4 ವರ್ಷಗಳ ಬಳಿಕವೂ ಈಡೇರದ ಪ್ರಧಾನಿ ಮೋದಿಯ ಪ್ರಮುಖ 10 ಭರವಸೆಗಳು

Update: 2018-05-27 11:16 GMT

ನೋಟು ರದ್ದತಿ ಮತ್ತು ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ಸೇರಿದಂತೆ ಹಲವು ಏಕಪಕ್ಷೀಯ ನಿರ್ಧಾರಗಳನ್ನು ಮೋದಿ ತಮ್ಮ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ತೆಗೆದುಕೊಂಡಿದ್ದಾರೆ.

ಇಂದು ಮೋದಿ ಸರ್ಕಾರ ಚುನಾವಣಾ ವರ್ಷಕ್ಕೆ ಕಾಲಿಡುತ್ತಿದೆ. 2019ರ ಲೋಕಸಭಾ ಚುನಾವಣೆ ವೇಳೆ ತಮ್ಮ ಸಾಧನೆಯ ಪಟ್ಟಿಯನ್ನು ಜನರ ಮುಂದಿಟ್ಟು, ತೀರ್ಮಾನ ಕೈಗೊಳ್ಳುವುದನ್ನು ಜನರಿಗೇ ಬಿಡುತ್ತೇವೆ ಎಂದು ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳುತ್ತಾ ಬಂದಿದ್ದಾರೆ.

ಪ್ರಧಾನಿ ಹುದ್ದೆಯ ಸವಾಲುಗಳನ್ನು ಎದುರಿಸಲು ಸಜ್ಜಾಗುವ ನಿಟ್ಟಿನಲ್ಲಿ ಮೋದಿ ಕಳೆದ ಚುನಾವಣೆಯಲ್ಲಿ ಹಲವು ಆಶ್ವಾಸನೆಗಳನ್ನು ನೀಡಿದ್ದರು. ಇದೀಗ ಮೋದಿ ಲೋಕ ಕಲ್ಯಾಣ್‍ಮಾರ್ಗದ 7ನೇ ನಂಬರ್ ಕಟ್ಟಡದಲ್ಲಿ ನಾಲ್ಕು ವರ್ಷ ಪೂರ್ಣಗೊಳಿಸಿದ್ದಾರೆ. ಮೋದಿ ಚುನಾವಣೆ ಸಂದರ್ಭ ನೀಡಿದ ಆಶ್ವಾಸನೆಗಳಲ್ಲಿ ಎಷ್ಟನ್ನು ಈಡೇರಿಸಿದ್ದಾರೆ ಎನ್ನುವುದನ್ನು ನಾವು ಮೌಲ್ಯಮಾಪನ ಮಾಡಬಹುದು.

ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಕೇಂದ್ರ ಸರಕಾರ ತಾನು ನೀಡಿದ್ದ 10 ಪ್ರಮುಖ ಆಸ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ.

1.ಉದ್ಯೋಗ

ಇದು ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಚರ್ಚಿತ ವಿಷಯ. ಉದ್ಯೋಗ ರಂಗದಲ್ಲಿ ಮೋದಿ ಸಾಧನೆಯ ಬಗ್ಗೆ ವೈರುಧ್ಯಗಳ ವರದಿ ಮತ್ತು ಪ್ರತಿಪಾದನೆಗಳಿವೆ. ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (ಇಪಿಎಫ್‍ಒ) ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‍ಪಿಎಸ್) ಬಿಡುಗಡೆ ಮಾಡಿದ ವೇತನ ಪಾವತಿ ಅಂಕಿ ಅಂಶಗಳ ಪ್ರಕಾರ, 2018ರ ಫೆಬ್ರವರಿವರೆಗೆ ದೇಶದಲ್ಲಿ 22 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ.

ಎಲ್ಲ 125 ಕೋಟಿ ಮಂದಿಯೂ ಉದ್ಯೋಗ ಗಳಿಸಲಾರರು ಎಂದೇ ಅಮಿತ್ ಶಾ ಹೇಳುತ್ತಾ ಬಂದಿದ್ದಾರೆ. ನಿರುದ್ಯೋಗದ ಸಮಸ್ಯೆಗೆ ಸ್ವಯಂ ಉದ್ಯೋಗವೇ ಉತ್ತರ ಎಂದು ಅವರು ಈ ಹಿಂದೆ ಹೇಳಿದ್ದರು. ಮುದ್ರಾ, ಸ್ಟ್ಯಾಂಡ್ ಅಪ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ಮುಂತಾದ ಸರ್ಕಾರಿ ಯೋಜನೆಗಳ ಮೂಲಕ 9 ಕೋಟಿ ಮಂದಿ ಸ್ವಂತ ಉದ್ಯೋಗ ಆರಂಭಿಸಿದ್ದಾರೆ ಎಂದವರು ಪ್ರತಿಪಾದಿಸಿದ್ದರು. ಉದ್ಯೋಗದ ಭಿನ್ನ ವಿಶ್ಲೇಷಣೆಯಲ್ಲಿ ಮೋದಿ ಹಾಗೂ ಅಮಿತ್ ಶಾ ಅವರು ಪಕೋಡ ಮಾರುವುದು ಕೂಡಾ ಉದ್ಯೋಗ ಎಂದು ಪುನರುಚ್ಚರಿಸಿದ್ದಾರೆ. ನಿರುದ್ಯೋಗಿಗಳಾಗಿರುವುದಕ್ಕಿಂತ ಪಕೋಡ ಮಾರುವುದು ಒಳ್ಳೆಯದು ಎನ್ನುವುದು ಅವರ ಸಮರ್ಥನೆ.

ಪಕೋಡ ಹೇಳಿಕೆಯನ್ನು ವಿರೋಧ ಪಕ್ಷಗಳು ಅಣಕಿಸಿವೆ. ಉದ್ಯೋಗರಂಗದಲ್ಲಿ ಬಿಜೆಪಿ ಸರ್ಕಾರದ ಸಾಧನೆಯನ್ನು ಪದೇ ಪದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸುತ್ತಿದ್ದಾರೆ. ಪ್ರತಿ ವರ್ಷ ಎರಡು ಕೋಟಿ ಮಂದಿಗೆ ಉದ್ಯೋಗ ನೀಡುವುದಾಗಿ ಮೋದಿ ಹೇಳಿದ್ದನ್ನು ರಾಹುಲ್ ಉಲ್ಲೇಖಿಸಿದ್ದಾರೆ. ಚೀನಾ 24 ಗಂಟೆಗಳಲ್ಲಿ 50 ಸಾವಿರ ಯುವಕರಿಗೆ ಉದ್ಯೋಗ ನೀಡಿದ್ದರೆ, ಮೋದಿ ಸರ್ಕಾರ 24 ಗಂಟೆಗಳಲ್ಲಿ 450 ಮಂದಿಗೆ ಉದ್ಯೋಗ ನೀಡಿದೆ ಎಂದು ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ರಾಹುಲ್‍ಗಾಂಧಿ ಹೇಳಿದ್ದರು.

2. ಬೆಲೆ ಏರಿಕೆ

ಬೆಲೆ ಏರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಪ್ರಣಾಳಿಕೆ ಹೇಳಿತ್ತು. ಕಾಳಸಂತೆ ತಡೆ ಮತ್ತು ಒತ್ತಾಯಪೂರ್ವಕವಾಗಿ ಸರಕುಗಳನ್ನು ಬಚ್ಚಿಡುವ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ಆರಂಭಿಸುವುದಾಗಿಯೂ ಬಿಜೆಪಿ ಘೋಷಿಸಿತ್ತು. ಆದರೆ ಇದುವರೆಗೆ ಇಂಥ ಯಾವ ವಿಶೇಷ ನ್ಯಾಯಾಲಯವೂ ಸ್ಥಾಪನೆಯಾಗಿಲ್ಲ.

ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ನಿಯಂತ್ರಿಸಲು ಕೂಡಾ ವಿಫಲವಾಗಿದೆ. ಇತಿಹಾಸದಲ್ಲೇ ಗರಿಷ್ಠ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಸುಳಿಯಲ್ಲಿ ದೇಶ ಸಿಕ್ಕಿಹಾಕಿಕೊಂಡಿದೆ. ಪೆಟ್ರೋಲಿಯಂ ಉತ್ಪನ್ನಗಳ ಜತೆಗೆ ಇತರ ಸರಕುಗಳ ಬೆಲೆ ಕೂಡಾ ಗಗನಮುಖಿಯಾಗಿವೆ.

3.ಮೂಲಭೂತ ಅಗತ್ಯಗಳು

ಬಿಲ್ಡಿಂಗ್ ಇಂಡಿಯಾ ಉಪಶೀರ್ಷಿಕೆಯಡಿ ಬಿಜೆಪಿ ಪ್ರಣಾಳಿಕೆ ಎಲ್ಲರಿಗೂ ವಿದ್ಯುತ್, ನೀರು, ಶೌಚಾಲಯ ಸೌಲಭ್ಯವಿರುವ ಸೂರು ಒದಗಿಸುವ ಭರವಸೆ ನೀಡಿತ್ತು. ಆದರೆ ದೇಶದ ಬಹುತೇಕ ಭಾಗಗಳಲ್ಲಿ ಇದು ಮರೀಚಿಕೆಯಾಗಿಯೇ ಉಳಿದಿದೆ.

4. ಬುಲೆಟ್ ರೈಲು

ಬುಲೆಟ್ ರೈಲು ಜಾಲ ನಿರ್ಮಿಸುವ ವಜ್ರ ಚತುರ್ಭುಜ ಯೋಜನೆ ಆರಂಭಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ ಅಹ್ಮದಾಬಾದ್- ಮುಂಬೈ ಮಧ್ಯೆ ಬುಲೆಟ್ ರೈಲು ಮಾರ್ಗದ ಕಾಮಗಾರಿಯೊಂದಕ್ಕೆ ಮಾತ್ರ ಚಾಲನೆ ನೀಡಿದ್ದು, ಇದರಲ್ಲೂ ಸಾಧಿಸಿರುವ ಪ್ರಗತಿ ಅತ್ಯಲ್ಪ. ಕಳೆದ ಗುಜರಾತ್ ಚುನಾವಣೆಗೆ ಮುನ್ನ ದೊಡ್ಡ ಸಮಾರಂಭ ಏರ್ಪಡಿಸಿ, ಈ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಇದರ ಹೊರತಾಗಿ ಯಾವ ವಿಭಾಗದಲ್ಲೂ ಕಾಮಗಾರಿ ಆರಂಭವಾಗಿಲ್ಲ.

5. ಕಪ್ಪುಹಣ

ಸಾಗರೋತ್ತರ ಬ್ಯಾಂಕ್‍ಗಳಲ್ಲಿ ಇರುವ ಭಾರತೀಯರ ಕಪ್ಪುಹಣವನ್ನು ತರುವುದಾಗಿ ಬಿಜೆಪಿ ನಾಯಕರು ನೀಡಿದ್ದ ಆಶ್ವಾಸನೆ ಕೂಡಾ ಹಾಗೆಯೇ ಉಳಿದಿದೆ. ವಿರೋಧ ಪಕ್ಷ, ಅದರಲ್ಲೂ ಮುಖ್ಯವಾಗಿ ರಾಹುಲ್‍ಗಾಂಧಿ ಈ ಬಗ್ಗೆ ಅಣಕವಾಡಿ, ಮೋದಿ ಸರ್ಕಾರ ನಿಮ್ಮ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಜಮೆ ಮಾಡಿದೆಯೇ ಎಂದು ಪ್ರಶ್ನಿಸಿದ್ದಾರೆ.

6. ಮಹಿಳೆಯರಿಗೆ ಮೀಸಲಾತಿ

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಒದಗಿಸಲು ಸಂವಿಧಾನ ತಿದ್ದುಪಡಿ ತರಲು ತಮ್ಮ ಸರ್ಕಾರ ಬದ್ಧ ಎಂದು ಬಿಜೆಪಿ ಪ್ರಣಾಳಿಕೆ ಘೋಷಿಸಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2010ರ ಮಾರ್ಚ್‍ನಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿತ್ತು. ಆದರೆ ಲೋಕಸಭೆಯಲ್ಲಿ ಈ ಮಸೂದೆ ಇನ್ನೂ ನನೆಗುದಿಗೆ ಬಿದ್ದಿದೆ.

ಲೋಕಸಭೆಯಲ್ಲಿ ಬಹುಮತ ಇದ್ದ ಹೊರತಾಗಿಯೂ ಮೋದಿ ಸರ್ಕಾರ, ಕೆಳ ಸದನದಲ್ಲಿ ಮಸೂದೆ ಆಂಗೀಕರಿಸಲು ಯಾವ ಪ್ರಯತ್ನವನ್ನೂ ನಡೆಸಿಲ್ಲ. 2019ರ ಲೋಕಸಭೆ ಚುನಾವಣೆಗೆ ಮುನ್ನ ಈ ಮಸೂದೆಯನ್ನು ಆಂಗೀಕರಿಸಲು ಕೇವಲ ಮೂರು ಬಾರಿ ಮಾತ್ರ ಸಂಸತ್ ಅಧಿವೇಶನ ನಡೆಯುತ್ತದೆ.

7. ಕೃಷಿ

ಇತರ ಆಶ್ವಾಸನೆಗಳ ಜತೆಗೆ, ರೈತರಿಗೆ ಉತ್ಪಾದನಾ ವೆಚ್ಚದ ಕನಿಷ್ಠ ಶೇಕಡ 50ರಷ್ಟು ಲಾಭವನ್ನು ಖಾತ್ರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಪ್ರಣಾಳಿಕೆ ನೀಡಿತ್ತು. ಈ ಸಂಬಂಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆ- 2003ಕ್ಕೆ ತಿದ್ದುಪಡಿ ನೀಡುವ ಭರವಸೆ ನೀಡಲಾಗಿತ್ತು. ಇದರ ಜತೆಗೆ ಕೃಷಿ ವಿಮೆ ಮತ್ತು ರಾಷ್ಟ್ರೀಯ ಭೂ ಬಳಕೆ ನೀತಿ ಜಾರಿಗೆ ತರುವ ಆಶ್ವಾಸನೆಯನ್ನೂ ಬಿಜೆಪಿ ನೀಡಿತ್ತು.

ಎಪಿಎಂಸಿ ಕಾಯ್ದೆಯ ಸುಧಾರಣೆ ಮತ್ತು ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚದ ಶೇಕಡ 50ರಷ್ಟು ಲಾಭವನ್ನು ರೈತರಿಗೆ ಒದಗಿಸುವ ಯೋಜನೆ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಕೃಷಿ ಸಚಿವಾಲಯವು ಕರಡು ಮಾದರಿ ಗುತ್ತಿಗೆ ಕೃಷಿ ಕಾಯ್ದೆ-2018ನ್ನು ಪ್ರಕಟಿಸಿದ್ದು, ಗುತ್ತಿಗೆ ಕೃಷಿಗೆ ಸಂಬಂಧಿಸಿದಂತೆ ನಿಯಂತ್ರಣ ಮತ್ತು ನೀತಿ ಚೌಕಟ್ಟು ಇದಾಗಿದೆ. ಆದರೆ ಈ ಕಾಯ್ದೆಯನ್ನು ಇನ್ನಷ್ಟೇ ತಿದ್ದುಪಡಿ ಮಾಡಬೇಕಿದೆ. ದೇಶದ ಹಲವು ಭಾಗಗಳಲ್ಲಿ ರೈತರು ಹತಾಶರಾಗಿದ್ದಾರೆ. ರೈತರ ಆತ್ಮಹತ್ಯೆಗಳು ಇಂದಿಗೂ ನಡೆಯುತ್ತಿವೆ. 2014ರ ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಬಹುತೇಕ ವಿಧಾನಸಭಾ ಚುನಾವಣೆಗಳನ್ನು ಗೆದ್ದರೂ, ಇಲ್ಲಿ ರೈತರ ಸಮಸ್ಯೆಗಳ ವಿಷಯ ಪ್ರಬಲವಾಗಿ ಪ್ರತಿಪಾದನೆಯಾಗಿದೆ.

ಬಿಜೆಪಿ ಆಶ್ವಾಸನೆ ನೀಡಿದ ಮಟ್ಟಕ್ಕೆ ದೇಶದಲ್ಲಿ ಕೃಷಿ ಕ್ಷೇತ್ರ ಬೆಳೆದಿಲ್ಲ. ರೈತರ ಸಾಲ ಮತ್ತು ಕೃಷಿ ವಿಮೆ ಸೌಲಭ್ಯ ಸಾಕಷ್ಟು ಇಲ್ಲದಿರುವುದು ಕಳವಳಕಾರಿ ಅಂಶವಾಗಿದೆ. ಬಿಜೆಪಿ ಅಗ್ರಿ ರೈಲ್ ಜಾಲ ಯೋಜನೆಯ ಭರವಸೆ ನೀಡಿದ್ದರೂ, ಈ ನಿಟ್ಟಿನಲ್ಲಿ ಯಾವ ಪ್ರಗತಿಯೂ ಆಗಿಲ್ಲ.

8. ಲೋಕಪಾಲ

ಲೋಕಪಾಲ ಮಸೂದೆಯನ್ನು ಆಂಗೀಕರಿಸಿ ನಾಲ್ಕು ವರ್ಷ ಕಳೆದರೂ, ಮೋದಿ ಸರ್ಕಾರ ಲೋಕಪಾಲರನ್ನು ನೇಮಕ ಮಾಡಿಲ್ಲ. ಈ ವಿಷಯವನ್ನು ಮೂಲೆಗುಂಪು ಮಾಡಿದಂತಿದೆ.

9. ಆಡಳಿತಾತ್ಮಕ ಸುಧಾರಣೆ

ಆಡಳಿತದ ಬಗ್ಗೆ ಚರ್ಚಿಸುವ ವೇಳೆ ಬಿಜೆಪಿ ಆಡಳಿತ ನೀಡಿದ್ದ ಪ್ರಮುಖ ಆಶ್ವಾಸನೆಯೆಂದರೆ, ಜನಕೇಂದ್ರಿತ, ನೀತಿಗಳಿಗೆ ಅನುಗುಣವಾಗಿ ಚಾಲನೆಯಾಗುವ, ಕಾಲಮಿತಿಯ ವಿತರಣೆ ಹಾಗೂ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ.  ಆದರೆ ಮೋದಿ ಸರ್ಕಾರದ ಸಚಿವ ಸಂಪುಟವೇ ಬಿಜೆಪಿಯ ಈ ಘೋಷವಾಕ್ಯವನ್ನು ಅಣಕಿಸುವಂತಿದೆ. ಪ್ರಧಾನಿ ಹೊರತುಪಡಿಸಿ ಮೋದಿ ಸಂಪುಟದಲ್ಲಿ 73 ಮಂದಿ ಸಚಿವರಿದ್ದಾರೆ. ಸಂವಿಧಾನ (91ನೇ ತಿದ್ದುಪಡಿ) ಕಾಯ್ದೆ- 2004ರ ಅನ್ವಯ ಲೋಕಸಭೆಯ ಸದಸ್ಯಬಲವಾದ 543ರ ಶೇಕಡ 15ಕ್ಕಿಂತ ಹೆಚ್ಚಿನ ಸದಸ್ಯರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವಂತಿಲ್ಲ. ಮೋದಿ ಸಂಪುಟದಲ್ಲಿ ಖಾಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಂಟು ಮಾತ್ರ.

2016ರ ಜುಲೈ 5ರಂದು ಮೋದಿ ಎರಡನೇ ಬಾರಿಗೆ ಸಂಪುಟ ಪುನರ್ರಚಿಸಿದ ಬಳಿಕ, ಮೋದಿ ಸಂಪುಟದ ಗಾತ್ರ 78ಕ್ಕೆ ಹಿಗ್ಗಿತ್ತು. ಕೊನೆಯ ಪುನರ್ರಚನೆ ಬಳಿಕ ಈ ಸಂಖ್ಯೆ ಮನಮೋಹನ್ ಸಿಂಗ್ ಸರ್ಕಾರದಲ್ಲಿದ್ದ ಸಚಿವರ ಸಂಖ್ಯೆಯಷ್ಟೇ ಆಗಿದೆ.

10. ಭಾವನಾತ್ಮಕ ವಿಚಾರಗಳು

ಬಿಜೆಪಿ ಸರಕಾರವು ತಮಗೆ ಸಂಬಂಧಿಸಿದ ಭರವಸೆಗಳನ್ನು ಈಡೇರಿಸಿಲ್ಲ ಎನ್ನುವ ಮಾತುಗಳು ಆರೆಸ್ಸೆಸ್ ವಲಯದಿಂದ ಕೇಳಿಬರುತ್ತಿದೆ ಎನ್ನಲಾಗಿದೆ. ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದಾಗಿ ಪ್ರಣಾಳಿಕೆ ಆಶ್ವಾಸನೆ ನೀಡಿತ್ತು. ಆದರೆ ಅದರ ಅನುಷ್ಠಾನದ ನಿಟ್ಟಿನಲ್ಲೂ ಯಾವ ಕೆಲಸವೂ ಆಗಿಲ್ಲ. ಇವುಗಳ ಬರಿಯ ಚುನಾವಣಾ ಜುಮ್ಲಾ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುವ ಸಂಬಂಧ ಸಂವಿಧಾನದ ಚೌಕಟ್ಟಿನಲ್ಲಿ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಲಾಗುವುದು ಎಂದೂ ಪ್ರಣಾಳಿಕೆ ಆಶ್ವಾಸನೆ ನೀಡಿತ್ತು. ಆದರೆ ಈ ವಿಚಾರ ಸುಪ್ರೀಂಕೋರ್ಟ್ ವ್ಯಾಪ್ತಿಯಲ್ಲೇ ಉಳಿದುಕೊಂಡಿದೆ.

ಗಡಿ ಪ್ರದೇಶಗಳಿಗೆ ಹೆಚ್ಚಿನ ಗಮನ ನೀಡುವ ಬಗ್ಗೆ ಚರ್ಚಿಸಿದ ಬಿಜೆಪಿ ಪ್ರಣಾಳಿಕೆ, ಜಮ್ಮು ಕಾಶ್ಮೀರದ ಕಾಶ್ಮೀರಿ ಪಂಡಿತರನ್ನು ಮರಳಿ ಮನೆಗೆ ಕರೆತರುವ ಭರವಸೆ ನೀಡಿತ್ತು. ಜತೆಗೆ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವುದಾಗಿ ಆಶ್ವಾಸನೆ ನೀಡಿತ್ತು. ಆದರೆ ಪಿಡಿಪಿ ಜತೆ ಮೈತ್ರಿ ಮಾಡಿಕೊಂಡು ಬಿಜೆಪಿಯೇ ಅಧಿಕಾರ ಸೂತ್ರ ಹಿಡಿದ ಹೊರತಾಗಿಯೂ 370ನೇ ವಿಧಿಯ ರದ್ದತಿ ಸಾಧ್ಯವಾಗಿಲ್ಲ.

Similar News