×
Ad

‘ಎರಡು ಡಿಸಿಎಂ ಹುದ್ದೆ’ ಬಗ್ಗೆ ಹೈಕಮಾಂಡ್ ನಿರ್ಧಾರ: ಡಾ.ಜಿ.ಪರಮೇಶ್ವರ್

Update: 2018-05-20 20:32 IST

ಬೆಂಗಳೂರು, ಮೇ 20: ಎರಡು ಉಪ ಮುಖ್ಯಮಂತ್ರಿ ಹುದ್ದೆಗಳ ಪ್ರಸ್ತಾಪದ ಬಗ್ಗೆ ಹೈಕಮಾಂಡ್ ನಾಳೆ(ಮೇ 21) ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬುಧವಾರ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಅವರ ಜತೆ ಯಾರು ಪ್ರಮಾಣ ವಚನ ಸ್ವೀಕರಿಸಬೇಕು ಎಂಬ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಎಂದರು.

ನೂತನ ಸರಕಾರ ರಚನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಪಕ್ಷದ ಎಲ್ಲ ಶಾಸಕರು ಖಾಸಗಿ ಹೊಟೇಲ್‌ನಲ್ಲೆ ವಾಸ್ತವ್ಯ ಹೂಡಲಿದ್ದು, ಆ ಬಳಿಕ ಕ್ಷೇತ್ರಗಳಿಗೆ ತೆರಳಲಿದ್ದಾರೆ ಎಂದ ಅವರು, ಡಿಸಿಎಂ ಹುದ್ದೆ ಹಾಗೂ ಸಂಪುಟ ರಚನೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದರು.

ಮೈತ್ರಿ ಇಲ್ಲ: ರಾಜರಾಜೇಶ್ವರಿನಗರ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಕಣದಲ್ಲಿದ್ದು, ಆ ಎರಡೂ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಜತೆ ಮೈತ್ರಿ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News