ಫ್ರೆಂಚ್ ಓಪನ್: ನಡಾಲ್ ಫೈನಲ್ ಹಾದಿ ಸುಲಭ

Update: 2018-05-25 19:06 GMT

ಪ್ಯಾರಿಸ್, ಮೇ 25: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಡ್ರಾ ಪ್ರಕ್ರಿಯೆ ಗುರುವಾರ ನಡೆದಿದ್ದು 11ನೇ ಫ್ರೆಂಚ್ ಓಪನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಫೆಲ್ ನಡಾಲ್ ಫೈನಲ್ ಹಾದಿ ಅತ್ಯಂತ ಸುಲಭವಾಗಿದೆ.

31ರ ಹರೆಯದ ನಡಾಲ್ ಫ್ರೆಂಚ್ ಓಪನ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದು ಉಕ್ರೇನ್‌ನ ಅಲೆಕ್ಸಾಂಡರ್ ಡೊಲ್ಗೊಪೊಲೊವ್‌ರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕದ 6ನೇ ಶ್ರೇಯಾಂಕದ ಕೇವಿನ್ ಆ್ಯಂಡರ್ಸನ್ ಹಾಗೂ ಸೆಮಿ ಫೈನಲ್‌ನಲ್ಲಿ ಮರಿನ್ ಸಿಲಿಕ್ ಅಥವಾ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊರನ್ನು ಎದುರಿಸುವ ಸಾಧ್ಯತೆಯಿದೆ.

‘‘ಕಳೆದ ಕೆಲವು ವಾರ ನನಗೆ ಉತ್ತಮವಾಗಿದೆ. ನನಗೆ ಲಭಿಸಿರುವ ಯಶಸ್ಸು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ’’ ಎಂದು ಮಾಂಟೆ ಕಾರ್ಲೊ, ಬಾರ್ಸಿಲೋನ ಹಾಗೂ ರೋಮ್ ಮಾಸ್ಟರ್ಸ್ ಪ್ರಶಸ್ತಿ ಬಾಚಿಕೊಂಡಿರುವ ನಡಾಲ್ ಹೇಳಿದ್ದಾರೆ.

2016ರ ಚಾಂಪಿಯನ್ ನೊವಾಕ್ ಜೊಕೊವಿಕ್ ಕ್ವಾಲಿಫೈಯರ್ ವಿರುದ್ಧ ಆಡುವ ಮೂಲಕ ತನ್ನ ಹೋರಾಟ ಆರಂಭಿಸಲಿದ್ದಾರೆ. ಎರಡನೇ ಶ್ರೇಯಾಂಕದ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಹಾಗೂ ಆಸ್ಟ್ರೀಯದ ಡೊಮಿನಿಕ್ ಥೀಮ್ ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಾಡುವ ಸಾಧ್ಯತೆಯಿದೆ.

ಮಹಿಳೆಯರ ವಿಭಾಗದಲ್ಲಿ ಸ್ಪೇನ್‌ನ ಗಾರ್ಬೈನ್ ಮುಗುರುಝ ಮಾಜಿ ಚಾಂಪಿಯನ್ ರಶ್ಯದ ಸ್ವೆತ್ಲಾನಾ ಕುಝ್ನೆಸೋವಾರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಹಾಲಿ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊ ಮೊದಲ ಸುತ್ತಿನಲ್ಲಿ ಉಕ್ರೇನ್‌ನ ಕಟೆರಿನಾ ಕೊರ್ಲೊವಾರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News