×
Ad

"ಅವರು ಮಾಡಿರುವುದರಲ್ಲಿ ತಪ್ಪೇನಿದೆ?": ನಿತೀಶ್ ಕುಮಾರ್ ಹಿಜಾಬ್ ಎಳೆದ ಪ್ರಕರಣ ಸಮರ್ಥಿಸಿಕೊಂಡ ಕೇಂದ್ರ ಸಚಿವ ಗಿರಿರಾಜ್ ಸಿಂಗ್!

Update: 2025-12-18 09:24 IST

Photo credit:X, PTI

ಹೊಸದಿಲ್ಲಿ: ಸಾರ್ವಜನಿಕ ಸಮಾರಂಭದಲ್ಲಿ ವೈದ್ಯೆಯ ಹಿಜಾಬ್ ಎಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ದೇಶಾದ್ಯಂತ ವ್ಯಾಪಕ ಟೀಕೆ- ಆಕ್ರೋಶಗಳು ವ್ಯಕ್ತವಾದ ಬೆನ್ನಲ್ಲೇ, ನಿತೀಶ್ ಕ್ರಮವನ್ನು ಸಮರ್ಥಿಸಿಕೊಳ್ಳುವ ಮೂಲಕ ಬಿಜೆಪಿ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್, ವಿವಾದಕ್ಕೆ ತುಪ್ಪ ಸುರಿದಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸುವಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿಕೊಂಡಾಗ, "ಅವರು ಮಾಡಿರುವುದರಲ್ಲಿ ತಪ್ಪೇನಿದೆ?" ಎಂದು ಮರು ಪ್ರಶ್ನೆ ಎಸೆದರು. "ನೇಮಕಾತಿ ಪತ್ರ ಪಡೆಯಲು ಬರುವಾಗ ಮುಖ ತೋರಿಸಲು ಆಕೆ ಏಕೆ ಭಯ ಪಡಬೇಕು? ನೀವು ಮತ ಚಲಾಯಿಸಲು ನಿಮ್ಮ ಮುಖ ತೋರಿಸಬೇಡವೇ?" ಎಂದು ಸಿಂಗ್ ಸಮರ್ಥಿಸಿಕೊಂಡರು.

ಮಂಗಳವಾರ 1200ಕ್ಕೂ ಹೆಚ್ಚು ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ವೇಳೆ ಕುಮಾರ್ ಆರಂಭದಲ್ಲಿ ಹಿಜಾಬ್ ಧರಿಸಿದ್ದ ವೈದ್ಯೆ ಜತೆ ಮಾತನಾಡುತ್ತಿರುವುದು ದಾಖಲಾಗಿದೆ. ಬಳಿಕ ಸಿಎಂ ವೈದ್ಯೆಯ ಹಿಜಾಬ್ ಎಳೆಯುತ್ತಿದ್ದಾಗ ಉಪಮುಖ್ಯಮಂತ್ರಿ ಸಮರ್ಥ್ ಚೌಧರಿ ತಡೆಯುವ ಪ್ರಯತ್ನ ಮಾಡಿದ್ದಾರೆ. ಸಿಎಂ ಕ್ರಮದ ವಿರುದ್ಧ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಕ್ರಮವನ್ನು ಸಮರ್ಥಿಸಿಕೊಳ್ಳಲು ಜೆಡಿಯು ಹೆಣಗಾಡುತ್ತಿದೆ.

ನಿತೀಶ್ ಸಹೋದ್ಯೋಗಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಝಮಾ ಖಾನ್ ಹೇಳಿಕೆ ನೀಡಿ, "ನಿತೀಶ್ ಅವರು ಮುಸ್ಲಿಂ ಹೆಣ್ಣುಮಗಳ ಬಗ್ಗೆ ಪ್ರೀತಿ ತೋರಿದ್ದಾರೆ. ಜೀವನದಲ್ಲಿ ಯಶಸ್ವಿಯಾದ ಮುಸ್ಲಿಂ ಹುಡುಗಿಯ ಮುಖವನ್ನು ಸಮಾಜಕ್ಕೆ ಪ್ರದರ್ಶಿಸಲು ಸಿಎಂ ಬಯಸಿದ್ದರು" ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News