×
Ad

ಯುವ ತಲೆಮಾರಿಗೆ ಕತೆಗಳು ಹಾಗೂ ಭಾಷಾ ವೈವಿಧ್ಯತೆ ಪರಿಚಯಿಸಲು ಹಿರಿಯ ಸಾಹಿತಿಗಳ ಸಣ್ಣಕತೆಗಳು ಬಾನುಲಿಯಲ್ಲಿ ಪ್ರಸಾರ

Update: 2018-05-25 23:39 IST

ಬೆಂಗಳೂರು, ಮೇ 25: ಯುವ ತಲೆಮಾರಿಗೆ ಕತೆಗಳ ಕುರಿತು ಆಸಕ್ತಿ ಮೂಡಿಸುವುದು ಹಾಗೂ ವಿವಿಧ ಪ್ರದೇಶಗಳಲ್ಲಿರುವ ಕನ್ನಡ ಭಾಷೆಯ ವೈವಿಧ್ಯತೆ, ಸಂಸ್ಕೃತಿಯನ್ನು ಪರಿಚಯಿಸುವ ದೃಷ್ಟಿಯಿಂದ ನಾಡಿನ ಹಿರಿಯ ಕತೆಗಾರರ ಸಣ್ಣ ಕತೆಗಳನ್ನು ‘ಕಥಾ ಕಣಜ’ ಎಂಬ ಹೆಸರಿನಡಿ ಬಾನುಲಿಯಲ್ಲಿ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ತಿಳಿಸಿದರು.

ಶುಕ್ರವಾರ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಅವರ ಪ್ರಧಾನ ಸಂಪಾದಕತ್ವದಲ್ಲಿ ಹಿರಿಯ ಸಾಹಿತಿಗಳಾದ ಡಾ.ಗಿರಡ್ಡಿ ಗೋವಿಂದರಾಜು ಮತ್ತು ಬೋಳುವಾರು ಮುಹಮ್ಮದ್ ಕುಂಇ ಸಂಪಾದತ್ವಕದಲ್ಲಿ ತಯಾರಾದ ‘ಶತಮಾನದ ಸಣ್ಣ ಕತೆಗಳು’ ಕಥಾ ಸಂಕಲನವನ್ನೆ ಕಥಾ ಕಣಜ ಎಂಬ ಮಾಲಿಕೆ ಹೆಸರಿನಡಿ ಬಾನುಲಿಗಳಲ್ಲಿ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಕಥಾ ಕಣಜ ಸರಣಿಯಲ್ಲಿ ಪ್ರತಿವಾರ ಒಂದು ಕತೆಯಂತೆ ವರ್ಷಕ್ಕೆ 52 ಕತೆಗಳು ಪ್ರಸಾರಗೊಳ್ಳಲಿವೆ. ಈ ಕಾರ್ಯಕ್ರಮವು ಕತೆಗಾರರ ಮಾತು, ಕತೆಯ ಓದು, ಹಿರಿಯ ಸಾಹಿತಿಗಳಿಂದ ವಿಮರ್ಶೆ ಹಾಗೂ ಪೂರಕ ಸಂಗೀತವನ್ನು ಒಳಗೊಂಡಿರುತ್ತದೆ. ಹಿರಿಯ ಸಾಹಿತಿಗಳಾದ ಡಾ.ಎಚ್.ಎಸ್.ವೆಂಕಟೇಶ್‌ಮೂರ್ತಿ, ಕುಂ.ವೀರಭದ್ರಪ್ಪ, ಜಯಂತ ಕಾಯ್ಕಿಣಿ ಮತ್ತು ಡಾ.ಎಂ.ಎಸ್.ಆಶಾದೇವಿ ಸೇರಿದಂತೆ 15ಮಂದಿ ಸಾಹಿತಿಗಳು ಕಥಾ ವಿಮರ್ಶಕರಾಗಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪ್ರಸಾರವಾಗುವ ಕತೆಗಳು: ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ರ ‘ಜೋಗ್ಯರ ಅಂಜಪ್ಪನ ಕೋಳಿ ಕತೆ’, ಆನಂದರ ‘ನಾನು ಕೊಂದ ಹುಡುಗಿ’, ಕೊರಡ್ಕಲ್ ಶ್ರೀನಿವಾಸರಾವ್‌ರ ‘ಧಣಿಯರ ಸತ್ಯನಾರಾಯಣ’, ನಿರಂಜನರ ‘ಕೊನೆಯ ಗಿರಾಕಿ’, ಚದುರಂಗರ ‘ನಾಲ್ಕುಮೊಳ ಭೂಮಿ’, ತ್ರಿವೇಣಿಯವರ ‘ಬೆಡ್ ನಂ-7’, ಕೊಡಗಿನ ಗೌರಮ್ಮರ ‘ಮನುವಿನ ರಾಣಿ’, ಡಾ.ಯು.ಆರ್.ಅನಂತಮೂರ್ತಿಯವರ ‘ನವಿಲುಗಳು’, ಪಿ.ಲಂಕೇಶ್‌ರ ‘ರೊಟ್ಟಿ’, ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ‘ಕೃಷ್ಣೇಗೌಡನ ಆನೆ’, ಗಿರಡ್ಡಿ ಗೋವಿಂದರಾಜರ ‘ಹಂಗು’, ಎಸ್.ದಿವಾಕರರ ‘ಕ್ರೌರ್ಯ’, ಜಯಂತ್ ಕಾಯ್ಕಿಣಿಯವರ ‘ದಗಡು ಪರಬನ ಅಶ್ವಮೇಧ’, ಅಬ್ದುಲ್ ರಷೀದ್‌ರ ‘ಹಾಲು ಕುಡಿದ ಹುಡುಗ’, ದೇವನೂರ ಮಹಾದೇವರ ‘ಮಾರಿಕೊಂಡವರು’, ಬರಗೂರು ರಾಮಚಂದ್ರಪ್ಪರ ‘ಕ್ಷಾಮ’ ಸೇರಿದಂತೆ ವೈದೇಹಿ, ಕರೀಗೌಡ ಬೀಚನಹಳ್ಳಿ, ಅಮರೇಶ ನುಗಡೋಣಿ, ಮೊಗಳ್ಳಿ ಗಣೇಶ್, ಕುಂ.ವೀರಭದ್ರಪ್ಪ ಸೇರಿದಂತೆ ಹಲವು ಕತೆಗಾರರ ಕತೆಗಳು ಪ್ರಸಾರ ಆಗಲಿವೆ.

ಕಥಾ ನಿರೂಪಕರು: ಕಥಾ ಕಣಜ ಹೆಸರಿನಡಿ ಪ್ರಸಾರವಾಗುವ ಕತೆಗಳನ್ನು ಹಿರಿಯ ಕಥಾ ನಿರೂಪಕರಾದ ಎಸ್.ಎಸ್.ಉಮೇಶ್, ಡಾ.ಎನ್.ರಘು, ಬಿ.ಕೆ.ಸುಮತಿ, ಎಂ.ಎಸ್.ಅನುಪಮ, ನೂತನ್ ಎಸ್.ಕದಂ, ಉದಯಾದ್ರಿ, ಕೆ.ಟಿ.ಕೃಷ್ಣಕಾಂತ್, ರಾಜಾರಾಮ್, ಗೋಪಾಲ ನಾಯಕ್, ಕೆ.ಎಸ್.ರವೀಂದ್ರನಾಥ್, ಜೆ.ಪಿ.ರಾಮಣ್ಣ, ಭಾರತಿ ಕಾಸರಗೋಡು, ಮಂಗಳ, ಶ್ರೀನಿವಾಸ ಪ್ರಭು, ವರ್ಷ, ಎಚ್.ಎಸ್.ಶ್ರೀರಾಮಕೃಷ್ಣ, ಡಾ.ಅಬ್ದುಲ್ ರೆಹಮಾನ್ ಪಾಷಾ ನಿರೂಪಿಸಲಿದ್ದಾರೆ.
 

ರಸ ಪ್ರಶ್ನೆ: ಪ್ರತಿ ತಿಂಗಳ ಮೊದಲ ಶನಿವಾರ ಕಥಾ ಕಣಜದ ನೇರ ಪ್ರಸಾರ phone in ರಸ ಪ್ರಶ್ನೆ ಕಾರ್ಯಕ್ರಮ ಇರುತ್ತದೆ. ಸಾಹಿತ್ಯಾಸಕ್ತರು ಇದರಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಬಹುದು. ಅಲ್ಲದೆ ಆಕಾಶವಾಣಿಯ ಇ-ಮೇಲ್‌ಗೆ ಉತ್ತಮ ಪ್ರತಿಕ್ರಿಯೆ ನೀಡಿದ ಆಯ್ದ ಶ್ರೋತ್ರುಗಳಿಗೆ ಪುಸ್ತಕ ಬಹುಮಾನ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಪ್ರಸಾರದ ಅವಧಿ
-ಪ್ರತಿ ಸೋಮವಾರ fm rainbow101.3mhz ನಲ್ಲಿ ಬೆಳಗ್ಗೆ 8.02ಗಂಟೆಗೆ ಪ್ರಸಾರವಾಗಲಿದೆ.
-ಪ್ರತಿ ಬುಧವಾರ ಬೆಳಗ್ಗೆ 7.15ಕ್ಕೆ ಕರ್ನಾಟಕ ಎಲ್ಲ 13ಬಾನುಲಿ ಕೇಂದ್ರಗಳು ಮತ್ತು ಆಕಾಶವಾಣಿ ಮುಖ್ಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.
-ಪ್ರತಿ ಶುಕ್ರವಾರ ವಿವಿಧ ಭಾರತಿ fm 102.9mhz ನಲ್ಲಿ 8.30ಕ್ಕೆ ಮರುಪ್ರಸಾರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News