ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಟಿಇಟಿ ಪರೀಕ್ಷೆ ಕಡ್ಡಾಯ ಬೇಡ: ಯೇಜಸ್ ಪಾಷಾ ಮನವಿ
ಬೆಂಗಳೂರು, ಮೇ 22: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಟಿಇಟಿ(ಶಿಕ್ಷಕರ ಅರ್ಹತಾ ಪರೀಕ್ಷೆ) ಕಡ್ಡಾಯ ಬೇಡವೆಂದು ಖಾಸಗಿ ಕಾಲೇಜಿನ ಪ್ರಾಧ್ಯಾಪಕ ಸೈಯದ್ ಯೇಜಸ್ ಪಾಷಾ ಮನವಿ ಮಾಡಿದ್ದಾರೆ.
ಡಿ.ಎಡ್ ಹಾಗೂ ಬಿ.ಎಡ್ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಅವೈಜ್ಞಾನಿಕ ಮಾದರಿಯಲ್ಲಿ ಟಿಇಟಿ ಪರೀಕ್ಷೆಯನ್ನು ಜಾರಿ ಮಾಡಲಾಗಿದೆ. ವಿಷಯವಾರು ಪರೀಕ್ಷೆಯ ಜೊತೆಗೆ ಇಂಗ್ಲಿಷ್‌ನ್ನು ಕಡ್ಡಾಯ ಮಾಡಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ. ಕನ್ನಡ ವಿಷಯವನ್ನು ಕಲಿಸುವ ಶಿಕ್ಷಕನಿಗೆ ಇಂಗ್ಲಿಷ್ ಅಗತ್ಯವಿಲ್ಲದಿದ್ದರೂ ಟಿಇಟಿ ಪರೀಕ್ಷೆಯಲ್ಲಿ ಸೇರಿಸಲಾಗಿದೆ ಎಂದು ಅವರು ಆರೋಪಿಸಿದರು.
ಸುಮಾರು 3ಲಕ್ಷ ವಿದ್ಯಾರ್ಥಿಗಳು ಟಿಇಟಿ(ಶಿಕ್ಷಕ ಅರ್ಹತಾ ಪರೀಕ್ಷೆ) ಪರೀಕ್ಷೆಯನ್ನು ಬರೆದರೆ, ಅದರಲ್ಲಿ ಪಾಸಾಗುವವರು ಕೇವಲ 20ರಿಂದ 25ಸಾವಿರ ಅಭ್ಯರ್ಥಿಗಳು ಮಾತ್ರ. ಟಿಇಟಿ ಪರೀಕ್ಷೆಯಲ್ಲಿ ಇಂಗ್ಲಿಷ್‌ನ್ನು ಕಡ್ಡಾಯಗೊಳಿಸುವುದರಿಂದ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಟಿಇಟಿ ಕಡ್ಡಾಯ ಬೇಡವೆಂದು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದರು.