ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಚಿಂತನೆ

Update: 2018-05-23 03:50 GMT

ಹೊಸದಿಲ್ಲಿ, ಮೇ 23: ಒಂದೇ ಸಮನೆ ಇಂಧನ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲ ದಿನಗಳಲ್ಲಿ ಪಟ್ರೋಲ್ ಹಾಗೂ ಡೀಸೆಲ್ ದರವನ್ನು 2ರಿಂದ 4 ರೂಪಾಯಿವರೆಗೆ ಇಳಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.

ಪ್ರಧಾನಿ ಕಚೇರಿ, ಹಣಕಾಸು ಸಚಿವಾಲಯ, ಪೆಟ್ರೋಲಿಯಂ ಸಚಿವಾಲಯ ಮತ್ತು ಸರ್ಕಾರಿ ಸ್ವಾಮ್ಯದ ಮಾರಾಟ ಕಂಪೆನಿಗಳು ಒಟ್ಟಾಗಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಿವೆ ಎಂದು ಹಣಕಾಸು ಸಚಿವಾಲಯ ಪ್ರಕಟಿಸಿದೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸುಂಕಗಳನ್ನು ಕಡಿತಗೊಳಿಸುವ ಮೂಲಕ ಮತ್ತು ಡೀಲರ್‌ಗಳ ಕಮಿಷನ್ ಕಡಿತಗೊಳಿಸುವ ಮೂಲಕ ದರ ಕಡಿತಕ್ಕೆ ಚಿಂತನೆ ನಡೆದಿದೆ.

ಇಂಧನ ಚಿಲ್ಲರೆ ಮಾರಾಟದ ಮೇಲೆ ಶೇಕಡ 37ರಿಂದ ಶೇಕಡ 47ರವರೆಗೂ ತೆರಿಗೆ ವಿಧಿಸಲಾಗುತ್ತಿದ್ದು, ಶೇಕಡ 3.8ರಿಂದ 4.8ವರೆಗೆ ಡೀಲರ್ ಕಮಿಷನ್ ಇರುತ್ತದೆ. "ಹಣಕಾಸು ಹಾಗೂ ಪೆಟ್ರೋಲಿಯಂ ಸಚಿವಾಲಯ ಸಮನ್ವಯದಿಂದ ಈ ನಿರ್ಧಾರ ಕೈಗೊಳ್ಳಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದ ಪರಿಣಾಮವಾಗಿ ಈ ಬಿಕ್ಕಟ್ಟು ತಲೆದೋರಿದೆ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಪ್ರತಿ ಲೀಟರ್‌ಗೆ ಒಂದು ರೂಪಾಯಿಯಷ್ಟು ಇಳಿಕೆ ಮಾಡಿದರೆ, ಸರ್ಕಾರದ ಬೊಕ್ಕಸಕ್ಕೆ 13ರಿಂದ 14 ಸಾವಿರ ಕೋಟಿ ರೂಪಾಯಿ ನಷ್ಟವಾಗಲಿದೆ. ಇತ್ತೀಚಿನ ದಿನಗಳಲ್ಲಿ ತೈಲಬೆಲೆ ದಾಖಲೆಮಟ್ಟಕ್ಕೆ ತಲುಪಿದ್ದು, ಪೆಟ್ರೋಲ್ ದರ 76.87 ರೂಪಾಯಿ ಹಾಗೂ ಡೀಸೆಲ್ ದರ 68.08 ರೂಪಾಯಿ ಆಗಿದೆ. ಕಳೆದ ಒಂಬತ್ತು ದಿನಗಳಲ್ಲೇ ಪೆಟ್ರೋಲ್ ಬೆಲೆ 2.24 ರೂಪಾಯಿ ಹಾಗೂ ಡೀಸೆಲ್ ಬೆಲೆ 2.15 ರೂಪಾಯಿ ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News