಾನಕ್ಕಾಗಿರುವ ಒಂದು ದಾರಿಯಾಗಿದೆ. ಅದನ್ನು ಮುಚ್ಚಿ ಹಾಕಬೇಕಾದ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಮಾರ್ಕ್ಸ್‌ವಾದಿಗಳು ಹಾಗೂ ಅಂಬೇಡ್ಕರ್ ವಾದಿಗಳು ಸ್ವ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾರತೀದಾಸ್ ವಿಶ್ವವಿದ್ಯಾಲಯದ ನಿವೃತ್ತ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟೇಶ ಅತ್ರೇಯ ಉಪಸ್ಥಿತರಿದ್ದರು.