ಚಾಂಪಿಯನ್ಸ್‌ ಲೀಗ್ ಫುಟ್ಬಾಲ್: ರಿಯಲ್ ಮ್ಯಾಡ್ರಿಡ್ ಹ್ಯಾಟ್ರಿಕ್ ಸಾಧನೆ

Update: 2018-05-27 05:37 GMT

ಕೀವ್, ಮೇ 27: ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ ಲಿವರ್‌ಪೂಲ್ ತಂಡವನ್ನು 3-1 ಗೋಲುಗಳಿಂದ ಸದೆಬಡಿದ ಹಾಲಿ ಚಾಂಪಿಯನ್ ರಿಯಲ್ ಮ್ಯಾಡ್ರಿಡ್ ತಂಡ ಗೆಲುವಿನ ಹ್ಯಾಟ್ರಿಕ್ ಸಾಧಿಸಿದೆ. ತಂಡದ ಪ್ರಮುಖ ಆಟಗಾರ ಗರೆಥ್ ಬೇಲ್ ನಂಬಲಸಾಧ್ಯ ಓವರ್‌ಹೆಡ್ ಕಿಕ್ ಸೇರಿದಂತೆ ಎರಡು ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ರಿಯಲ್ ಮ್ಯಾಡ್ರಿಡ್ ತಂಡದ ಕರೀಮ್ ಬೆನ್ಸೇಮಾ ಮೊದಲ ಗೋಲು ದಾಖಲಿಸಿ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಆದರೆ ರಿಯಲ್ ಮ್ಯಾಡ್ರಿಡ್ ತಂಡದಿಂದ 64ನೇ ನಿಮಿಷದಲ್ಲಿ ಇಸ್ಕೊ ಬದಲು ಮೈದಾನಕ್ಕೆ ಇಳಿದ ಬೇಲ್ ಮಿಂಚಿನ ಎರಡು ಗೋಲು ಗಳಿಸಿ, ತಂಡ ಸಮಬಲ ಸಾಧಿಸಲು ನೆರವಾದರು.

ಆಟ ಮುಕ್ತಾಯಕ್ಕೆ ಏಳು ನಿಮಿಷಗಳಿದ್ದಾಗ ವೇಲ್ಸ್‌ಮನ್ ಮತ್ತೊಂದು ಗೋಲಿನ ಮೂಲಕ ಗೆಲುವು ಖಾತ್ರಿಪಡಿಸಿ, 13ನೇ ಬಾರಿಗೆ ರಿಯಲ್ ಮ್ಯಾಡ್ರಿಡ್, ಕಪ್ ಗೆಲ್ಲಲು ನೆರವಾದರು. ಲಾರಿಸ್ ಕರಿಯೂಸ್ ಮಾಡಿದ ಪ್ರಮಾದದ ಸದುಪಯೋಗ ಪಡೆದುಕೊಂಡ ವೇಲ್ಸ್‌ಮನ್, ದೂರದಿಂದ ಚೆಂಡನ್ನು ನೆಟ್ ಒಳಕ್ಕೆ ಸೇರಿಸಿದರು.

1976ರಲ್ಲಿ ಬಯೆರ್ನ್ ಮ್ಯೂನಿಚ್ ತಂಡ ಸತತ ಮೂರು ಬಾರಿ ಈ ಕಪ್ ಗೆದ್ದ ಬಳಿಕ ಈ ಸಾಧನೆ ಮಾಡಿದ ಏಕೈಕ ತಂಡ ಎಂಬ ಖ್ಯಾತಿಗೆ ರಿಯಲ್‌ ಮ್ಯಾಡ್ರಿಡ್ ಪಾತ್ರವಾಯಿತು. ಝೈನುದ್ದೀನ್ ಜಿದಾನೆ, ಸತತ ಎರಡು ಬಾರಿ ತಂಡಕ್ಕೆ ಪ್ರಶಸ್ತಿ ದೊರಕಿಸಿಕೊಟ್ಟ ಕೋಚ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News