ಬೆಂಗಳೂರು: ಮಧುಮೇಹ ತಪಾಸಣೆ ಹಾಗೂ ಜಾಗೃತಿ ಶಿಬಿರ
ಬೆಂಗಳೂರು, ಮೇ 24: ಡಾ.ಬಿ.ಆರ್.ಅಂಬೇಡ್ಕರ್‌ರವರ 127ನೇ ಜನ್ಮದಿನದ ಅಂಗವಾಗಿ ದೈಹಿಕ ಶಿಕ್ಷಣ ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಡಾ.ಮೋಹನ್ ಮಧುಮೇಹ ವಿಶೇಷ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಉಚಿತ ಮಧುಮೇಹ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಗುರುವಾರ ನಗರದ ಜ್ಞಾನಭಾರತಿ ಆವರಣದ ಸೆನೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ಬೆಂಗಳೂರು ನಗರ ಹೆಚ್ಚುವರಿ ಆಯುಕ್ತ ಎಂ.ನಂಜುಂಡಸ್ವಾಮಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಮಧುಮೇಹ ತಜ್ಞ ವೈದ್ಯೆ ಡಾ.ಪ್ರೀತಿ ಎಸ್.ಮಾತನಾಡಿ, ಮಧುಮೇಹಕ್ಕೊಳಗಾದವರು ಸಹ ಎಲ್ಲರಂತೆ ಸಾಮಾನ್ಯ ಜೀವನ ನಡೆಸಬಹುದು. ಹೀಗಾಗಿ, ಮಧುಮೇಹ ಮತ್ತು ಸಂಬಂಧಿತ ತೊಂದರೆಗಳಾದ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಅನುಸರಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮಧುಮೇಹದ ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಅತಿಯಾದ ಹಸಿವು, ಅತಿ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ತೂಕ ಕಡಿಮೆಯಾಗುವುದು, ದೃಷ್ಟಿ ಮಂಕಾಗುವುದು, ಸುಸ್ತಾಗುವುದು, ಗಾಯಗಳು ಗುಣವಾಗದಿರುವುದು, ಶುಷ್ಕ ಚರ್ಮ ಹಾಗೂ ಚರ್ಮದಲ್ಲಿ ತುರಿಕೆ, ಕೈ-ಕಾಲುಗಳ ಮರಗಟ್ಟುವಿಕೆ ಅನುಭವವಾಗುತ್ತದೆ. ಇನ್ನು, ಮಹಿಳೆಯರಲ್ಲಿ ಋತುಚಕ್ರದ ಏರುಪೇರಾಗುವ ಸಾಧ್ಯತೆ ಇರುತ್ತದೆ. ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಸಿ.ಶಿವರಾಜು, ಇತ್ತೀಚಿನ ದಿನಗಳಲ್ಲಿ ಒತ್ತಡದಿಂದಾಗಿ ಸಾಕಷ್ಟು ಜನರು ಮಧುಮೇಹ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಮಧುಮೇಹವನ್ನು ದೈಹಿಕ ಚಟುವಟಿಕೆ ಹಾಗೂ ಆಹಾರ ಕ್ರಮದಲ್ಲಿ ಸಮತೋಲನ ಕಾಪಾಡುವ ಮೂಲಕ ಮಧುಮೇಹವನ್ನು ಹತೋಟಿಯಲ್ಲಿಡಬಹುದಾಗಿದೆ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ 350ಕ್ಕೂ ಹೆಚ್ಚು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಆರೋಗ್ಯಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡರು. ಕಾರ್ಯಕ್ರಮದಲ್ಲಿ ವಿತ್ತಾಧಿಕಾರಿ ಡಾ.ಲೋಕೇಶ್, ಕಾರ್ಯಕ್ರಮ ಸಂಯೋಜಕ ಪ್ರೊ.ಪಿ.ಸಿ.ಕೃಷ್ಣಸ್ವಾಮಿ, ಡಾ.ಮೋಹನ್, ಸೇರಿ ಪ್ರಮುಖರಿದ್ದರು.