ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿ ಪ್ರತಿಭಟನೆ

Update: 2018-05-20 15:10 GMT

ಬೆಂಗಳೂರು, ಮೇ 20: ನದಿ ನೀರು ಹಂಚಿಕೆ ಸಂಬಂಧ ಕಾವೇರಿ ನಿರ್ವಹಣಾ ಪ್ರಾಧಿಕಾರ ರಚಿಸಲು ಕೇಂದ್ರ ಸರಕಾರ ಹೊರಟಿರುವುದನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷ ಪ್ರತಿಭಟನೆ ನಡೆಸಿಯಿತು.

ರವಿವಾರ ನಗರದ ಕೆಂಪೇಗೌಡ ಬಸ್ ನಿಲ್ದಾಣ ಆವರಣದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಸರಕಾರದ ಭೂತ ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಪ್ರಾಧಿಕಾರ ರಚನೆಗೆ ಮುಂದಾಗಬಾರದು ಎಂದು ಒತ್ತಾಯ ಮಾಡಿದರು.

ಇದಕ್ಕೂ ಮೊದಲು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕೆಆರ್‌ಎಸ್, ಹಾರಂಗಿ, ಹೇಮಾವತಿ, ಕಬಿನಿ, ಕಾವೇರಿ ನದಿಗಳು ರಾಜ್ಯದ ಅವಿಭಾಜ್ಯ ಅಂಗ. ಈ ನದಿಗಳನ್ನು ತಮಿಳುನಾಡಿನವರು ತಮ್ಮ ಸ್ವಾಧೀನಕ್ಕೆ ಪಡೆಯಲು ಹೋರಾಟ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾವೇರಿ ನೀರು ನಿರ್ವಹಣ ಮಂಡಳಿ ರಚನೆ ಮಾಡಬಾರದು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರ ಕಾವೇರಿ ನಿರ್ವಹಣಾ ಪ್ರಾಧಿಕಾರದ ರಚಿಸುವ ಮೂಲಕ ರಾಜ್ಯಕ್ಕೆ ಅನ್ಯಾಯ ಎಸಗಿದೆ. ಈ ಮೂಲಕ ರಾಜ್ಯದ ಜಲಾಶಯಗಳ ಮೇಲೆ ನಿಯಂತ್ರಣ ಸಾಧಿಸಿ, ತಮಿಳುನಾಡಿಗೆ ಅನುಕೂಲ ಮಾಡಿದೆ. ಇನ್ನು ರಾಜ್ಯದ ಮುಂದೆ ಜಲಾಶಯಗಳು ಈ ಪ್ರಾಧಿಕಾರ ಹಿಡಿತಕ್ಕೆ ಹೋಗುತ್ತವೆ. ಕರ್ನಾಟಕಕ್ಕೆ ಮಾರಕವಾದ ಪ್ರಾಧಿಕಾರ ರಚಿಸಿದ್ದರೂ ಯಾವ ರಾಜಕೀಯ ಪಕ್ಷಗಳು, ರಾಜಕಾರಣಿಗಳು ದನಿ ಎತ್ತದಿರಿಸುವುದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು.

ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆ ವಿರೋಧಿಸದಿದ್ದರೆ, ಮುಂದೆ ಮೇಕಾದಾಟು ಯೋಜನೆ ಮೇಲೂ ಈ ಪ್ರಾಧಿಕಾರದ ಹಿಡಿತ ಸಾಧಿಸುತ್ತದೆ. ನೀರು, ವಿದ್ಯುತ್‌ಗಾಗಿ ಈ ಪ್ರಾಧಿಕಾರದ ಎದುರು ಕೈ ಕಟ್ಟಿ ನಿಲ್ಲಬೇಕಾಗುತ್ತದೆ. ಈ ಪ್ರಾಧಿಕಾರದ ರಚನೆ ವಿರುದ್ಧ ಮೊದಲಿನಿಂದಲೂ ಹೋರಾಟ ಮಾಡುತಾ ಬಂದಿದ್ದೇವೆ ಎಂದ ಅವರು, ಒಂದು ವೇಳೆ ಕೇಂದ್ರ ಸರಕಾರ ಕಾವೇರಿ ನೀರು ನಿರ್ವಹಣ ಮಂಡಳಿ ರಚನೆ ಮಾಡಿದ್ದೆ ಆದರೆ, ರಾಜ್ಯ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News