ಎಸ್‌ಡಿಪಿಐ ರಾಜ್ಯ ಕಾರ್ಯಕಾರಣಿ ಸಮಿತಿ ಸಭೆ
ಬೆಂಗಳೂರು, ಮೇ 25: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯಕಾರಣಿ ಸಭೆಯು ಬೆಂಗಳೂರಿನ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ರವರ ನೇತೃತ್ವದಲ್ಲಿ ಗುರುವಾರ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅಬ್ದುಲ್ ಹನ್ನಾನ್, ರಾಜ್ಯದಲ್ಲಿ ರಾಜ್ಯಪಾಲರ ನಡೆ ಅನುಮಾನಸ್ಪದದಿಂದ ಕೂಡಿದೆ. ಅವರ ಕ್ರಮ ಅಸಂಧಾನಿಕವಾಗಿರುವುದರಿಂದ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸರಕಾರ ನಡೆಸಲು ಅವಕಾಶ ಸಿಕ್ಕಿತು. ರಾಜ್ಯಪಾಲರು ಕೇಂದ್ರ ಬಿಜೆಪಿ ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಪ್ರಜಾತಂತ್ರದ ಕಗ್ಗೊಲೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಜಾತ್ಯತೀತ ಪಕ್ಷಗಳಿಗೆ ಸರಕಾರ ರಚಿಸುವ ಅವಕಾಶ ಬಂದೊದಗಿರುವುದು ಸಮಾಧಾನಕರ ವಿಷಯ. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರವನ್ನು ಅಭಿನಂದಿಸಿರುವ ಅವರು ಸಮ್ಮಿಶ್ರ ಸರಕಾರ ಜನತೆಗೆ ನೀಡಿರುವ ಪ್ರಣಾಳಿಕೆಗಳನ್ನು ಈಡೇರಿಸಲು ಮುಂದಾಗಬೇಕು ಹಾಗೂ ದಲಿತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಿದಂತೆ ಮುಸ್ಲಿಂ ಸಮುದಾಯಕ್ಕೂ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿದೆ.
ಇವಿಎಂ ದುರುಪಯೋಗದ ಬಗ್ಗೆ ಅನುಮಾನವಿರುವ ಕಾರಣ ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಇವಿಎಂ ಯಂತ್ರ ದುರುಪಯೋಗಕ್ಕೆ ಸಂಬಂಧಿಸಿದಂತೆ ಅನುಮಾನಸ್ಪದ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಎಸ್‌ಡಿಪಿಐ ಆಗ್ರಹಿಸಿದೆ. ಈ ಬಗ್ಗೆ ಪಕ್ಷವು ಕಾನೂನು ಹೋರಾಟ ಮುಂದುವರಿಸಲು ಸಭೆಯು ತೀರ್ಮಾನಿಸಿದೆ.
ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಕಾರ್ಯದರ್ಶಿಗಳಾದ ಅಲ್ಫಾನ್ಸೋ ಫ್ರಾಂಕೊ, ಅಕ್ರಂ ಹಸನ್, ರಿಯಾಝ್ ಫರಂಗಿಪೇಟೆ, ಅಪ್ಸರ್ ಕೊಡ್ಲಿಪೇಟೆ ಹಾಗೂ ವಿವಿಧ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.