ಪೊಲೀಸ್ ಠಾಣೆಯಲ್ಲಿ ರಂಪಾಟ: ಮಾಜಿ ಶಿವಸೇನಾ ಸಂಸದನ ಬಂಧನ

Update: 2018-05-21 15:59 GMT

ಔರಂಗಾಬಾದ್, ಮೇ 21: ಪುಂಡಾಟಿಕೆ ನಡೆಸಿದ ಕಾರಣಕ್ಕೆ ಬಂಧಿತರಾಗಿದ್ದ ಕೆಲವು ವ್ಯಕ್ತಿಗಳನ್ನು ಬಂಧಮುಕ್ತಗೊಳಿಸಬೇಕೆಂದು ಆಗ್ರಹಿಸುತ್ತಿದ್ದ ತಂಡವೊಂದರ ನೇತೃತ್ವ ವಹಿಸಿದ್ದ ಶಿವಸೇನೆಯ ಮಾಜಿ ಸಂಸದ ಪ್ರದೀಪ್ ಜೈಸ್ವಾಲ್ ಪೊಲೀಸ್ ಠಾಣೆಯಲ್ಲಿ ಗಲಾಟೆ ಎಬ್ಬಿಸಿ ರಂಪಾಟ ನಡೆಸಿದ ಕಾರಣ ಅವರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

 1996-98ರವರೆಗೆ ಸಂಸದರಾಗಿದ್ದ ಜೈಸ್ವಾಲ್, ಔರಂಗಾಬಾದ್ ಪುರಸಭೆಯ ಮಾಜಿ ಮೇಯರ್ ಕೂಡಾ ಆಗಿದ್ದರು. ಮೇ 11ರಂದು ನಡೆದಿದ್ದ ದೊಂಬಿ ಹಾಗೂ ಗಲಭೆಯಲ್ಲಿ ಶಾಮೀಲಾಗಿದ್ದರೆಂಬ ಶಂಕೆಯಲ್ಲಿ ಕೆಲವರನ್ನು ಕ್ರಾಂತಿ ಚೌಕ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದರು. ರವಿವಾರ ಕೆಲವು ಜನರೊಂದಿಗೆ ಠಾಣೆಗೆ ಆಗಮಿಸಿದ ಜೈಸ್ವಾಲ್, ಇವರನ್ನು ಬಂಧಮುಕ್ತಗೊಳಿಸಬೇಕೆಂದು ಒತ್ತಾಯಿಸಿದ್ದರು. ಇದನ್ನು ಪೊಲೀಸರು ನಿರಾಕರಿಸಿದಾಗ ಸಿಟ್ಟಿನಿಂದ ಠಾಣೆಯ ಫಲಕದ ಗಾಜನ್ನು ಒಡೆದರಲ್ಲದೆ, ಪೀಠೋಪಕರಣಗಳಿಗೆ ಹಾನಿ ಎಸಗಿದ್ದಾರೆ. ಘಟನೆಗೆ ಸಂಬಂಧಿಸಿ ಜೈಸ್ವಾಲ್ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

      ಈ ಮಧ್ಯೆ, ಮೇ 11ರ ದೊಂಬಿ ಪ್ರಕರಣದಲ್ಲಿ ಶಿವಸೇನೆಯ ಮುಖಂಡರು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡಿರುವುದು ಆ ಸಂದರ್ಭ ದಾಖಲಿಸಿಕೊಂಡಿರುವ ವೀಡಿಯೊ ದೃಶ್ಯಾವಳಿಯಿಂದ ಸಾಬೀತಾಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶಾಸಕರ ನಿಯೋಗವೊಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಿದೆ ಎಂದು ಎಐಎಂಐಎಂ ಶಾಸಕ ಇಮ್ತಿಯಾಝ್ ಜಲೀಲ್ ತಿಳಿಸಿದ್ದಾರೆ. ಈ ವೀಡಿಯೊದಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗಳೂ ಕಂಡುಬರುತ್ತಿದ್ದು , ದೊಂಬಿ ನಡೆಸುತ್ತಿದ್ದರೂ ಇವರು ಸುಮ್ಮನಿದ್ದ ಬಗ್ಗೆಯೂ ತನಿಖೆ ನಡೆಯಬೇಕು ಎಂದವರು ಆಗ್ರಹಿಸಿದ್ದಾರೆ. ನಳ್ಳಿ ನೀರಿನ ಅಕ್ರಮ ಸಂಪರ್ಕದ ವಿಷಯದಲ್ಲಿ ಮೇ 11ರಂದು ಔರಂಗಾಬಾದ್‌ನಲ್ಲಿ ತಂಡಗಳ ಮಧ್ಯೆ ಘರ್ಷಣೆ ನಡೆದಿದ್ದು ಇಬ್ಬರು ಮೃತಪಟ್ಟು, ಪೊಲೀಸ್ ಸಿಬ್ಬಂದಿಗಳೂ ಸೇರಿ ಹಲವರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News