ಮೈತ್ರಿ ಸರಕಾರದ ವಿರುದ್ಧ ಬಿಜೆಪಿಯಿಂದ ‘ಜನಮತ ವಿರೋಧಿ ದಿನ ಆಚರಣೆ’
ಬೆಂಗಳೂರು, ಮೇ 22: ರಾಜ್ಯದ ಜನರಿಂದ ತಿರಸ್ಕೃತಗೊಂಡಿರುವ ಕಾಂಗ್ರೆಸ್- ಜೆಡಿಎಸ್ ಪಕ್ಷಗಳ ಅಪವಿತ್ರ ಮೈತ್ರಿ ಸರಕಾರ ರಚನೆ ವಿರುದ್ಧ ಬಿಜೆಪಿಯಿಂದ ನಾಳೆ (ಮೇ 23) ರಾಜ್ಯಾದ್ಯಂತ ಜನಮತ ವಿರೋಧಿ ದಿನವನ್ನಾಗಿ ಆಚರಿಸಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರಕಾರದ ವಿರುದ್ಧ ಎಲ್ಲ ಜಿಲ್ಲಾ ಕೇಂದ್ರಗಳು ಸೇರಿ ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಲಿದ್ದು, ಬೆಂಗಳೂರಿನ ಮೌರ್ಯ ವೃತ್ತದಲ್ಲಿನ ಗಾಂಧೀಜಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
ತಮ್ಮ ಪಕ್ಷಕ್ಕೆ ಬಹುಮತ ಬಂದಿದ್ದರೆ ರೈತರ ಸಾಲಮನ್ನಾ ಮಾಡುತ್ತಿದ್ದೆ ಎಂದು ನಿಯೋಜಿತ ಸಿಎಂ ಕುಮಾರಸ್ವಾಮಿ ಹೇಳುವ ಮೂಲಕ ಜೆಡಿಎಸ್‌ಗೆ ಜನಾದೇಶ ದೊರೆತಿಲ್ಲವೆಂದು ಸ್ವತಃ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಲೋಕಾಯುಕ್ತ ಬಲಪಡಿಸಿ ಹಗರಣ ನಡೆಸಿದವರನ್ನು ಜೈಲಿಗೆ ತಳ್ಳುತ್ತೇನೆಂದಿದ್ದ ಅವರು ಈಗ ಮೌನ ತಳೆದಿದ್ದಾರೆ. ಚುನಾವಣಾ ಪ್ರಣಾಳಿಕೆಗೆ ಮತ್ತು ಚುನಾವಣೆ ವೇಳೆ ಕೊಟ್ಟ ಮಾತಿಗೆ ಕುಮಾರಸ್ವಾಮಿ ಬದ್ಧರಾಗಿಲ್ಲ. ಕುರ್ಚಿ ಸಿಗುತ್ತಿದ್ದಂತೆ ಎಲ್ಲವನ್ನೂ ಮರೆತಿದ್ದಾರೆ. ಜನರಿಂದ ತಿರಸ್ಕೃತಗೊಂಡರೂ ಮೈತ್ರಿ ಸರಕಾರ ರಚಿಸುತ್ತಿರುವುದು ಪ್ರಜಾಪ್ರಭುತ್ವದ ಅಪಹಾಸ್ಯ ಎಂದು ಅವರು ಟೀಕಿಸಿದರು.
ಕಾಂಗ್ರೆಸಿನ 5 ವರ್ಷಗಳ ಆಡಳಿತದ ವೈಫಲ್ಯಗಳು ಮತ್ತು ಭ್ರಷ್ಟಾಚಾರವನ್ನು ಚುನಾವಣೆಯಲ್ಲಿ ಬಿಜೆಪಿ ಪ್ರಮುಖವಾಗಿ ಪ್ರಸ್ತಾಪಿಸಿತ್ತು. ಅಲ್ಲದೆ, ಈ ಚುನಾವಣೆಯು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ದುರಾಡಳಿತಗಳ ಕೇಂದ್ರೀಕೃತವಾಗಿತ್ತು. ಫಲಿತಾಂಶದಲ್ಲಿ ಸ್ಪಷ್ಟವಾಗಿ ಮತದಾರರು ಇದಕ್ಕೆ ಮನ್ನಣೆ ನೀಡಿದ್ದಾರೆ. 119 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದರೂ ಜೆಡಿಎಸ್ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದೆ. ಮೈತ್ರಿಯು ‘ಅದು ಹಳಸಿತ್ತು. ಇದು ಹಸಿದಿತ್ತು’ ಎಂಬಂತಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಏಕೈಕ ಉದ್ದೇಶದಿಂದ ಮಾಡಿಕೊಂಡಿರುವ ಈ ಮೈತ್ರಿ ಹೆಚ್ಚುದಿನ ಉಳಿಯುವುದಿಲ್ಲ ಎಂದು ಲೇವಡಿ ಮಾಡಿದರು.
ನಾಳಿನ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ಪಕ್ಷದ ಯಾವುದೇ ನಾಯಕರು ಪಾಲ್ಗೊಳ್ಳುವುದಿಲ್ಲ. ಬೆಂಗಳೂರಿನಲ್ಲಿ ಮೇ 23ರಂದು ನಡೆಸಲು ಉದ್ದೇಶಿಸಿದ್ದ ಬಿಜೆಪಿ ಪರಾಜಿತ ಅಭ್ಯರ್ಥಿಗಳ ಸಭೆಯನ್ನು ಮುಂದೂಡಲಾಗಿದೆ ಎಂದು ಸಿ.ಟಿ.ರವಿ ತಿಳಿಸಿದರು.