ರಮಝಾನ್ ಉಪವಾಸ ಮುರಿದು ಸೈನಿಕನ ಮಗುವಿನ ಪ್ರಾಣ ಉಳಿಸಿದ ಯುವಕ

Update: 2018-05-28 10:50 GMT
ಚಿತ್ರ ಕೃಪೆ: ANI

ದರ್ಭಾಂಗ, ಮೇ 28: ಎರಡು ದಿನಗಳ ಹಸುಗೂಸಿನ ಪ್ರಾಣ ಉಳಿಸುವ ಸಲುವಾಗಿ ಮುಸ್ಲಿಮ್ ಯುವಕನೋರ್ವ ರಮಝಾನ್ ಉಪವಾಸ ಮುರಿದಿರುವ ಬಗ್ಗೆ ವರದಿಯಾಗಿದೆ.

ಸಶಸ್ತ್ರ ಸೀಮಾ ದಳದ ಸೈನಿಕ ರಮೇಶ್ ಕುಮಾರ್ ಸಿಂಗ್ ಅವರ ಪತ್ನಿ ಬಿಹಾರದ ದರ್ಭಾಂಗದ ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ಶುಕ್ರವಾರ ಮಗುವಿಗೆ ಜನ್ಮ ನೀಡಿದ್ದರು. ಆದರೆ ದಿನದಿಂದ ದಿನಕ್ಕೆ ಮಗುವಿನ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಮಗುವನ್ನು ಪರೀಕ್ಷಿಸಿದ್ದ ವೈದ್ಯರು ಒ ನೆಗೆಟಿವ್ ಗುಂಪಿನ ರಕ್ತದ ಅವಶ್ಯಕತೆ ಇದೆ ಎಂದಿದ್ದರು.

ಎಲ್ಲರನ್ನೂ ಸಂಪರ್ಕಿಸಿಯೂ ರಕ್ತದಾನಿಗಳು ಲಭಿಸದೆ ಇದ್ದ ಕಾರಣ ರಮೇಶ್ ಕುಮಾರ್ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಒ ನೆಗೆಟಿವ್ ಗುಂಪಿನ ರಕ್ತದಾನಿಗಳು ಮಗುವಿನ ಪ್ರಾಣ ಉಳಿಸಲು ಮುಂದೆ ಬರಬೇಕು ಎಂದವರು ಮನವಿ ಮಾಡಿದ್ದರು. ಈ ಫೇಸ್ ಬುಕ್ ಪೋಸ್ಟ್ ನೋಡಿದ ದರ್ಭಾಂಗ ನಿವಾಸಿ ಮುಹಮ್ಮದ್ ಅಶ್ಫಾಕ್ ಕೂಡಲೇ ಮಗುವಿನ ಕುಟುಂಬಸ್ಥರನ್ನು ಸಂಪರ್ಕಿಸಿದರು. ಮಗುವಿಗಾಗಿ ನಾನು ರಕ್ತ ನೀಡಬಲ್ಲೆ ಎಂದವರು ಭರವಸೆ ನೀಡಿದರು.

“ಪ್ರಾಣವೊಂದನ್ನು ಉಳಿಸುವುದು ಅತಿ ಅಗತ್ಯವಾಗಿ ನನಗೆ ತೋಚಿತು. ಇಷ್ಟೇ ಅಲ್ಲದೆ ಸೈನಿಕನ ಮಗು ಎಂದು ತಿಳಿದ ಬಳಿಕ ನಾನು ರಕ್ತದಾನ ಮಾಡುವಂತೆ ಮತ್ತಷ್ಟು ಪ್ರೇರೇಪಿಸಿತು” ಎಂದು ಅಶ್ಫಾಕ್ ಹೇಳುತ್ತಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮಗುವಿನ ಅಜ್ಜ-ಅಜ್ಜಿ, “ರಕ್ತದಾನ ಮಾಡಲು ಅಶ್ಫಾಕ್ ಹಿಂದೆ ಮುಂದೆ ನೋಡಲಿಲ್ಲ. ನಮ್ಮ ಮೊಮ್ಮಗಳನ್ನು ಕಾಪಾಡಿದ್ದಕ್ಕಾಗಿ ಅಭಾರಿಯಾಗಿದ್ದೇವೆ” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News