ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಸೇರಿ ಆರು ಸಚಿವ ಸ್ಥಾನ ನೀಡಲು ಒತ್ತಾಯ

Update: 2018-05-20 15:08 GMT

ಬೆಂಗಳೂರು, ಮೇ 20: ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪಗೆ ಉಪಮುಖ್ಯಮಂತ್ರಿ ಹಾಗೂ 5 ಮಂದಿಗೆ ಸಚಿವ ಸ್ಥಾನ ನೀಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ, ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಪತ್ರದ ಮೂಲಕ ಒತ್ತಾಯಿಸಿದೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 46 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿತ್ತು. ಆ ಪೈಕಿ 16 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗೂ ಜೆಡಿಎಸ್‌ನಿಂದ 4 ಮಂದಿ ಆಯ್ಕೆಯಾಗಿದ್ದಾರೆ. ಇದರಲ್ಲಿ 5 ಶಾಸಕರಿಗೆ ಸಚಿವ ಹಾಗೂ ಒಬ್ಬರನ್ನು ಉಪಮುಖ್ಯಮಂತ್ರಿಯಾನ್ನಾಗಿ ಮಾಡಲೇಬೇಕು ಎಂದು ಮಹಾಸಭಾದ ಅಧ್ಯಕ್ಷ ಕೇಶವಕುಮಾರ್ ಆಗ್ರಹಿಸಿದ್ದಾರೆ.

ವೀರಶೈವ ಲಿಂಗಾಯಿತ ಸಮುದಾಯವು ಹಿಂದಿನಿಂದಲೂ ಕಾಂಗ್ರೆಸ್‌ನ್ನೆ ಬೆಂಬಲಿಸುತ್ತಾ ಬಂದಿದೆ. ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿಯ ಅಬ್ಬರದ ಪ್ರಚಾರದ ನಡುವೆಯೂ ಹಲವರನ್ನು ಶಾಸಕರಾಗಿ ಆಯ್ಕೆ ಆಗುವಂತೆ ನೋಡಿಕೊಳ್ಳಲಾಗಿದೆ. ಮುಂದೆಯೂ ಲಿಂಗಾಯತ ಸಮುದಾಯ ಕಾಂಗ್ರೆಸ್ ಹಾಗೂ ಜೆಡಿಎಸ್ ಮೇಲೆ ಮತ್ತಷ್ಟು ಒಲವನ್ನು ಪಡೆಯುವ ಸಲುವಾಗಿ ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ನೀಡುವ ಅಗತ್ಯವಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಹೀಗಾಗಿ ಅವರನ್ನು ಡಿಸಿಎಂ ಮಾಡುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಮಹಾಸಭಾದ ಅಧ್ಯಕ್ಷ ಎನ್.ತಿಪ್ಪಣ್ಣ ನವರೂ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News