ಮಲೆನಾಡಲ್ಲಿ ಮಳೆಗಾಲದ ತಯಾರಿ

Update: 2018-05-26 15:18 GMT

ಮನೆಯ ಮಾಡಲ್ಲದೆ ಬಚ್ಚಲುಕೊಟ್ಟಿಗೆ, ಗಾಡಿಕೊಟ್ಟಿಗೆ, ದನಗಳ ಕೊಟ್ಟಿಗೆ, ಬತ್ತ ಸೇರಿದಂತೆ ದವಸ ಧಾನ್ಯಗಳನ್ನು ಸಂಗ್ರಹಿಸುವ ಫಣತದ ಕೊಟ್ಟಿಗೆ ಮುಂತಾದ ಎಲ್ಲಾ ಕೊಟ್ಟಿಗೆಗಳ ಮಾಡುಗಳನ್ನು ಹುಲ್ಲು, ಗುಡ್ಡದಲ್ಲಿ ಸಿಕ್ಕುವ ಸಣ್ಣಕಬ್ಬಿನ ಹುಲ್ಲು, ಸೋಗೆ, ಜೆಂಜೀರಿಗೆ, ದಡಸಲು, ಯಾವುದಾದರೊಂದು ಮಳೆನೀರಿನಲ್ಲಿ ಸುಲಭವಾಗಿ ಕೊಳೆಯದ ಮತ್ತು ಮಳೆಯ ನೀರಿನಿಂದ ರಕ್ಷಿಸುವಂತಹ ವಸ್ತುಗಳನ್ನು ಮಾಡಿಗೆ ಹೊದಿಸಬೇಕು. ಪ್ರತಿವರ್ಷವೂ ಮಳೆಗಾಲದಲ್ಲಿ ಕೊಳೆತ ಭಾಗವನ್ನು ತೆಗೆದು ಕೊಡವಿ ಹೊದಿಸಬೇಕು. ಮೂರು ವರ್ಷಗಳಿಗೊಮ್ಮೆ ಸಂಪೂರ್ಣವಾಗಿ ಮಾಡನ್ನೇ ಬಿಚ್ಚಿ ಹೊದಿಸಬೇಕು. ಹೀಗೆ ಮಾಡು ಹೊಚ್ಚುವುದು ಎಂಬುದೊಂದು ದೊಡ್ಡ ಕ್ರಿಯೆ.

ಮಲೆನಾಡಿನಲ್ಲಿ ವರ್ಷದ ಆರು ತಿಂಗಳು ಮಳೆಯೇ. ಆದರೆ ಜೂನ್ ತಿಂಗಳಿಂದ ಸೆಪ್ಟಂಬರ್‌ವರೆಗೆ ನಾಲ್ಕು ತಿಂಗಳು ನಿರಂತರವಾಗಿ ಸುರಿಯುವ ಮಳೆಯನ್ನು ಮಳೆಗಾಲವೆನ್ನುತ್ತಾರೆ.

ಮಲೆನಾಡಿನವರೆಲ್ಲ ಅಂದರೆ ಮಲೆನಾಡಿನ ಊರು ಕಾಡುಗಳಲ್ಲೆಲ್ಲ ಬದುಕುವ ಎಲ್ಲಾ ಜೀವಿಗಳು ಮಳೆಗಾಲವನ್ನು ಆತಂಕದಿಂದಲೇ ಎದುರಿಸುತ್ತವೆ. ಭಾರೀ ಮಳೆಗಾಲ ಮಲೆನಾಡಿಗೆ ಹಿತವಲ್ಲ. ಇಡೀ ಬೇಸಿಗೆಯಲ್ಲೆ ಪ್ರತಿಯೊಬ್ಬರೂ ಬರುವ ಮಳೆಗಾಲದ ಮಳೆಗಾಗಿ ಪೂರ್ವ ತಯಾರಿಯಲ್ಲಿರುತ್ತಾರೆ. ಅದು ಸೀಮೆ ಜಾತ್ರೆ ಮುಗಿಯುತ್ತಿದ್ದಂತೆ ಮದುವೆ ಮಾಡುವವರು ಮತ್ತು ಮದುವೆಯಾಗುವವರು ಹೆಣ್ಣು ಗಂಡಿನ ಸಂಬಂಧಕ್ಕಾಗಿ ಓಡಾಡುತ್ತಾರೆ. ಸೀಮೆ ಜಾತ್ರೆಗಿಂತ ಮುಂಚೆ ಮದುವೆಗಳು ನಡೆಯುವಂತಿಲ್ಲ. ಜಾತ್ರೆಗಳ ನಂತರ ಮಳೆ ಹಿಡಿಯುವುದಕ್ಕೆ ಮುಂಚೆ ಮದುವೆಗಳ ಕಾಲ. ಆ ಮೂರು ತಿಂಗಳಲ್ಲಿ ಆ ವರ್ಷ ಮದುವೆಯಾಗುವವರೆಲ್ಲರೂ ಮದುವೆಯಾಗಬೇಕು. ಮದುವೆ ಮಾತ್ರವಲ್ಲ ಮನೆಕಟ್ಟುವುದು, ಮನೆಯ ಒಕ್ಕಲು, ದೈಯ್ಯದ ಹರಕೆ, ಯಾವುದೇ ಶುಭಸಮಾರಂಭಗಳಿದ್ದರೆ ಅವೆಲ್ಲ ಮಳೆಕೂರುವುದಕ್ಕೆ ಮುಂಚೆಯೇ ಆಗಬೇಕು.

ಸೀಮೆಜಾತ್ರೆಯ ಮಾರನೆ ದಿನದಿಂದಲೇ ಮಳೆಗಾಲಕ್ಕೆ ಬೇಕಾದ ಕಟ್ಟಿಗೆ ಉರುವಲನ್ನು ಪಡೆದು, ಹಸಿ ಇದ್ದರೆ ಒಣಗಿಸಬೇಕು. ಮಳೆಗಾಲಕ್ಕೆ ಬೇಕಾದ ದೀರ್ಘಬಾಳಿಕೆಯ ತರಕಾರಿಗಳನ್ನು ಬೆಳೆದುಕೊಳ್ಳಬೇಕು ಮತ್ತು ಜಾನುವಾರುಗಳಿಗೆ ಮಳೆಗಾಲದಲ್ಲಿ ಬೇಕಾಗುವ ಹುರುಳಿಸೊಪ್ಪು ಅಥವಾ ಸ್ವಂತ ಉಪಯೋಗಕ್ಕೆ ಕೆಲವರು ಎಳ್ಳನ್ನು ಬೇಸಿಗೆ ಹೊತ್ತಿನಲ್ಲಿ ಬೆಳೆದುಕೊಳ್ಳುತ್ತಾರೆ. ಮಳೆ ಬೀಳುವುದಕ್ಕೆ ಮುಂಚೆ ಕಬ್ಬು ಕಡೆದು ಬೆಲ್ಲ ಮಾಡಿಕೊಳ್ಳಬೇಕು. ಕಣದಲ್ಲಿರುವ ಜಾನುವಾರುಗಳ ಬಿಳಿಹುಲ್ಲನ್ನು ಮಳೆನೀರು ಹೋಗದಂತೆ ಗೊಣಬೆಗಳನ್ನು ಚೂಪು ಮಾಡಿ ರಕ್ಷಿಸಬೇಕು. ಜಾನುವಾರು ಕೊಟ್ಟಿಗೆಗಳ ಅಟ್ಟದಲ್ಲಿ ಒಣ ಹುಲ್ಲನ್ನು ಸಂಗ್ರಹಿಸಬೇಕು. ಮನೆಯ ಮಾಡಲ್ಲದೆ ಬಚ್ಚಲುಕೊಟ್ಟಿಗೆ, ಗಾಡಿಕೊಟ್ಟಿಗೆ, ದನಗಳ ಕೊಟ್ಟಿಗೆ, ಬತ್ತ ಸೇರಿದಂತೆ ದವಸ ಧಾನ್ಯಗಳನ್ನು ಸಂಗ್ರಹಿಸುವ ಪಣತದ ಕೊಟ್ಟಿಗೆ ಮುಂತಾದ ಎಲ್ಲಾ ಕೊಟ್ಟಿಗೆಗಳ ಮಾಡುಗಳನ್ನು ಹುಲ್ಲು, ಗುಡ್ಡದಲ್ಲಿ ಸಿಕ್ಕುವ ಸಣ್ಣಕಬ್ಬಿನ ಹುಲ್ಲು, ಸೋಗೆ, ಜೆಂಜೀರಿಗೆ, ದಡಸಲು, ಯಾವುದಾದರೊಂದನ್ನು ಮಳೆನೀರಿನಲ್ಲಿ ಸುಲಭವಾಗಿ ಕೊಳೆಯದ ಮತ್ತು ಮಳೆಯ ನೀರಿನಿಂದ ರಕ್ಷಿಸುವಂತಹ ವಸ್ತುಗಳನ್ನು ಮಾಡಿಗೆ ಹೊದಿಸಬೇಕು. ಪ್ರತಿವರ್ಷವೂ ಮಳೆಗಾಲದಲ್ಲಿ ಕೊಳೆತ ಭಾಗವನ್ನು ತೆಗೆದು ಕೊಡವಿ ಹೊದಿಸಬೇಕು. ಮೂರು ವರ್ಷಗಳಿಗೊಮ್ಮೆ ಸಂಪೂರ್ಣವಾಗಿ ಮಾಡನ್ನೇ ಬಿಚ್ಚಿ ಹೊದಿಸಬೇಕು. ಹೀಗೆ ಮಾಡು ಹೊಚ್ಚುವುದು ಎಂಬುದೊಂದು ದೊಡ್ಡ ಕ್ರಿಯೆ. ಅಡಿಕೆ ತೋಟಗಳಿದ್ದವರು ಅಡಿಕೆಯ ಒಣಗಿದ ಗರಿಗಳನ್ನು ಸಂಗ್ರಹಿಸಿ ಸೋಗೆ ಅಟ್ಲು ಮಾಡಿಕೊಳ್ಳುತ್ತಾರೆ. ಅಟ್ಲಿನಲ್ಲಿದ್ದ ಸೋಗೆಯನ್ನು ಅಡ್ಡಮಳೆ ಬರುತ್ತಿದ್ದಂತೆ ಸೋಗೆ ಮತ್ತು ಹಾಳೆಯನ್ನು ಬೇರೆ ಬೇರೆ ಮಾಡುತ್ತಾರೆ. ಸೋಗೆಯನ್ನು ಮಾಡುಗಳಿಗೆ ಹೊದಿಸಿದರೆ ಸೋಗೆ ಮತ್ತು ಹಾಳೆಯ ಮಧ್ಯದಲ್ಲಿರುವ ಭಾಗಕ್ಕೆ ‘‘ಹಾಳೆಮಂಡೆ’’ ಎಂದು ಕರೆಯುತ್ತಾರೆ. ಹಾಳೆಮಂಡೆಯನ್ನು ಹಾಳೆಯಿಂದ ಬೇರ್ಪಡಿಸಿ ಬೇಸಿಗೆಯ ಮಳೆಗಾಗಿ ಕಾಯುತ್ತಾರೆ. ಸಂಕಷ್ಟ ಮಳೆಯಾದ ಮಾರನೆಯ ದಿನ ಹಾಳೆಯ ಹೊರೆಯನ್ನು ಕಟ್ಟುತ್ತಾರೆ. ನೀರು ತಾಗಿದ ಹಾಳೆ ಚರ್ಮದಂತೆ ಮೃದುವಾಗುತ್ತದೆ. ಬಿರುಬೇಸಿಗೆಯಲ್ಲಿ ಹೊರೆಯೊಂದರಲ್ಲಿ ಹತ್ತು ಹಾಳೆ ಕಟ್ಟಿದರೆ ಮಳೆಯಲ್ಲಿ ನೆಂದ ನೂರು ಹಾಳೆಗಳ ಹೊರೆ ಕಟ್ಟಬಹುದು. ಅಡಿಕೆಯ ಹಾಳೆಯನ್ನು ಮಳೆಗಾಲದಲ್ಲಿ ಥಂಡಿಯಾದ ಕಟ್ಟಿಗೆ ಉರಿಸಲು ಪ್ರಾಥಮಿಕವಾಗಿ ಉರಿಸುತ್ತಾರೆ. ಅಡಿಕೆ ಹಾಳೆಗೆ ಬೆಂಕಿ ಬಹುಬೇಗನೆ ಹೊತ್ತಿಕೊಳ್ಳುತ್ತದೆ. ಹಾಗಾಗಿ ಅಡಿಕೆ ತೋಟ ಇರುವವರೂ ಇಲ್ಲದವರೂ ಎಲ್ಲರೂ ಎಂದಷ್ಟು ಅಡಿಕೆ ಹಾಳೆಯನ್ನು ಹೊರೆಕಟ್ಟಿ ಅಟ್ಟಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಮಳೆಗಾಲದಲ್ಲಿ ಯಾರಾದರೂ ತೀರಿಕೊಂಡರೆ ಅಂತಹವರ ದೇಹವನ್ನು ದಹನ ಮಾಡಲು ಸುರಿಯುವ ಮಳೆಯಲ್ಲಿ ನೆಂದ ಕಟ್ಟಿಗೆಯನ್ನು ಉರಿಸಬೇಕು. ಎಡಬಿಡದೆ ಸುರಿಯುವ ಮಳೆಯಲ್ಲಿ ನೆಂದ ಕಟ್ಟಿಗೆಗಳನ್ನು ಉರಿಸುವುದು ಸಾಧ್ಯವಿಲ್ಲ. ಅಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅಲ್ಲದೆ ಕಟ್ಟಿಗೆಯನ್ನು ಉರುವಲಾಗಿ ನಿತ್ಯ ಒಲೆ ಹಚ್ಚುವ ಎಲ್ಲರಿಗೂ ಅಡಿಕೆಯ ಹಾಳೆ ಅಗತ್ಯವಾಗಿ ಬೇಕೇ ಬೇಕು.

ಬೋರ್ಡೋದ್ರಾವಣ ಬರುವುದಕ್ಕಿಂತ ಮುಂಚೆ ಅಡಿಕೆ ಗೊನೆಗಳನ್ನು ಕೊಳೆರೋಗದಿಂದ ಮಳೆಗಾಲದಲ್ಲಿ ರಕ್ಷಿಸಲು ಅಡಿಕೆ ಹಾಳೆಗಳನ್ನು ಒಂದಕ್ಕೊಂದು ಸೇರಿಸಿ ಕೊಟ್ಟೆ ಕಟ್ಟುತ್ತಿದ್ದರು. ಮುಂದಿನ ವರ್ಷದ ಗದ್ದೆ ಬೇಸಾಯ ಮಾಡಲು ಮಳೆಗಾಲಕ್ಕೆ ಮುಂಚೆಯೇ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಗದ್ದೆಯ ಉಬ್ಬು-ತಗ್ಗುಗಳನ್ನು ಉಬ್ಬಿನಿಂದ ಹೊತ್ತು ತಗ್ಗಿಗೆ ಹಾಕಿ ಸಮತಟ್ಟುಗೊಳಿಸಬೇಕು. ಕಂಪದ ಗದ್ದೆಗಳಿಗೆ ಮತ್ತು ಕಂಪದ ಕುಣಿಗೆ ಸುಡುಮಣ್ಣು ಹಾಕಬೇಕು. ಗದ್ದೆಯಲ್ಲಿ ನೀರು ನಿಲ್ಲಿಸುವ ಅಂಚುಗಳನ್ನು ಏಡಿ ಇಲಿಗಳು ರಂಧ್ರಕೊರೆದು ಹುಗುಳು ಮಾಡಿರುತ್ತವೆ. ಅಂತಹ ಅಂಚುಗಳನ್ನು ಎರಡು ಮೂರು ವರ್ಷಗಳಿಗೊಂದು ಸಾರಿ ತಳದವರೆಗೂ ಮಣ್ಣು ಬಗೆದು ನೀರಿನಲ್ಲಿ ಕೆಸರು ತುಳಿದು ಗೋಡೆಯಂತೆ ಸುಳಿದು ಕಟ್ಟುತ್ತಾರೆ. ಅದು ಮಳೆಗಾಲಕ್ಕಿಂತ ಮುಂಚೆಯೇ ಮಾಡಿಕೊಳ್ಳಬೇಕು.

ಮಳೆಗಾಲಕ್ಕೆ ಬೇಕಾಗುವಷ್ಟು ಆಹಾರ, ಉಡುಗೆ, ತೊಡುಗೆ ಸಕಲವನ್ನೂ ಮಳೆ ಹಿಡಿಯುವುದಕ್ಕೆ ಮುಂಚೆಯೇ ಮಾಡಿಕೊಳ್ಳಬೇಕು. ಹಾಗಾಗಿ ಮಲೆನಾಡಿಗರು ಮಳೆಗಾಲವನ್ನು ಯುದ್ಧದಂತೆಯೇ ಎದುರಿಸುತ್ತಾರೆ. ಮಳೆಗಾಲಕ್ಕೆ ಮುಂಚೆ ಮನೆಯ ಮಾಡು ಮಳೆಗಾಲಕ್ಕೆ ಬೇಕಾದ ಉರುವಲು ಕಟ್ಟಿಗೆ, ಅಕ್ಕಿ ಭತ್ತ, ಜಾನುವಾರಿನ ಮೇವು ಎಲ್ಲವನ್ನೂ ಜೋಪಾನ ಮಾಡಬೇಕು. ಅಡಿಕೆಯ ಸೋಗೆ, ಭತ್ತದ ಹುಲ್ಲು ಇವುಗಳನ್ನು ಮನೆಯ ಮಾಡಿಗೆ ಹೊದಿಸಿಕೊಂಡವರೆಲ್ಲರೂ ಪ್ರತಿವರ್ಷ ಕೊಡವಿ ಹೊಚ್ಚಬೇಕು. ಹಿಂದೆ ಶ್ರೀಮಂತರ ಮನೆಗಳಿಗೆ ಕೈ ಹೆಂಚು ಎಂದು ದೋಣಿ ಆಕಾರದ ಹೆಂಚುಗಳನ್ನು ಮಡಕೆ ಮಾಡುವವರು ತಯಾರಿಸುತ್ತಿದ್ದರು. ನಂತರ ಫ್ಯಾಕ್ಟರಿ ಹೆಂಚುಗಳು ಚಾಲ್ತಿಗೆ ಬಂದವು. ಆದರೆ ಯಾವ ಹೆಂಚೇ ಇರಲಿ ಇಲ್ಲಿನ ಮಳೆಗೆ ಅವನ್ನು ಆಗಾಗ ಬಿಚ್ಚಿ ಸ್ವಚ್ಛಗೊಳಿಸಿ ವರ್ಷಕ್ಕೊಂದಾವರ್ತಿ ಹೊದಿಸಬೇಕು. ಇಲ್ಲವಾದರೆ ಹೆಂಚಿನ ನೀರಿನ ದಾರಿಗೇ ಹುಲ್ಲು ಗಿಡವನ್ನು ಹುಟ್ಟಿಸುತ್ತದೆ ಮಳೆನಾಡಿನ ಮುಂಗಾರು. ಇಲ್ಲಿನ ವಾತಾವರಣಕ್ಕೆ ಆಧುನಿಕ ಕಾಂಕ್ರಿಟ್ ಕೂಡ ಒಗ್ಗುವುದಿಲ್ಲ. ಕ್ಷಣ ಕ್ಷಣಕ್ಕೂ ಕ್ಷಿಪ್ರವಾಗಿ ಬದಲಾಗುವ ಹವಾಮಾನದಿಂದ ಕಾಂಕ್ರಿಟ್‌ನಲ್ಲಿ ಬಳಸುವ ಕಬ್ಬಿಣ ಸಂಕುಚಿತಗೊಂಡು ಒಂದೆರಡು ವರ್ಷಗಳಲ್ಲಿಯೇ ಮಳೆಯ ನೀರು ಸುರಿಯಲು ಪ್ರಾರಂಭಿಸುತ್ತದೆ. ಮಳೆನಾಡಿನ ಮಳೆಗೆ ಅಡಿಕೆ ಸೋಗೆ ಮತ್ತು ಭತ್ತದ ಹುಲ್ಲಿನ ಮಾಡೇ ಸೂಕ್ತವಾದದ್ದು. ಅದು ಹವಾನಿಯಂತ್ರಿತವಾಗಿರುತ್ತದೆ. ಆದರೂ ಕಾಂಕ್ರಿಟ್ ಮಾಡು ಮಾಡಿ ಅದರ ಮೇಲೆ ತಗಡು ಹೊದಿಸಿಕೊಳ್ಳುವವರೇ ಹೆಚ್ಚು.

ಮಲೆನಾಡಿನ ಜನ ಹಲವು ಶತಮಾನಗಳ ಅನುಭವದಿಂದ ಮಳೆಗಾಲವನ್ನು ಎದುರುಗೊಳ್ಳುವ ವಿಧಾನಗಳನ್ನು ಕಂಡುಕೊಂಡಿದ್ದಾರೆ.

ಮಳೆ ಕೂರುವುದು

ಮುಂಗಾರು ಪೂರ್ವದಲ್ಲಿ ಬೆಳಗಿನಿಂದ ಶಾಖ ಹೆಚ್ಚುತ್ತಾ ಹೋಗಿ ಮಧ್ಯಾಹ್ನದ ನಂತರ ಎಲ್ಲೆೆಲ್ಲಿ ಮೋಡ ಹೆಪ್ಪುಗಟ್ಟುತ್ತದೋ ಅಂತಲ್ಲಿ ಮಳೆ ಸುರಿಯುತ್ತದೆ. ಮಳೆ ಸುರಿದ ಮರುದಿನ ಮತ್ತಷ್ಟೇ ಸೆಕೆ ಹೆಚ್ಚುತ್ತದೆ. ಹೀಗೆ ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ತಿಂಗಳ ಮೊದಲಲ್ಲಿ ಯಾವ ದಿಕ್ಕಿನಿಂದಲಾದರೂ ಬೀಸುತ್ತಿದ್ದ ಗಾಳಿ ಸ್ತಬ್ಧವಾಗಿ ನೈರುತ್ಯದಿಂದ, ಆಗ್ನೇಯ ದಿಕ್ಕಿಗೆ ಅಥವಾ ಪಶ್ಚಿಮದಿಂದ ಪೂರ್ವ ದಿಕ್ಕಿಗೆ ಗಾಳಿ ಬೀಸಲು ಶುರುವಾಗುತ್ತದೆ. ಆಕಾಶವೆಲ್ಲ ಮೋಡಗಳಿಂದ ತುಂಬಿ ಒಮ್ಮಿಮ್ಮೆ ಬೆಳಕೂ ಆಗುತ್ತದೆ. ಬೇಸಿಗೆಯ ಬಿರುಬಿಸಿಲಿನಿಂದ ಬಿಸಿಯಾಗಿದ್ದ ವಾತಾವರಣ ಒಂದೇ ಸಾರಿ ತಣ್ಣಗಾಗುತ್ತದೆ. ಏರುಗುಡ್ಡಗಳ ತಲೆೆಯ ಮೇಲೆೆಲ್ಲಾ ಮಂಜಿನ ಟೊಪ್ಪಿಯಂತೆ ಮೋಡಗಳು ಮುತ್ತಿಕೊಳ್ಳುತ್ತವೆ. ಗುಡ್ಡದ ತುದಿಗಳಲ್ಲಿ ಮೋಡಗಳು ಮಂಜಿನಂತೆ ಆವರಿಸಿಕೊಂಡರೆ ಅದಕ್ಕೆ ಮಳೆ ಕೂರುವುದು ಎನ್ನುತ್ತಾರೆ. ಈ ರೀತಿ ಗುಡ್ಡಗಳ ಮೇಲೆೆ ಮೋಡ ಮುಚ್ಚಿಕೊಳ್ಳುವುದು ಮುಂಗಾರು ಮಳೆಯ ಆರಂಭದ ಸೂಚನೆಯಾಗಿರುತ್ತದೆ. ಆ ಸಂದರ್ಭದಲ್ಲಿ ವಾತಾವರಣದ ಒತ್ತಡ ಎಷ್ಟಿರುತ್ತದೆ ಎಂದರೆ ಮನೆಯ ಒಳಗೆ ಉರಿಸಿದ ಒಲೆಯ ಹೊಗೆ ಹೊರಗೆ ಹೋಗದೆ ಮನೆಯ ಒಳಗೆ ತುಂಬಿಕೊಂಡಿರುತ್ತದೆ. ಅದಕ್ಕೆ ಹೊಗೆ ಸುತ್ತುವುದು ಎನ್ನುತ್ತಾರೆ. ಮನೆ ಒಳಗೆ ಹೊಗೆ ಸುತ್ತಲು ಪ್ರಾರಂಭವಾದರೆ ಮುಂಗಾರು ಮಳೆ ಹಿಡಿದಿರುವುದಕ್ಕೆ ಸಾಕ್ಷಿಯಾಗುತ್ತದೆ.

ಒಂದೇ ಸಮನೆ ಆಗ್ನೇಯದಿಂದ ನೈರುತ್ಯ ದಿಕ್ಕಿಗೆ ರಭಸವಾದ ಗಾಳಿ ಬೀಸಲು ಪ್ರಾರಂಭಿಸುತ್ತದೆ. ಅಲ್ಲಿಯ ವರೆಗೂ ಬೇಸಿಗೆಯ ಶಾಖದಿಂದ ಬೇಯುತ್ತಿದ್ದ ವಾತಾವರಣ ಒಂದೇ ಸಾರಿಗೆ ಚಳಿ ಹಿಡಿಯುವಷ್ಟು ತಣ್ಣಗಾಗುತ್ತದೆ. ತಣ್ಣಗಿನ ಗಾಳಿಯು ಬೀಸುತ್ತಲೆೇ ಅದರ ಹಿಂದೆ ಒಂದರ ನಂತರ ಒಂದು ಗುಡ್ಡಗಳನ್ನು ದಾಟಿ ಮಳೆ ನಿರಂತರವಾಗಿ ಬರುತ್ತಲೆೇ ಇರುತ್ತದೆ. ದೂರದರ್ಶನಗಳು ಮೊದಲು ಬಂದಾಗ ಕಪ್ಪು ಬಿಳುಪಿನ ಪರದೆಯ ಮೇಲೆೆ ಒಂದರ ನಂತರ ಒಂದು ಪಟ್ಟಿ ಜಾರುತ್ತಿತ್ತು. ಅದೇ ರೀತಿ ಮುಂಗಾರು ಮಳೆ ಒಂದು ಮಳೆಯ ಹಿಂದೆ ಮತ್ತೊಂದು. ಮಳೆಗಾಲದ ಮಳೆಯಲ್ಲಿ ಸಾಮಾನ್ಯ ಜೋರು ಎನ್ನುವುದು ಬಿಟ್ಟರೆ ಮಳೆ ಬರುವುದಕ್ಕೆ ಬಿಡುಗಡೆಯೇ ಇಲ್ಲ. ಆಕಾಶ ಭೂಮಿ ಒಂದಾಗಿ ಕಾಡು ಗುಡ್ಡಗಳನ್ನೆಲ್ಲ ಮುಚ್ಚಿ ಒಂದೊಂದು ಪ್ರದೇಶವು ಒಂದೊಂದು ಜಗತ್ತಾಗುತ್ತದೆ. ಗುಡ್ಡಗಳನ್ನು ಹತ್ತಿ ನಿಂತರೆ ಸುತ್ತಲ ಪ್ರಪಂಚ ಕಾಣಿಸುವುದೇ ಇಲ್ಲ. ಎಲ್ಲೆೆಲ್ಲೂ ನೀರು ಹರಿಯುವ ಸದ್ದು ಜೋರಾಗಿ ನಿರಂತರವಾಗಿ ಮಳೆ ಬರುತ್ತಿದ್ದರೆ ಮಳೆಯ ಶಬ್ದದ ಸಂಗೀತ ತಲೆೆದೂಗಿಸುತ್ತದೆ. ನಾವು ಮಕ್ಕಳಿದ್ದಾಗ ಕಿವಿಯಲ್ಲಿ ಬೆರಳಿಟ್ಟು ಮಳೆಯ ಶಬ್ದದ ಸಂಗೀತವನ್ನು ಬಾರಿಸುತ್ತಿದ್ದೆವು. ಮಳೆ ಶಬ್ದ ನಿದ್ದೆ ಬರಿಸುವಂತೆ ಇರುತ್ತದೆ. ಮಳೆಗಾಲವೇ ಹಾಗೆ ಹೊಟ್ಟೆಯ ಹಸಿವೂ ಹೆಚ್ಚುತ್ತಲೆ ಕಣ್ಣಿಗೆ ನಿದ್ರೆಯೂ ಹೆಚ್ಚು. ಗುಡುಗಿಲ್ಲ ಮಿಂಚಿಲ್ಲ ಬರೀ ಬಿರುಗಾಳಿ. ಗಾಳಿಯಲ್ಲೂ ಅರ್ಧಕ್ಕರ್ಧ ನೀರೇ. ಮಳೆಗಾಲದ ಥಂಡಿಗಾಳಿಯಿಂದ ಮನೆಗಳನ್ನು ರಕ್ಷಿಸಿಕೊಳ್ಳಲು ಮನೆಯ ಎದುರಿನ ಮತ್ತು ಹಿಂದಿನ ಬಾಗಿಲೆೆರಡನ್ನು ಬಿಟ್ಟು ಇಡೀ ಮನೆಯನ್ನು ಸೊಪ್ಪಿನಿಂದ ತಡಿಕೆ ಕಟ್ಟಿ ಮುಚ್ಚಿಕೊಳ್ಳುತ್ತಾರೆ. ಯುಗಾದಿ ಹಬ್ಬದ ರಾತ್ರಿ ವರ್ಷದ ಭವಿಷ್ಯ ಹೇಳುವ ಪುರೋಹಿತರು ಮನೆ ಮನೆಗೆ ಬರುತ್ತಾರೆ. ಎಲ್ಲರ ಕುತೂಹಲವು ಇರುವುದು ಆ ವರ್ಷದ ಯುಗಾದಿ ಯಾವುದರ ಮೇಲೆೆ ಹೋಯಿತು ಮತ್ತು ಆ ವರ್ಷ ಎಷ್ಟು ಕೊಳಗ ಗಾಳಿ, ಎಷ್ಟು ಕೊಳಗ ಮಳೆ ಬರುತ್ತದೆ ಎಂಬುದನ್ನು ಜೋಯಿಸರಿಂದ ತಪ್ಪದೇ ತಿಳಿದುಕೊಳ್ಳುತ್ತಾರೆ. ಮೂರು ಕೊಳಗ ಗಾಳಿ ಆರು ಕೊಳಗ ಮಳೆ ಎಂದರೆ ಮುಂದಿನ ಮಳೆಗಾಲ ಭರ್ಜರಿ ಮಳೆಗಾಲ ಹಾಗೆಯೇ ಒಂದು ಕೊಳಗ ಗಾಳಿಯು ಮೂರು ಕೊಳಗ ಮಳೆಯಾದರೆ ಕನಿಷ್ಠ ಮಳೆಗಾಲ. ಅದಕ್ಕಿಂತಲೂ ಜೋಯಿಸರು ಮುಂದಿನ ಮಳೆಗಾಲವನ್ನು ಭಯಾನಕ ವಾಗಿ ಚಿತ್ರಿಸುವುದು ವಾಡಿಕೆ. ಮಲೆೆನಾಡಿನ ಎಲ್ಲರೂ ಮುಂಗಾರು ಮಳೆಗಾಲವನ್ನು ಭಯ ಆತಂಕಗಳಿಂದ ಯುದ್ಧದಂತೆ ಎದುರಿಸುತ್ತಾರೆ. ಮಳೆಗಾಲಕ್ಕೆ ಏನೇ ತಯಾರಿ ಮಾಡಿಕೊಂಡಿದ್ದರೂ ಯಾವ ಅನಾಹುತ ಬೇಕಾದರೂ ಆಗಬಹುದು. ಮನೆಯ ಮಾಡೇ ಹಾರಿ ಹೋಗುವಂತಹ ಗಾಳಿ ಬೀಸಬಹುದು. ವಿಪರೀತವಾದ ಮಳೆ ಬಂದು ಹಳ್ಳ ಹೊಳೆಗಳು ಉಕ್ಕಿ ಗುಡ್ಡಗಳೇ ಜಾರಬಹುದು. ಜಮೀನುಗಳು ಕೊಚ್ಚಿ ಹೋಗಬಹುದು. ಎಳೆ ಅಡಿಕೆ ತೋಟಗಳಲ್ಲಿ ಗಾಳಿಯ ಹೊಡೆತಕ್ಕೆ ಗಣನೀಯ ಸಂಖ್ಯೆಯಲ್ಲಿ ಅಡಿಕೆ ಮರಗಳು ಮುರಿದು ಹೋಗಬಹುದು. ನಿರಂತರ ಮಳೆಗಾಲದಿಂದ ಅಡಿಕೆಯ ಗೊನೆಗಳಿಗೆ ಕೊಳೆ ರೋಗ ಬರಬಹುದು. ಗುಡ್ಡಗಳಲ್ಲಿ ಹುಲ್ಲು ಕೊಳೆತು ಜಾನುವಾರುಗಳ ಮೇವಿನ ಅಭಾವವಾಗಬಹುದು. ದೊಡ್ಡ ದೊಡ್ಡ ಮರಗಳು ಮುರಿದು ನೆಲಕ್ಕೆ ಉರುಳಿ ಏನು ಬೇಕಾದರೂ ಆಗಬಹುದು. ವಯಸ್ಸಾದವರೂ ಮಕ್ಕಳೂ ರೋಗ ಪೀಡಿತರಾಗಿ ಮಳೆಯ ಉಡ್ರಿನಿಂದ ಕೊನೆಗಾಲ ಕಾಣಬಹುದು. ಹೊಳೆಯ ತಡಿಗಳಲ್ಲಿರುವ ಜಮೀನುಗಳು, ಮನೆಗಳು ನೆರೆಯ ಹಾವಳಿಗೆ ತುತ್ತಾಗಬಹುದು. ಒಟ್ಟಿನಲ್ಲಿ ಮುಂಗಾರು ಮಳೆ ಅತಿಯಾದರೆ ಮಳೆನಾಡಿಗೆ ಕೇಡಾಗುವುದು ಖಚಿತ. ಮುಂಗಾರು ಮಳೆ ಮಲೆೆನಾಡಿನಲ್ಲಿ ಸುರಿದರೂ ಮಲೆೆನಾಡಿಗರಿಗೆ ಅದು ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟದ್ದೇ ಆಗುತ್ತದೆ. ಮಲೆೆನಾಡಿನಲ್ಲಿ ಮುಂಗಾರು ಮಳೆ ಸುರಿಯದಿದ್ದರೆ ಬಯಲು ಸೀಮೆಯಲ್ಲಿ ಬರ ಬರುತ್ತದೆ. ಮಳೆನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಿದಂತೆಲ್ಲ ಬಯಲುಸೀಮೆಗೆ ತದ್ವಿರುದ್ಧವಾಗಿ ಒಳ್ಳೆಯದಾಗುತ್ತದೆ. ಒಂದೇ ಸಮನೆ ಲೆೆಕ್ಕವಿಲ್ಲದಷ್ಟು ಮಳೆ ಹುಯ್ದರೆ ಅದಕ್ಕೆ ಹುಚ್ಚು ಮಳೆ ಎನ್ನುತ್ತಾರೆ. ‘ಹುಚ್ಚು ಮಗ ಉಂಡ್ರೂ ಕಷ್ಟ, ಹುಚ್ಚು ಮಳೆ ಹೊಯ್ದ್ರೂ ಕಷ್ಟ’ ಎಂದು ವಿಪರೀತ ಮಳೆಗೆ ಆತಂಕಗೊಂಡವರು ಶಾಪ ಹಾಕುತ್ತಾರೆ. ಬೇರೆ ಬೇರೆ ಕವಿಗಳು ತಮ್ಮ ಭಾವನೆಗೆ ತಕ್ಕಂತೆ ಆ ಮಳೆಯ ಮೋಡಗಳನ್ನು ಹೇಗೆಲ್ಲಾ ವರ್ಣಿಸಿದ್ದಾರೆ. ಕಪ್ಪು ಬಿಳುಪಿನ ಲಲನೆಯನ್ನು ನಾಮುಂದು ತಾಮುಂದೆ ಎಂದು ಚಲಿಸುತ್ತಿರುವಾಗ ಪರ್ವತರಾಜ ಅಡ್ಡಗಟ್ಟಿ ತನ್ನ ತೋಳ ಬಂದಿ ಮಾಡುತ್ತಾನೆ. ಆಗ ಕಪ್ಪು ಬಿಳುಪಿನ ಚೆಲುವೆಯರು ಜಲವ ಸ್ರವಿಸುತ್ತಾರೆ. ಮಳೆಯ ಸುರಿಸುತ್ತಾರೆ ಎಂದು ಬೇರೆ ಬೇರೆ ಕವಿಗಳು ಮುಂಗಾರಿನ ಮಳೆಯ ಬಗ್ಗೆ ರಮ್ಯವಾಗಿ ಹೇಳಿದ್ದಾರೆ. ಆದರೆ ಮುಂಗಾರಿನ ಆರಂಭ ಹಾಗೆಯೇ ಇರುವುದಿಲ್ಲ. ಮಲೆೆನಾಡಿನವರೇ ಆದ ಪರಿಸರ ಕವಿಯೆಂದು ಖ್ಯಾತರಾದ ಕವಿ ಕುವೆಂಪುರವರು ಸ್ವತಹ ಮುಂಗಾರು ಮಳೆಯ ಆಗಮನದ ಆರ್ಭಟ ಮತ್ತು ರೌದ್ರ ಅವತಾರವನ್ನು ತಮ್ಮ ಮುಂಗಾರು ಕವನದಲ್ಲಿ ಅನುಭವಿಸಿ ಹೀಗೆ ಹೇಳಿದ್ದಾರೆ.

ಪಡುವಲ ಕಡಲಿನ ಮಿಂಚನು ಗುಡುಗನು ನುಂಗಿ ಬಿಸಿಲಿನಲಿ, ಮುಡಿಗೆದರಿ,

ಮುಂಗಾರಸುರಿಯು ರಕ್ಕಸವಜ್ಜೆಗಳಿಕ್ಕುತ ಬಂದಳು ಬಲು ಗದರಿ!

ಗುಟುರನು ಹಾಕಿತು ಮುಂಗಾರ್ ಗೋಳಿ!

ಘೀಳಿಟ್ಟೂರಲಿತು ಘನಘಟೆಯಾಳಿ

ಸುತ್ತಲು ಮುತ್ತಿತು ಕಾರ್ಮೋಡ!

ಹರಿಯುವ ಹಾವಿನ ತೆರದಲಿ ಕತ್ತಲೆ ಮೆಲ್ಲನೆ ನುಂಗಿತು ಮಲೆೆನಾಡ!

ಹಿಂಗಜಿರಿದುರಿಬಿಸಿಲಂಜುತಲಡಾಗಿತುಲೆ ರವಿಮಂಡಾಲ ಕಣ್ಮರೆಯಾಯ್ತು;

ಕಾಳಿಯ ಕೇಶದ ತಿಮಿರವು ಮುಸುಗಿತುಲೆ ಶಾಂತಿಯು ಗಲಭೆಗೆ ಸೆರೆಯಾಯ್ತು.

ಕಾಳಿಯ ಕಂಗಳ ಕೆಂಬೆಳಕಂತೆಲೆ

ಕೈ ಹೊಂಬಳೆಗಳ ಹೊಸ ಹೊಗರಂತೆಲೆ

ಝಳಪಿಪ ಖಡ್ಗದ ದೀಧಿತಿಯಂತೆಲೆ

ಮುಂಚುಗಳೆಸೆದುವು ಗೊಂಚಲಲಿ!

ಹೊಳೆದುವುಲೆ ಅಳಿದುವುಲೆ ಸುಳಿಸುಳಿದವು ಮುತ್ತುವ ಮೋಡಗಳಂಚಿನಲಿ!

Writer - ಕಲ್ಕುಳಿ ವಿಠಲ ಹೆಗ್ಡೆ

contributor

Editor - ಕಲ್ಕುಳಿ ವಿಠಲ ಹೆಗ್ಡೆ

contributor

Similar News