ಇಂಧನ ಬೆಲೆಗಳು ನಿರಂತರ 10ನೇ ದಿನವೂ ಏರಿಕೆ : ದಿಲ್ಲಿಯಲ್ಲಿ ದಾಖಲೆ ಸೃಷ್ಟಿಸಿದ ಪೆಟ್ರೋಲ್ ದರ

Update: 2018-05-23 17:21 GMT

ಹೊಸದಿಲ್ಲಿ,ಮೇ 23: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸಿಲ್ ದರಗಳು ನಿರಂತರ 10ನೇ ದಿನವಾದ ಬುಧವಾರವೂ ಏರಿಕೆಯಾಗಿವೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ 19 ದಿನಗಳ ಕಾಲ ಬೆಲೆ ಏರಿಕೆಯ ಗೋಜಿಗೆ ಹೋಗಿರದಿದ್ದ ತೈಲ ಮಾರಾಟ ಕಂಪನಿಗಳು ಚುನಾವಣೆ ಮುಗಿದ ಬೆನ್ನಿಗೇ ಪ್ರತಿದಿನವೂ ಬೆಲೆಗಳನ್ನು ಹೆಚ್ಚಿಸುತ್ತಿವೆ.

ದಿಲ್ಲಿಯಲ್ಲಿ ಬ್ರಾಂಡ್‌ರಹಿತ ಪೆಟ್ರೋಲ್‌ನ ಬೆಲೆ ಪ್ರತಿ ಲೀ.ಗೆ 77.17 ರೂ.ಗೆ ತಲುಪಿದ್ದು,ಇದು ರಾಜಧಾನಿಯ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆಯಾಗಿದೆ. ಮಂಗಳವಾರ ದರ ಪ್ರತಿ ಲೀಟರ್‌ಗೆ 76.87 ರೂ.ಆಗಿದ್ದು,ಬುಧವಾರ 30 ಪೈಸೆ ಏರಿಕೆಯಾಗಿದೆ. ದಿಲ್ಲಿಯಲ್ಲಿ ಬುಧವಾರ ಡೀಸಿಲ್ ಬೆಲೆ ಪ್ರತಿ ಲೀಟರ್‌ಗೆ 68.34ಕ್ಕೆ ಏರಿಕೆಯಾಗಿದ್ದು,ಇದೂ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ.

ಪೆಟ್ರೋಲ್ ದರ ಇತರ ಮಹಾನಗರಗಳಲ್ಲಿಯೂ ಬುಧವಾರ ದಾಖಲೆ ಮಟ್ಟವನ್ನು ತಲುಪಿದ್ದು,ಪ್ರತಿ ಲೀ.ಗೆ ಮುಂಬೈನಲ್ಲಿ 84.99 ರೂ.,ಚೆನ್ನೈನಲ್ಲಿ 80.11 ರೂ. ಮತ್ತು ಕೋಲ್ಕತಾದಲ್ಲಿ 79.83 ರೂ. ಆಗಿತ್ತು. ಈ ನಗರಗಲ್ಲಿ ಡೀಸಿಲ್ ದರಗಳು ಪ್ರತಿ ಲೀ.ಗೆ ಅನುಕ್ರಮವಾಗಿ 72.76 ರೂ.,72.14 ರೂ. ಮತ್ತು 70.89 ರೂ.ಗೆ ಏರಿಕೆಯಾಗಿವೆ.

ದೇಶದ ಅತ್ಯಂತ ದೊಡ್ಡ ತೈಲ ಮಾರಾಟ ಕಂಪನಿಯಾಗಿರುವ ಐಒಸಿ ಮೇ 14ರಿಂದ ಪ್ರತಿ ಲೀಟರ್‌ಗೆ ಪೆಟ್ರೋಲ್ ದರವನ್ನು 2.54 ರೂ. ಮತ್ತು ಡೀಸಿಲ್ ದರವನ್ನು 2.41 ರೂ.ಗಳಷ್ಟು ಹೆಚ್ಚಿಸಿದೆ. ದೇಶಾದ್ಯಂತ ಇಂಧನ ಬೆಲೆಗಳು ಏರುತ್ತಿದ್ದು,ಬಿಜೆಪಿ ಸರಕಾರವು ಇವುಗಳ ಮೆಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಬಹುದೆಂಬ ಊಹಾಪೋಹಗಳು ಹೆಚ್ಚುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News