‘ಕನಿಷ್ಠ ಒಬ್ಬರಾದರೂ ಸಾಯಬೇಕು’

Update: 2018-05-23 07:35 GMT

ತೂತುಕುಡಿ, ಮೇ 23: ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಮಿಶ್ರಣ ಘಟಕ ಸ್ಟೆರ್ಲೈಟ್ ಕಂಪೆನಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಾಳಿ ಪೊಲೀಸ್ ಗೋಲಿಬಾರಿನಲ್ಲಿ ಕನಿಷ್ಠ 11 ಮಂದಿ ಸಾವಿಗೀಡಾದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಈ ಸಂದರ್ಭದ ವೀಡಿಯೋವೊಂದು ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ. 

ಪ್ರತಿಭಟನಾ ಸ್ಥಳಕ್ಕಿಂತ ಅನತಿ ದೂರದಲ್ಲಿ ಸಾಮಾನ್ಯ ಉಡುಪಿನಲ್ಲಿದ್ದ ತಮಿಳುನಾಡಿನ ಪೊಲೀಸ್ ಸಿಬ್ಬಂದಿಯೊಬ್ಬ ಪೊಲೀಸ್ ಬಸ್ಸೊಂದರ ಮೇಲೆ ಏರಿದ್ದ. ಆತನ ಕೈಯಲ್ಲಿ ರೈಫಲ್ ಇತ್ತು, ಕೆಳಗೆ ರಸ್ತೆಯಲ್ಲಿ ಸಾಕಷ್ಟು ಪೊಲೀಸರಿದ್ದರು. ಕೆಲವರು ಗುಂಡು ನಿರೋಧಕಗಳನ್ನು ಧರಿಸಿದ್ದರೆ ಇನ್ನು ಕೆಲವರು ತಮ್ಮ ಎಂದಿನ ಸಮವಸ್ತ್ರದಲ್ಲಿದ್ದರು. ಇದೇ ಸಂದರ್ಭ ಇನ್ನೊಬ್ಬ ಪೊಲೀಸ್ ಸಿಬ್ಬಂದಿ ಬಸ್ಸಿನ ಮೇಲೇರಿ ತನ್ನ ರೈಫಲನ್ನು ಪ್ರತಿಭಟನಾಕಾರರತ್ತ ಗುರಿಯಾಗಿಸುತ್ತಾನೆ. ಆಗ ಯಾರೋ ಪೊಲೀಸ್ ಸಿಬ್ಬಂದಿಯೊಬ್ಬ ‘‘ಕನಿಷ್ಠ ಒಬ್ಬನಾದರೂ ಸಾಯಬೇಕು’’ ಎಂದು ಹೇಳುತ್ತಿರುವುದು ಕೇಳಿಸುತ್ತದೆ. ಬಳಿಕ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸುವುದು ವೀಡಿಯೋದಲ್ಲಿ ದಾಖಲಾಗಿದೆ. ಆದರೆ ಆ ಗುಂಡು ಯಾರಿಗಾದರೂ ತಾಗಿತ್ತೇ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ. 

ಈ ಘಟನೆಯಲ್ಲಿ 9 ಮಂದಿ ಗೋಲಿಬಾರಿಗೆ ಬಲಿಯಾಗಿದ್ದರೆ, ಒಟ್ಟು 11 ಮಂದಿ ಸಾವಿಗೀಡಾಗಿದ್ದಾರೆ. ಘಟನೆಯ ತನಿಖೆಗೆ  ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಆದೇಶಿಸಿದ್ದಾರೆ.

ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಲು ಕಾರಣವೇನೆಂದು ತಿಳಿದಿಲ್ಲ. ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ವಾಹನಗಳನ್ನು ಉರುಳಿಸಿ, ಹಲವು ವಾಹನಗಳಿಗೆ ಬೆಂಕಿ ಹಚ್ಚಿ, ಪೊಲೀಸರತ್ತ ಕಲ್ಲೆಸೆದು, ಜಿಲ್ಲಾ ಕಲೆಕ್ಟರ್ ಕಚೇರಿಯಲ್ಲಿ ದಾಂಧನೆ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News