ಕನ್ನಡದ ಕಟ್ಟಾಳುಗಳಿಂದ ಕಸಾಪದ ಕಟ್ಟಡ ಸ್ಥಾಪನೆ: ಸಾಹಿತಿ ಬಾಬು ಕೃಷ್ಣಮೂರ್ತಿ

Update: 2018-05-20 15:17 GMT

ಬೆಂಗಳೂರು, ಮೇ 20: ಕನ್ನಡದ ಕಟ್ಟಾಳುಗಳು ಹಾಗೂ ಹಿರಿಯ ಸಾಹಿತಿಗಳ ಶ್ರಮದಿಂದಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಕಟ್ಟಡ ಸ್ಥಾಪನೆಯಾಯಿತು ಎಂದು ಪತ್ರಕರ್ತ, ಸಾಹಿತಿ ಬಾಬು ಕೃಷ್ಣಮೂರ್ತಿ ಹೇಳಿದ್ದಾರೆ.

ರವಿವಾರ ಕಸಾಪದ ಕುವೆಂಪು ಸಭಾಂಗಣದಲ್ಲಿ ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ 75ನೆ ವರ್ಷದ ಬಾಬು ಕೃಷ್ಣಮೂರ್ತಿ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಈ ಮೊದಲು ಕನ್ನಡ ಸಾಹಿತ್ಯ ಪರಿಷತ್‌ನ ಕಟ್ಟಡ ಬಹಳ ಚಿಕ್ಕದಾಗಿತ್ತು. ಆದರೆ, ಕನ್ನಡದ ಕಟ್ಟಾಳುಗಳು ಹಾಗೂ ಹಿರಿಯ ಸಾಹಿತಿಗಳ ಶ್ರಮದಿಂದಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಕಟ್ಟಡ ಸ್ಥಾಪನೆಯಾಯಿತು ಎಂದು ಹೇಳಿದರು.

ಪ್ರತಿಯೊಬ್ಬರೂ ಕಸಾಪದ ಇತಿಹಾಸವನ್ನು ಓದಿಕೊಂಡು ತಿಳಿದುಕೊಳ್ಳಬೇಕು. ಇದರಿಂದ, ನಮ್ಮ ಕನ್ನಡಿಗರ ಹೋರಾಟ ಹಾಗೂ ಸಾಹಿತಿಗಳ ಶ್ರಮ ಅರಿವಿಗೆ ಬರುತ್ತದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಪ್ರೊ.ಜಿ.ಅಶ್ವತ್ಥನಾರಾಯಣ ಮಾತನಾಡಿ, ಹಿಂದಿನ ಕಾಲದ ಮಹಿಳೆಯರು ಹೆಚ್ಚಿನ ಶಿಕ್ಷಣವನ್ನು ಪಡೆಯದಿದ್ದರೂ ನೂರಾರು ಪುಸ್ತಕಗಳನ್ನು ಓದುತ್ತಿದ್ದರು. ಆದರೆ, ಇಂದಿನ ಮಹಿಳೆಯರು ಹೆಚ್ಚು ಶಿಕ್ಷಣವನ್ನು ಪಡೆದಿದ್ದರೂ ಹೆಚ್ಚು ಪುಸ್ತಕಗಳ್ನು ಓದುವುದಿಲ್ಲ ಎಂದು ಹೇಳಿದರು.

ಅನ್ವೇಷಣೆಯ ಮೂಲಕ ಮಕ್ಕಳ ಪುಸ್ತಕ ಸೇರಿ ಇನ್ನಿತರ ಕೃತಿಗಳನ್ನು ರಚಿಸುತ್ತಿದ್ದ ಬಾಬು ಕೃಷ್ಣಮೂರ್ತಿ ಅವರು ನಮಗೆಲ್ಲರಿಗೂ ಮಾದರಿಯಾಗಿದ್ದಾರೆ. ಅಲ್ಲದೆ, ಬಾಬು ಕೃಷ್ಣಮೂರ್ತಿ ಅವರು ತಮ್ಮ ಆತ್ಮಕಥನವನ್ನು ಬರೆಯಬೇಕೆಂದು ಅಶ್ವತ್ಥನಾರಾಯಣ ಅವರು ತಿಳಿಸಿದರು. ಕನ್ನಡ ಸೇವಾರತ್ನ ಪ್ರಶಸ್ತಿಯನ್ನು ಲೇಖಕ ಕೆ.ಎನ್.ಭಗವಾನ್, ಚಿತ್ರಕಲಾವಿದ ಡಾ.ಬಿ.ಕೆ.ಎಸ್.ವರ್ಮಾ ಅವರಿಗೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಎಂ.ತಿಮ್ಮಯ್ಯ, ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾಯಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News