ಉದ್ಯೋಗ ಕಳೆದುಕೊಂಡು ಊರಿಗೆ ಮರಳುತ್ತಿರುವ ಅನಿವಾಸಿ ಕನ್ನಡಿಗರ ಪುನರ್ವಸತಿಗೆ ಯೋಜನೆ ಜಾರಿಗೊಳಿಸಿ: ಸಿಎಂಗೆ ಆಗ್ರಹ

Update: 2018-05-24 11:09 GMT
ಸಾಂದರ್ಭಿಕ ಚಿತ್ರ

ಗಲ್ಫ್ ರಾಷ್ಟದ ಬಿಕ್ಕಟ್ಟಿನಿಂದಾಗಿ ಉದ್ಯೋಗ ಕಳೆದುಕೊಂಡು ಬರಿಗೈಯಲ್ಲಿ ತವರಿಗೆ ಮರಳುತ್ತಿರುವ ಅನಿವಾಸಿ ಕನ್ನಡಿಗರ ಪುನರ್ವಸತಿಗಾಗಿ ಅಗತ್ಯ ಯೋಜನೆಗಳನ್ನು ಕೈಗೊಳ್ಳಬೇಕೆಂದು ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ರಿಯಾಝ್ ಫರಂಗಿಪೇಟೆ ನೂತನ ಸಿಎಂ ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದಾರೆ.

ಪತ್ರದ ಸಾರಾಂಶ ಹೀಗಿದೆ

ತಮ್ಮ ಕುಟುಂಬದ ಜೀವನ ನಿರ್ವಹಣೆಗೋಸ್ಕರ ಉದ್ಯೋಗವನ್ನು ಅರಸಿಕೊಂಡು ವಿದೇಶಕ್ಕೆ ತೆರಳಿ ಅನಿವಾಸಿ ಭಾರತೀಯರೆಂದೇ ಕರೆಯಲ್ಪಡುವ ಅಸಂಖ್ಯಾತ ಭಾರತೀಯರು ಇಂದು ವಿದೇಶದಲ್ಲಿದ್ದಾರೆ. ವಿದೇಶದಲ್ಲಿ ಉದ್ಯೋಗ ಹಾಗೂ ವ್ಯಾಪಾರ ಸರಿಯಾಗಿದ್ದಷ್ಟು ದಿನ ಅನಿವಾಸಿ ಭಾರತೀಯರು ತಮ್ಮದೇ ಆದ ಕೊಡುಗೆಯನ್ನು ಈ ದೇಶಕ್ಕೆ ನೀಡಿದ್ದಾರೆ. ವಿಶ್ವ ಬ್ಯಾಂಕ್ ನ ಇತ್ತೀಚಿನ ವರದಿಯಂತೆ ಹೊರದೇಶಗಳಿಂದ ಬ್ಯಾಂಕಿಗೆ ಹಣ ಜಮಾ  ಮಾಡುವ ದೇಶಗಳಲ್ಲಿ ಭಾರತ ಪ್ರಥಮ‌ ಸ್ಥಾನದಲ್ಲಿದೆ. ಇದರಿಂದಾಗಿ ಭಾರತದ ಆರ್ಥಿಕ ಪ್ರಗತಿಯೊಂದಿಗೆ ಆದಾಯವೂ ಬರುತ್ತಿದೆ. ಈ ಆದಾಯದಲ್ಲಿ ಶೇಕಡಾ 50 ರಷ್ಟು ಆದಾಯ ಗಲ್ಪ್ ರಾಷ್ಟ್ರಗಳಿಂದ ಬರುತ್ತಿದೆ ಎಂಬ ಸತ್ಯವನ್ನು ನಾವು ತಿಳಿದುಕೊಳ್ಳಬೇಕಾಗಿದೆ.

ಈ ಅನಿವಾಸಿ ಭಾರತೀಯರ ಪೈಕಿ ಬಹಳ ದೊಡ್ಡ ಸಂಖ್ಯೆಯ ಅನಿವಾಸಿ ಕನ್ನಡಿಗರು ಇದ್ದಾರೆ. ಕನ್ನಡಿಗರು ಎಂದರೆ ಅವರು ಸಂಘ ಜೀವಿಗಳು ಮತ್ತು ಪರೋಪಕಾರಿಗಳು. ಅದರಲ್ಲೂ ಕರಾವಳಿಯ ಕನ್ನಡಿಗರಂತೂ ಸಮಾಜ ಸೇವೆಯಲ್ಲಿ ಎತ್ತಿದ ಕೈ. ಈ ಅನಿವಾಸಿ ಕನ್ನಡಿಗರಿಂದ ಬಹಳಷ್ಟು ಸಮಾಜ ಸೇವೆ, ಸಾಮುದಾಯಿಕ‌ ಸೇವೆ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಹಲವಾರು ಸಾಮಾಜಿಕ ಸೇವಾ ಸಂಸ್ಥೆಗಳನ್ನು  ನಡೆಸಲ್ಪಡುತ್ತಿರುವುದನ್ನು ನಾವು ಕಂಡಿದ್ದೇವೆ. ಅಲ್ಲದೆ ಬಡ ರೋಗಿಗಳಿಗೆ ಚಿಕಿತ್ಸೆ, ಶಿಕ್ಷಣ ವ್ಯವಸ್ಥೆ, ವಸತಿ ವ್ಯವಸ್ಥೆ ಎಲ್ಲವನ್ನೂ ತಾವು ವಿದೇಶದಲ್ಲಿ ಕಷ್ಟಪಟ್ಟು ಬೆವರು ಸುರಿಸಿ ದುಡಿದ ಹಣದಿಂದ ಇವೆಲ್ಲವನ್ನೂ ಮಾಡುತ್ತಿದ್ದರು.

ಆದರೆ ಗಲ್ಫ್ ರಾಷ್ಟ್ರಗಳ ಬದಲಾದ ಪರಿಸ್ಥಿತಿಯಲ್ಲಿ ಮತ್ತು ಗಲ್ಫ್ ರಾಷ್ಟ್ರಗಳ ಸ್ವದೇಶೀಕರಣ ನೀತಿಯಿಂದಾಗಿ ಹಾಗೂ ಹೊಸ ಕಾರ್ಮಿಕ ಕಾನೂನಿಂದಾಗಿ ಹಲವರು ಉದ್ಯೋಗವನ್ನು ಕಳೆದುಕೊಂಡಿದ್ದರೆ ಇನ್ನು ಕೆಲವರು ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ. ಸ್ವ ಉದ್ಯೋಗವನ್ನು ಮಾಡುತ್ತಿರುವವರು ಕೂಡಾ ಈ ಸಮಸ್ಯೆಯಿಂದ ಹೊರತಾಗಿಲ್ಲ. ಶೇಕಡಾ 40 ರಷ್ಟು ಅನಿವಾಸಿ ಕನ್ನಡಿಗರು ಈಗಾಗಲೇ ಉದ್ಯೋಗ ಕಳೆದುಕೊಂಡು ತಾಯ್ನಾಡನ್ನು ಸೇರಿದ್ದರೆ ಇನ್ನುಳಿದ ಶೇಕಡಾ 60 ರಷ್ಟು ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡು‌ ನಿರುದ್ಯೋಗಿಗಳಾಗಿ ಕರ್ನಾಟಕಕ್ಕೆ ಮರಳಲು ದಿನಗಳನ್ನು ಎಣಿಸುತ್ತಿದ್ದಾರೆ.

ಒಂದು ಕಾಲದಲ್ಲಿ ತಾವೇ ಕೈ ನೀಡಿ ಕೊಡುತ್ತಿದ್ದ ಅನಿವಾಸಿ ಕನ್ನಡಿಗರು ಈಗ ತಾವೇ ಇತರರ ಮುಂದೆ ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಎಚ್.ಡಿ. ಕುಮಾರಸ್ವಾಮಿಯವರು ಉದ್ಯೋಗ ಕಳೆದುಕೊಂಡು ತಾಯ್ನಾಡಿಗೆ ಮರಳುತ್ತಿರುವ ಅನಿವಾಸಿ ಕನ್ನಡಿಗರಿಗೆ ಒಂದು ಉತ್ತಮ ಯೋಜನೆ ಜಾರಿ ಮಾಡುವ ಮೂಲಕ ನಿರುದ್ಯೋಗಿ ಅನಿವಾಸಿ ಕನ್ನಡಿಗರ ಬಾಳಿನಲ್ಲಿ ಮಂದಹಾಸ ಮೂಡಿಸಬೇಕಾಗಿರುವುದು ತಮ್ಮ ಜವಾಬ್ದಾರಿಯಾಗಿರುತ್ತದೆ. ಇದನ್ನು ನೆರವೇರಿಸುವುದರ ಮೂಲಕ ಕರ್ನಾಟಕದ ರೈತ ಸಮುದಾಯಕ್ಕೆ ಕೇಳಿದನ್ನು ಕೊಡುವ ಕಲ್ಪವೃಕ್ಷವಾಗಿರುವ ತಾವುಗಳು ನಿರುದ್ಯೋಗಿ ಅನಿವಾಸಿ ಕನ್ನಡಿಗರ ಪಾಲಿನ ಓಯಸಿಸ್ ಆಗಿ ಮೂಡಿ ಬರುವುದನ್ನು ಇಡೀ ಅನಿವಾಸಿ ಕನ್ನಡಿಗರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ಈ ಮೂಲಕ ನೆನಪಿಸುತ್ತಿದ್ದೇನೆ ಎಂದು ರಿಯಾಝ್ ಫರಂಗಿಪೇಟೆ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News