ಬೆಂಗಳೂರು: ಅಂತಾರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ

Update: 2018-05-22 14:32 GMT

ಬೆಂಗಳೂರು, ಮೇ 22: ಭೂಮಿಯಲ್ಲಿರುವ ಜೀವ ವೈವಿಧ್ಯಗಳ ಗುರುತಿಸುವುದರ ಜೊತೆಗೆ ಅವುಗಳ ಸಂರಕ್ಷಣೆ ಅಗತ್ಯ ಎಂದು ಶಾಸಕ ಡಾ.ಸಿ.ಎಸ್. ಅಶ್ವಥ್ ನಾರಾಯಣ್ ಹೇಳಿದರು.

ಮಂಗಳವಾರ ನಗರದ ಮಲ್ಲೇಶ್ವರಂನ ಅರಣ್ಯಭವನದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ವತಿಯಿಂದ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಮಾತ್ರ ಜೀವ ಸಂಕುಲದ ಭಾಗವಲ್ಲ. ಭೂಮಿಯಲ್ಲಿ ಸದ್ದಿಲ್ಲದೆ ಜೀವಿಸುತ್ತಿರುವ ವೈವಿಧ್ಯಮಯ ಜೀವ ಸಂಕುಲಗಳು ಬಹಳಷ್ಟಿವೆ ಅವುಗಳನ್ನು ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಆಯಾ ಪ್ರದೇಶಗಳ ಹವಾಮಾನಕ್ಕನುಗುಣವಾಗಿ ಜೀವ ವೈವಿಧ್ಯ ಸಂರಕ್ಷಣೆ, ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ, ಜೀವ ವೈವಿಧ್ಯ ಜೀವಿಗಳ ಆವಾಸ ಸ್ಥಾನಗಳ ಗುರುತಿಸುವುದರ ಜೊತೆಗೆ ಸಂರಕ್ಷಣೆ ಮಾಡಬೇಕಾಗಿದೆ. ಜೀವ ವೈವಿಧ್ಯಗಳ ಕುರಿತು ಕುತೂಹಲ ಮತ್ತು ಕಾಳಜಿ ಇರುವುದು ಅಗತ್ಯ ಎಂದು ಅವರು ಹೇಳಿದರು.

ಈ ವೇಳೆ ಜಮಖಂಡಿ ತಾಲೂಕು ಹುಲಿಯಾಳ ಗ್ರಾಮದ ಲಕ್ಷ್ಮಿಬಾಯಿ ಎಂ.ಝಲಸಿ ಜೀವ ವೈವಿಧ್ಯತೆ ಮಹಿಳಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಪಿ.ಶೇಷಾದ್ರಿ, ಬಿಬಿಎಂಪಿ ಸದಸ್ಯೆ ಸುಮಂಗಲ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News