ಲಾಲ್‌ಬಾಗ್‌ನಲ್ಲಿ ಮಾವು-ಹಲಸು ಮೇಳಕ್ಕೆ ಚಾಲನೆ
ಬೆಂಗಳೂರು, ಮೇ 25: ಪ್ರತಿ ವರ್ಷದಂತೆ ಈ ವರ್ಷವೂ ಲಾಲ್‌ಬಾಗ್‌ನಲ್ಲಿ ಮಾವು ಮತ್ತು ಹಲಸು ಹಣ್ಣಿನ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮೇ 25ರಿಂದ ಜೂನ್ 15ರವರೆಗೆ ಹಮ್ಮಿಕೊಳ್ಳಲಾಗಿದ್ದು, ಈ ಮೇಳಕ್ಕೆ ಬದಾಮಿ ತಳಿ ಸೇರಿ ಒಟ್ಟು 12 ತಳಿವಾರು ಮಾವಿನ ಹಣ್ಣು ಹಾಗೂ ಹಲಸಿನ ಹಣ್ಣುಗಳು ಮಾರಾಟ ಮೇಳಕ್ಕೆ ಬಂದಿವೆ.
ಲಾಲ್‌ಬಾಗ್‌ನಲ್ಲಿ 90 ಸುಸಜ್ಜಿತ ಮಾರಾಟ ಮಳಿಗೆಗಳಿದ್ದು, ಈ 90 ಮಳಿಗೆಗಳಲ್ಲಿ 80 ಮಳಿಗೆಗಳನ್ನು ಮಾವು ಬೆಳಗಾರರಿಗೆ ಹಾಗೂ 10 ಮಳಿಗೆಗಳನ್ನು ಹಲವು ಬೆಳೆಗಾರರಿಗೆ ನೀಡಲಾಗಿದ್ದು, ಮೇಳದ ಅವಧಿಯಲ್ಲಿ ಗ್ರಾಹಕರು ಯೋಗ್ಯವಾದ ಬೆಲೆಗೆ ತಾಜಾ ಹಣ್ಣುಗಳನ್ನು ಕೊಂಡುಕೊಳ್ಳಬಹುದಾಗಿದೆ. ಸಹಜವಾಗಿ ಮಾಗಿದ ಅಥವಾ ಇಥಲೀನ್ ಉಪಚರಿಸಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ವೈ.ಎಸ್.ಪಾಟೀಲ್ ಹೇಳಿದರು.
ಗ್ರಾಹಕರಿಗೆ ಕಾರ್ಬೈಡ್ ಮುಕ್ತ, ಸಹಜವಾಗಿ ಮಾಗಿದ ಹಣ್ಣುಗಳನ್ನು ರೈತರ ತೋಟದಿಂದ ನೇರವಾಗಿ ಒದಗಿಸಲಾಗುವುದು. ಮಾವು ಮತ್ತು ಹಲಸು ಹಣ್ಣುಗಳ ಬೆಳೆಗಾರರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಿ, ಬೆಳೆಗಾರರಿಗೆ ಯೋಗ್ಯ ಬೆಲೆ ಹಾಗೂ ಗ್ರಾಹಕರಿಗೆ ರುಚಿಯಾದ ಉತ್ಕೃಷ್ಟ ಗುಣಮಟ್ಟದ ತಾಜಾ ಹಣ್ಣುಗಳನ್ನು ಯೋಗ್ಯ ಬೆಲೆಗೆ ದೊರಕುವಂತೆ ಮಾಡುವುದೇನಮ್ಮ ಉದ್ದೇಶ ಎಂದು ತಿಳಿಸಿದರು.
ಮಾವು ಮತ್ತು ಹಲಸಿನಲ್ಲಿರುವ ತಳಿಗಳ ವೈವಿದ್ಯತೆ ಮತ್ತು ವಿಶಿಷ್ಟತೆಗಳ ಸಂಪತ್ತಿನ ಪರಿಚಯ ಮತ್ತು ಆಸ್ವಾದನೆಗೆ ಅವಕಾಶ ಕಲ್ಪಿಸಲಾಗಿದೆ. ಮಾವು ಮತ್ತು ಹಲಸು ಪ್ರದರ್ಶನದಲ್ಲಿ 30-40 ಮಾವಿನ ಹಾಗೂ 10-12 ಹಲಸು ತಳಿಗಳನ್ನು ಪ್ರರ್ದಶನಕ್ಕೆ ಇಡಲಾಗಿದೆ ಎಂದು ವೈ.ಎಸ್.ಪಾಟೀಲ್ ಹೇಳಿದರು.
1 ಸಾವಿರ ಟನ್ ಮಾವಿನ ಹಣ್ಣನ್ನು ಮಾರಾಟ ಮಾಡಲು ಗುರಿಯಿಟ್ಟುಕೊಂಡಿದ್ದು, 1 ಸಾವಿರಕ್ಕೂ ಹೆಚ್ಚು ವಿವಿಧ ತಳಿಯ ಹಣ್ಣುಗಳು ಮಾರಾಟಕ್ಕೆ ಇಡಲಾಗಿದೆ ಎಂದು ತಿಳಿಸಿದರು.
ಅಲ್ಲದೆ, ಕೆಂಪೆಗೌಡ ರಸ್ತೆಯ ಎಫ್‌ಕೆಸಿಸಿಐ ಆವರಣದಲ್ಲಿ 10 ಮಳಿಗೆಗಳನ್ನು, ಕಬ್ಬನ್ ಪಾರ್ಕ್ ಆವರಣದಲ್ಲಿ 10 ಮಳಿಗೆಗಳು ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ 22 ಮಳಿಗೆಗಳನ್ನು ತೆರೆಯಲಾಗಿದೆ. ಮೇಳವು ಲಾಲ್‌ಬಾಗ್ ಸೇರಿ ಮತ್ತಿತರ ಕಡೆಗಳಲ್ಲಿ ಪ್ರತಿದಿನ ಬೆಳಗ್ಗೆ 8ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಗ್ರಾಹಕರಿಗೆ ಮುಕ್ತವಾಗಿರಲಿದೆ.
ಪ್ರಥಮ ಬಾರಿಗೆ ಲಾಲ್‌ಬಾಗ್ ಮಾವು ಮೇಳದ ಮಳಿಗೆಗಳಲ್ಲಿ ಹಣ್ಣನ್ನು ಖರೀದಿಸುವ ಗ್ರಾಹಕರಿಗೆ ಮೊಬೈಲ್ ಸಂದೇಶ್(ಎಸ್‌ಎಂಎಸ್) ಮೂಲಕ ಹಣ ಪಾವತಿಸಲು ಮೊಬೈಲ್ ಆ್ಯಪ್ ಬಿಲ್ಲಿಂಗ್ ಅನ್ನು ನಿಗಮದ ವತಿಯಿಂದ ಪ್ರಾಯೋಗಿಕವಾಗಿ ಅಳಡಿಸಲಾಗಿದೆ.
ಮಾವಿನ ಹಣ್ಣಿನ ದರಪಟ್ಟಿ: ಬಾದಾಮಿ-70 ರೂ., ರಸಪುರಿ-60 ರೂ., ಮಲ್ಲಿಕಾ-80 ರೂ., ಸೇಂದೂರ-45 ರೂ., ಸಕ್ಕರೆ ಗುತ್ತಿ-90 ರೂ., ಮಲಗೋವಾ-110 ರೂ., ಬಂಗನಪಲ್ಲಿ-56 ರೂ., ದಶೇರಿ-100 ರೂ., ತೋತಾಪುರಿ-27 ರೂ., ಕಾಲಾಪಾಡ್-85 ರೂ., ಅಮ್ರಪಾಲಿ-68 ರೂ., ಕೇಸರ್ -50 ರೂಪಾಯಿಗೆ ಖರೀದಿಸಬಹುದಾಗಿದೆ.