ಐಸಿಎಸ್‌ಇ ಪಠ್ಯದಲ್ಲಿ ಲಾಲ್‌ಬಾಗ್ ಕುರಿತು ಪಾಠ

Update: 2018-05-22 16:08 GMT

ಬೆಂಗಳೂರು, ಮೇ 22: ಬೆಂಗಳೂರಿನ ಇತಿಹಾಸ ಸಾರುವ ಹಾಗೂ ಮುಕುಟ ಮಣಿಯಂತಿರುವ ಸಸ್ಯಕಾಶಿ ಲಾಲ್‌ಬಾಗ್ ಕುರಿತು ಇದೇ ಮೊದಲ ಬಾರಿಗೆ ಐಸಿಎಸ್‌ಇನ ನಾಲ್ಕನೆ ತರಗತಿಗೆ ಪಠ್ಯವಾಗಿದೆ.

ಐಸಿಎಸ್‌ಇನ ನಾಲ್ಕನೆ ತರಗತಿಯಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಂಡಿರುವ ವಿದ್ಯಾರ್ಥಿಗಳು ಲಾಲ್‌ಬಾಗ್ ಕುರಿತು ಪಾಠವನ್ನು ಅಭ್ಯಾಸ ಮಾಡಲಿದ್ದಾರೆ. ಈ ಪುಸ್ತಕದಲ್ಲಿ 15 ಪಾಠಗಳಿದ್ದು, ಅಬ್ಬಿ ಜಲಪಾತ, ಕಿತ್ತೂರು ರಾಣಿ ಚೆನ್ನಮ್ಮ, ಆದರ್ಶ ಶಿಕ್ಷಕ ಡಾ.ಎಸ್.ರಾಧಾಕೃಷ್ಣನ್ ಸೇರಿದಂತೆ ಹಲವು ಉಪಯುಕ್ತ ಮಾಹಿತಿಯನ್ನೊಳಗೊಂಡ ವಿಷಯಗಳಿವೆ.

ಲಾಲ್‌ಬಾಗ್ ಕುರಿತು ಏನೇನಿದೆ: ಸಿಬಿಎಸ್‌ಇ ನಾಲ್ಕನೆ ತರಗತಿಯ ಪಠ್ಯದಲ್ಲಿ ಲಾಲ್‌ಬಾಗ್ ಕುರಿತು ವಿಸ್ತೃತವಾದ ಮಾಹಿತಿಯಿದೆ. ಮೈಸೂರಿನ ರಾಜ ಹೈದರಾಲಿಯಿಂದ ಸ್ಥಾಪಿತಗೊಂಡ ಲಾಲ್‌ಬಾಗ್ ಸಸ್ಯಕಾಶಿಯಾಗಿ ಬೆಳೆದು ಬಂದ ಬಗೆಯನ್ನು ವಿವರಿಸಲಾಗಿದೆ. ಹೈದರಾಲಿ, ಟಿಪ್ಪು ಸುಲ್ತಾನ್ ಹಾಗೂ ಬ್ರಿಟಿಷರು ಆಡಳಿತದಲ್ಲಿ ಲಾಲ್‌ಬಾಗ್‌ನಲ್ಲಿ ದೇಶ-ವಿದೇಶ ಹೂ ಗಿಡಗಳು ಸೇರಿದಂತೆ ವಿವಿಧ ತಳಿಯ ಹಣ್ಣು-ತರಕಾರಿ ಗಿಡಗಳನ್ನು ತಂದು ವಿಶೇಷವಾಗಿ ಬೆಳೆಸುತ್ತಿದ್ದುದನ್ನು ವಿವರಿಸಲಾಗಿದೆ.

ಲಾಲ್‌ಬಾಗ್ ಕೇವಲ ಸಸ್ಯಕಾಶಿಯಲ್ಲದೆ ಕೆಂಪೇಗೌಡ ಗೋಪುರ, ಗುಲಾಬಿವನ, ಪುಷ್ಪಗಡಿಯಾರ, ತಾವರೆಕೊಳ, ಲಾಲ್‌ಬಾಗ್ ಕೆರೆ, ವಾದ್ಯಮಂಟಪ...ಹೀಗೆ ಲಾಲ್‌ಬಾಗ್‌ನ ವಿಭಿನ್ನ ವಿಶೇಷಗಳ ಕುರಿತು ದಾಖಲಿಸಲಾಗಿದೆ. ಹಾಗೂ ಗಾಜಿನ ಮನೆಯ ಆರಂಭ ಆದದ್ದು ಯಾವಾಗ, ಅದರ ವಿಶೇಷ, ಗಾಜಿನ ಮನೆಯಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುವ ಫಲಪುಷ್ಪ ಪ್ರದರ್ಶನಗಳ ಕುರಿತು ಮಾಹಿತಿ ನೀಡಲಾಗಿದ್ದು, ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಚಿತ್ರಗಳು ಹಾಗೂ ಸರಳಭಾಷೆಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News