ಸಂಯುಕ್ತ ಅರಬ್ ಸಂಸ್ಥಾನದ ರಮಝಾನ್ ಕಿಟ್ ಕೊಡುಗೆ ತಿರಸ್ಕರಿಸಿದ ಜೆರುಸಲೇಂನ ಫೆಲೆಸ್ತೀನಿಯರು

Update: 2018-05-21 10:03 GMT

ಜೆರುಸಲೆಂ, ಮೇ 21: ಅಲ್-ಅಕ್ಸಾ ಮಸೀದಿಗೆ ಭೇಟಿ ನೀಡುವವರಿಗೆ ಸಂಯುಕ್ತ ಅರಬ್ ಸಂಸ್ಥಾನ ನೀಡಿದ ರಮಝಾನ್ ಊಟಗಳನ್ನು ತಿರಸ್ಕರಿಸಿರುವ ಜೆರುಸಲೇಂನ ಫೆಲೆಸ್ತೀನಿ ಹೋರಾಟಗಾರರು '#ವಿಆರ್ ನಾಟ್ ಹಂಗ್ರಿ' ಎನ್ನುವ ಹ್ಯಾಶ್ ಟ್ಯಾಗ್ ಅನ್ನು ಟ್ವಿಟ್ಟರ್ ನಲ್ಲಿ ಆರಂಭಿಸಿದ್ದಾರೆ.

ಫೆಲೆಸ್ತೀನನ್ನು ಇಸ್ರೇಲ್ ಆಕ್ರಮಿಸಿದ್ದನ್ನು ಬೆಂಬಲಿಸುತ್ತಿರುವ ಗಲ್ಫ್ ರಾಷ್ಟ್ರ ಉದ್ದೇಶಪೂರ್ವಕವಾಗಿ ಅಂತಾರಾಷ್ಟ್ರೀಯ ಗಿರೊ ಡಿ'ಇಟಾಲಿಯಾ ಸೈಕಲ್ ರೇಸಿಗೆ ತನ್ನ ತಂಡವನ್ನು ಕಳಿಸಿದೆ. ಈ ರೇಸ್ ಆಕ್ರಮಿತ ಜೆರುಸಲೇಂ ಮುಖಾಂತರ ನಕ್ಬಾದ 70ನೇ ವಾರ್ಷಿಕೋತ್ಸವದಂದು  ಹಾದುಹೋಗಿತ್ತು ಎಂದು ಹೋರಾಟಗಾರರು ಹೇಳುತ್ತಿದ್ದಾರೆ. ಈ ರೇಸ್ ನಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ತಂಡ ಭಾಗವಹಿಸಿರುವುದನ್ನು ಫೆಲೆಸ್ತೀನಿ ಒಲಿಂಪಿಕ್ ಸಮಿತಿ ಖಂಡಿಸಿದೆ. ಫೆಲೆಸ್ತೀನಿಯನ್ನರು ಹೋರಾಟ ನಡೆಸುತ್ತಿರುವಾಗ ಇಂತಹ ಭಾಗವಹಿಸುವಿಕೆ ದೇಶದ್ರೋಹದ ಸಮಾನ ಎಂದು ಅದು ಹೇಳಿದೆ.

ಇಸ್ರೇಲ್ ರೇಡಿಯೋ ಪ್ರಕಾರ ಸಂಯುಕ್ತ ಅರಬ್ ಸಂಸ್ಥಾನ ಹಾಗೂ ಇಸ್ರೇಲ್ ನಡುವಿನ ಸಂಬಂಧಗಳು ಸಹಜಗೊಳ್ಳುತ್ತಿವೆ ಎಂಬುದಕ್ಕೆ ದ್ಯೋತಕವಾಗಿ ಸಂವಹನ ಸಚಿವ ಅಯೂಬ್ ಅವರಿಗೆ ಎಮಿರೇಟ್ಸ್ ಭೇಟಿಗೆ ಆಹ್ವಾನ ನೀಡಲಾಗಿದೆ. ಅರಬ್ ರಾಷ್ಟ್ರದ ಅಧಿಕಾರಿಗಳು ಸದ್ಯದಲ್ಲಿಯೇ ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆಂದು ಅಲ್ಲಿಯ ಸಚಿವರು ಕೂಡ ಹೇಳಿದ್ದಾರೆ.

ಬಹರೈನ್ ಕೂಡ ಗಿರೊ ಡಿ'ಇಟಾಲಿಯಾ ಸೈಕಲ್ ರ್ಯಾಲಿಗೆ ತನ್ನ ತಂಡವೊಂದನ್ನು ಕಳುಹಿಸಿತ್ತು. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೆರುಸಲೆಂ ಅನ್ನು ಇಸ್ರೇಲ್ ರಾಜಧಾನಿಯನ್ನಾಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ಮಾನ್ಯ ಮಾಡಿದ ನಂತರ ಮನಾಮ ಕೂಡ ಇಸ್ರೇಲ್ ಗೆ ನಿಯೋಗವೊಂದನ್ನು ಕಳುಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News