ಪರೀಕ್ಷೆಯ ದಿನಾಂಕ ಬದಲಿಸಲು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಬೆಂಗಳೂರು, ಮೇ 24: ರಾಜ್ಯ ಹೈಕೋರ್ಟ್‌ನಲ್ಲಿ ಅನುವಾದಕರ ಹುದ್ದೆಗಳ ನೇಮಕಾತಿಗಾಗಿ ಇದೇ ಜೂ. 3ರಂದು ನಡೆಯಲಿರುವ ಲಿಖಿತ ಪರೀಕ್ಷೆಯ ದಿನಾಂಕ ಬದಲಿಸುವಂತೆ ಮಹಿಳಾ ಅಭ್ಯರ್ಥಿಯೊಬ್ಬರು ಮಾಡಿದ್ದ ಮನವಿಯನ್ನು ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ಅನುವಾದಕರ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಯುವ ದಿನದಂದೇ ತಾವು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸುತ್ತಿದ್ದು, ಒಂದೇ ದಿನ ಎರಡು ಪರೀಕ್ಷೆಗಳಿಗೆ ಹಾಜರಾಗುವುದು ಕಷ್ಟ ಸಾಧ್ಯವಾಗಿದೆ. ಹೀಗಾಗಿ ತಮಗೆ ಮಾತ್ರ ಬೇರೊಂದು ದಿನ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಕೋರಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಐಶ್ವರ್ಯ ಆರ್. ಎಂಬುವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮುರ್ತಿ ಎ.ಎಸ್.ಬೋಪಣ್ಣ ಅವರಿದ್ದ ರಜಾಕಾಲದ ಪೀಠ, ಒಂದೇ ದಿನ ಎರಡು ಪರೀಕ್ಷೆಗಳು ಎದುರಾದರೆ, ಅಭ್ಯರ್ಥಿಗಳು ತಮಗೆ ಯಾವುದು ಉತ್ತಮವೋ ಆ ಪರೀಕ್ಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನೂರಾರು ಅಭ್ಯರ್ಥಿಗಳು ಪರೀಕ್ಷೆ ಎದುರಿಸುತ್ತಿರುವಾಗ, ಒಬ್ಬರಿಗೆ ಮಾತ್ರ ಬೇರೊಂದು ದಿನ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿ ಇತ್ಯರ್ಥಪಡಿಸಿತು.
ಪ್ರಕರಣವೇನು: ಹೈಕೋರ್ಟ್‌ನ 10 ಅನುವಾದಕರ ಹುದ್ದೆಗಳಿಗೆ 2017ರ ಅ.17ರಂದು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಐಶ್ವರ್ಯ ಅನುವಾದಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಈ ಹುದ್ದೆಗಳ ಲಿಖಿತ ಪರೀಕ್ಷೆಗೆ 2018ರ ಜೂ. 3ರಂದು ದಿನಾಂಕ ನಿಗದಿಪಡಿಸಲಾಗಿದೆ.
ಈ ಮಧ್ಯೆ ಐಶ್ವರ್ಯ ಕೇಂದ್ರ ಲೋಕಸೇವಾ ಆಯೋಗದ ಅರ್ಹತಾ ಪರೀಕ್ಷೆಯನ್ನೂ ತೆಗೆದುಕೊಂಡಿದ್ದು, ಆ ಪರೀಕ್ಷೆಗಳೂ ಜೂ. 3ರಂದೇ ನಡೆಯಲಿವೆ. ಹೀಗಾಗಿ ತಮಗೆ ಹೈಕೋರ್ಟ್ ಅನುವಾದಕರ ಹುದ್ದೆಯ ಪರೀಕ್ಷೆ ಎದುರಿಸಲು ಬೇರೊಂದು ದಿನಾಂಕ ನಿಗದಿಪಡಿಸುವಂತೆ ಕೋರಿ ಐಶ್ವರ್ಯ ಎ.4 ರಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಆ ಮನವಿಯನ್ನು ರಿಜಿಸ್ಟ್ರಾರ್ ಜನರಲ್ ಮೇ. 21ರಂದು ತಿರಸ್ಕರಿಸಿ ಹಿಂಬರಹ ನೀಡಿದ್ದರು. ಇದನ್ನು ಪ್ರಶ್ನಿಸಿ ಐಶ್ವರ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.