ಬೆಂಗಳೂರು : ಉಚಿತ ಮಧುಮೇಹ ತಪಾಸಣಾ ಶಿಬಿರ ಆಯೋಜನೆ
ಬೆಂಗಳೂರು, ಮೇ 25: ಡಾ.ಬಿ.ಆರ್.ಅಂಬೇಡ್ಕರ್ ಅವರ 127 ನೆ ಜನ್ಮದಿನಾಚರಣೆ ಅಂಗವಾಗಿ ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಕಾಲೇಜು ಮತ್ತು ಡಾ.ಮೋಹನ್ ಮಧುಮೇಹದ ವಿಶೇಷ ಕೇಂದ್ರದ ಸಹಯೋಗದೊಂದಿಗೆ ನಗರದ ಸೆನೆಟ್ ಸಭಾಂಗಣದಲ್ಲಿ ಉಚಿತ ಮಧುಮೇಹ ತಪಾಸಣಾ ಹಾಗೂ ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಬೆಂಗಳೂರು ಸಿಟಿ ಪೊಲೀಸ್ ಆಡಳಿತದ ಹೆಚ್ಚುವರಿ ಆಯುಕ್ತ ಎಂ.ನಂಜುಂಡಸ್ವಾಮಿ, ಸಂವಿಧಾನವು ಯಾವ ಪಕ್ಷಕ್ಕೂ ಸೀಮಿತವಾದುದಲ್ಲ. ಅದು ಕಾನೂನಿನ ಚೌಕಟ್ಟಿನಲ್ಲಿ ಒಳಪಟ್ಟಿರುತ್ತದೆ. ಹೀಗಾಗಿ, ನಾವೆಲ್ಲಾ ಭಾರತೀಯರು, ನಮ್ಮ ಧರ್ಮ ಭಾರತದ ಧರ್ಮ, ನಮ್ಮ ಧರ್ಮ ಗ್ರಂಥ ಸಂವಿಧಾನವಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಡಾ.ಸಿ. ಶಿವರಾಜು ಮಾತನಾಡಿ, ಮಧುಮೇಹ ಹೊಂದಿರುವಂತಹವರು ಸಾಕಷ್ಟು ಜನರಿದ್ದಾರೆ. ಅವರೆಲ್ಲರಿಗೂ ದೈಹಿಕ ಚಟುವಟಿಕೆಗಳ ಮೂಲಕ ಹಾಗೂ ದೈನಂದಿನ ಆರೋಗ್ಯ ತಪಾಸಣೆಯ ಮೂಲಕ ಮಧುಮೇಹದ ನಿಯಂತ್ರಣ ಮಾಡಬಹುದು ಎಂದು ತಿಳಿಸಿದರು.
ವೈದ್ಯರಾದ ಡಾ.ಎಸ್.ಪ್ರೀತಿ ಮಾತನಾಡಿ, ಮಧುಮೇಹಕ್ಕೆ ಕಾರಣಗಳು ಮತ್ತು ಅದನ್ನು ನಿವಾರಿಸಲು ಪರಿಹಾರೋಪಾಯಗಳು ಮತ್ತು ಮುಂಜಾಗ್ರತಾ ಕ್ರಮಗಳು, ಮಧುಮೇಹದಿಂದ ಆಗುವಂತಹ ಪರಿಣಾಮಗಳ ಕುರಿತು ಶಿಬಿರದಲ್ಲಿ ಪಾಲ್ಗೊಂಡಿದ್ದವರಿಗೆ ಮನವರಿಕೆ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ವಿತ್ತಾಧಿಕಾರಿ ಡಾ.ಎ.ಲೋಕೇಶ್, ಪ್ರಾಂಶುಪಾಲ ಹಾಗೂ ಕಾರ್ಯಕ್ರಮದ ಸಂಯೋಜಕ ಪ್ರೊ.ಪಿ.ಸಿ. ಕಷ್ಣಸ್ವಾಮಿ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.