ಸಿದ್ದರಾಮಯ್ಯ ಆಡಳಿತಕ್ಕೆ ಸ್ಪೀಕರ್ ರಮೇಶ್ ಕುಮಾರ್ ರಿಂದ ಮುಕ್ತಕಂಠದ ಶ್ಲಾಘನೆ

Update: 2018-05-25 15:22 GMT

ಬೆಂಗಳೂರು, ಮೇ 25: ಆರ್ಥಿಕ ಪರಿಸ್ಥಿತಿ ನಿರ್ವಹಣೆ ಸಂಬಂಧ ಅಪಾರ ಅನುಭವ ಹೊಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಾರ್ಗದರ್ಶನ ಪಡೆಯುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ನೂತನ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಸಲಹೆ ನೀಡಿದ ಪ್ರಸಂಗ ನಡೆಯಿತು.

ಶುಕ್ರವಾರ ವಿಧಾನಸಭೆಯಲ್ಲಿ ತಮ್ಮನ್ನು ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆ ಮಾಡಿದ ಬಳಿಕ ಸದನವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅತೀ ಹೆಚ್ಚು ಬಜೆಟ್‌ಗಳ ಮಂಡನೆ ಮಾಡಿ, ವಿತ್ತೀಯ ನಿರ್ವಹಣೆಯಲ್ಲಿ ಲೋಪವಾಗದಂತೆ ಸಿದ್ದರಾಮಯ್ಯ ಎಚ್ಚರಿಕೆ ವಹಿಸಿದ್ದರು ಎಂದರು.

ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಜೊತೆಗೆ ರಾಜ್ಯದ ಅಭಿವೃದ್ಧಿಯನ್ನು ಕುಂಠಿತವಾಗಲು ಬಿಟ್ಟಿಲ್ಲ. ಹಲವು ಕಾರ್ಯಕ್ರಮಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಿದ್ದಲ್ಲದೆ, ಸರಕಾರದ ಯಾವುದೆ ಚೆಕ್ ಬೌನ್ಸ್ ಆಗದಂತೆಯೂ ನೋಡಿಕೊಂಡಿದ್ದರು ಎಂದು ರಮೇಶ್‌ಕುಮಾರ್ ಹೇಳಿದರು.

ದೇಶದ ಇತಿಹಾಸದಲ್ಲಿ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಸರಕಾರವಿದ್ದಾಗ ಹಣಕಾಸು ಸಚಿವರಾಗಿದ್ದ ಅಶೋಕ್ ಮಿತ್ರಾರನ್ನು ಹೊರತುಪಡಿಸಿದರೆ, ಹಣಕಾಸಿನ ವಿಚಾರದಲ್ಲಿ ಅತ್ಯಂತ ಶಿಸ್ತು ಹೊಂದಿದ್ದ ಹಣಕಾಸು ಸಚಿವರೆಂದರೆ ಅದು ನನ್ನ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರ ಸಲಹೆ, ಮಾರ್ಗದರ್ಶನ ಪಡೆದುಕೊಂಡು ಮುಂದುವರೆಯಿರಿ ಎಂದು ರಮೇಶ್‌ಕುಮಾರ್ ಸಲಹೆ ನೀಡಿದರು.

ಅಲ್ಲದೆ, ಇದಕ್ಕೂ ಮುನ್ನ ಮಾತನಾಡಿದ ರಮೇಶ್‌ಕುಮಾರ್, ಸದನದ ಸದಸ್ಯರು ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ಶಾಸನ ಸಭೆಯು ಪವಿತ್ರವಾದದ್ದು. ಪ್ರತಿಯೊಬ್ಬ ಪ್ರಜೆಯೂ ಇಲ್ಲಿ ಬಂದು ತಮ್ಮ ಅಳಲು ತೋಡಿಕೊಳ್ಳಲು ಆಗುವುದಿಲ್ಲ. ನೀವು ಜನರ ಪ್ರತಿನಿಧಿಗಳಾಗಬೇಕು, ಪ್ರಜಾಪ್ರತಿನಿಧಿ ಕಾಯ್ದೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ರಾಜಾಡಳಿತದಲ್ಲಿದ್ದ ಪುಂಡರ ವ್ಯವಸ್ಥೆಯನ್ನು ಬದಲಾಯಿಸಲು ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂತು. ಇದಕ್ಕಾಗಿ ಹೋರಾಡಿ, ತಮ್ಮ ಸರ್ವಸ್ವವನ್ನು ಕಳೆದು ಕೊಂಡವರು ಪ್ರಜಾಪ್ರಭುತ್ವದ ಲಾಭವನ್ನು ಪಡೆದಿಲ್ಲ. ಆದರೆ, ನಮಗೆ ಈ ಅವಕಾಶ ಸಿಕ್ಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಮುನ್ನಡೆಯುತ್ತೇನೆ ಎಂದು ರಮೇಶ್‌ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News