ನಿಮಗೆ ಪದೇ ಪದೇ ಹಸಿವಾಗುತ್ತದೆಯೇ...? ಅದಕ್ಕೆ ಕಾರಣಗಳಿಲ್ಲಿವೆ

Update: 2018-05-29 12:24 GMT

ಹಸಿವು ಶರೀರದ ಕಾರ್ಯ ನಿರ್ವಹಣೆಗೆ ಆಹಾರದ ಅಗತ್ಯವನ್ನು ಸೂಚಿಸುವ ನೈಸರ್ಗಿಕ ಸಂಕೇತವಾಗಿದೆ. ಹಸಿವು ಎಲ್ಲರಲ್ಲಿಯೂ ಒಂದೇ ರೀತಿಯಲ್ಲಿರುವುದಿಲ್ಲ. ಕೆಲವರು ಬಹು ಹೊತ್ತಿನವರೆಗೂ ಆಹಾರವಿಲ್ಲದೆ ಕಳೆಯಬಲ್ಲರು,ಇನ್ನು ಕೆಲವರಿಗೆ ಪದೇ ಪದೇ ಹಸಿವೆಯಾಗುತ್ತಲೇ ಇರುತ್ತದೆ. ಹೀಗೆ ಪದೇ ಪದೇ ಹಸಿವೆಯಾಗುವುದಕ್ಕೆ ನಿರ್ಜಲೀಕರಣ,ಪ್ರೋಟಿನ್,ನಾರು ಅಥವಾ ಕೊಬ್ಬಿನ ಕೊರತೆ,ಕಡಿಮೆ ನಿದ್ರೆ ಇತ್ಯಾದಿಗಳು ಕಾರಣವಾಗುತ್ತವೆ.

►ಪ್ರೋಟಿನ್ ಕೊರತೆ

ಪ್ರೋಟಿನ್ ನಮ್ಮ ಶರೀರಕ್ಕೆ ಅಗತ್ಯ ಪೋಷಕಾಂಶಗಳಲ್ಲೊಂದಾಗಿದೆ. ಅದು ಹಸಿವನ್ನು ತಗ್ಗಿಸುವ ಗುಣವನ್ನು ಹೊಂದಿದ್ದು,ತನ್ಮೂಲಕ ನಾವು ಕೆಲವೇ ಕ್ಯಾಲರಿಗಳನ್ನು ಸೇವಿಸುವಂತೆ ಮಾಡುತ್ತದೆ. ಅದು ಹೊಟ್ಟೆ ತುಂಬಿದ ಅನುಭವವನ್ನುಂಟು ಮಾಡುವ ಹಾರ್ಮೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಹಸಿವನ್ನು ಪ್ರಚೋದಿಸುವ ಹಾರ್ಮೋನ್‌ಗಳ ಉತ್ಪಾದನೆಯನ್ನು ತಗ್ಗಿಸುತ್ತದೆ. ಪ್ರೋಟಿನ್‌ಗೆ ಹಸಿವಿನ ಹಾರ್ಮೋನ್‌ಗಳನ್ನು ನಿಯಂತ್ರಿಸುವ ಶಕ್ತಿಯಿರುವುದರಿಂದ ಅದರ ಕೊರತೆಯು ಪದೇ ಪದೇ ಹಸಿವಿಗೆ ಕಾರಣವಾಗಬಹುದು.

►ಕಡಿಮೆ ನಿದ್ರೆ

ಇಂದಿನ ಪುರಸೊತ್ತಿಲ್ಲದ ಜೀವನಶೈಲಿಯಿಂದಾಗಿ ಹೆಚ್ಚಿನವರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಕೆಲಸವನ್ನು ಮುಗಿಸಲು ರಾತ್ರಿ ಬಹು ಹೊತ್ತಿನವರೆಗೆ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ಗಳ ಮುಂದೆ ಕುಳಿತುಕೊಂಡಿರುತ್ತಾರೆ,ಮೊಬೈಲ್‌ನಲ್ಲಿ ಮುಳುಗಿರುತ್ತಾರೆ ಇಲ್ಲವೇ ಟಿವಿ ವೀಕ್ಷಣೆಯಲ್ಲಿ ತಲ್ಲೀನರಾಗಿರುತ್ತಾರೆ. ಆದರೆ ನಮ್ಮ ಶರೀರವು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಕಷ್ಟು ನಿದ್ರೆಯ ಅಗತ್ಯವಿದೆ. ನಿದ್ರೆಯು ಹಸಿವನ್ನು ಪ್ರಚೋದಿಸುವ ್ರೆಲಿನ್ ಹಾರ್ಮೋನ್‌ನ್ನು ನಿಯಂತ್ರಿಸುತ್ತದೆ. ನಿದ್ರೆಯ ಕೊರತೆಯುಂಟಾದಾಗ ಈ ಹಾರ್ಮೋನ್ ಮಟ್ಟವು ತಗ್ಗುತ್ತದೆ ಮತ್ತು ಪದೇ ಪದೇ ಹಸಿವನ್ನುಂಟು ಮಾಡುತ್ತದೆ.

►ಸಂಸ್ಕರಿತ ಕಾರ್ಬೊಹೈಡ್ರೇಟ್‌ಗಳ ಅತಿಯಾದ ಸೇವನೆ

ಪ್ರೋಟಿನ್,ವಿಟಾಮಿನ್ ಸಿ ಇತ್ಯಾದಿಗಳಂತೆ ಕಾರ್ಬೊಹೈಡ್ರೇಟ್‌ಗಳೂ ನಮ್ಮ ಶರೀರಕ್ಕೆ ಅಗತ್ಯವಾಗಿವೆ. ಆದರೆ ವಿಟಾಮಿನ್‌ಗಳು,ನಾರು ಮತ್ತು ಖನಿಜಾಂಶಗಳನ್ನು ಕಳೆದುಕೊಂಡಿರುವ ಸಂಸ್ಕರಿತ ಕಾರ್ಬೊಹೈಡ್ರೇಟ್‌ಗಳು ನಮ್ಮ ಹಸಿವನ್ನು ಹೆಚ್ಚಿಸಬಲ್ಲವು. ಬಿಳಿಯ ಹಿಟ್ಟು,ಪಾಸ್ತಾ,ಬ್ರೆಡ್,ಕ್ಯಾಂಡಿ,ಸಂಸ್ಕರಿತ ಸಕ್ಕರೆ,ಸೋಡಾದಂತಹ ಸಂಸ್ಕರಿತ ಕಾರ್ಬೊಹೈಡ್ರೇಟ್‌ಗಳು ಹೆಚ್ಚಿನ ಹಸಿವನ್ನುಂಟು ಮಾಡುತ್ತವೆ. ಇವು ನಾರಿನಿಂದ ಮುಕ್ತವಾಗಿರುವುದರಿಂದ ನಮ್ಮ ಶರೀರವು ಇವುಗಳನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳುವುದು ಇದಕ್ಕೆ ಕಾರಣವಾಗಿದೆ. ಇಂತಹ ಆಹಾರಗಳು ಹೊಟ್ಟೆ ತುಂಬಿದ ಅನುಭವವನ್ನು ನೀಡುವುದಿಲ್ಲ.

►ಕೊಬ್ಬಿನ ಕೊರತೆ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಶರೀರವನ್ನು ಬೊಜ್ಜುರಹಿತವಾಗಿ ಕಾಯ್ದುಕೊಳ್ಳಲು ಕೊಬ್ಬಿನಿಂದ ಮುಕ್ತವಾದ ಆಹಾರಗಳನ್ನು ಸೇವಿಸುತ್ತಿದ್ದಾರೆ. ಆದರೆ ನಮ್ಮ ಹೊಟ್ಟೆಯನ್ನು ತಣಿಸಲು ಕೊಬ್ಬು ಸಹ ಅಗತ್ಯವಾಗಿದೆ. ಅಲ್ಲದೆ ಅದು ಹೊಟ್ಟೆ ತುಂಬಿದ ಅನುಭವವನ್ನು ನೀಡುವ ವಿವಿಧ ಹಾರ್ಮೋನ್‌ಗಳ ಉತ್ಪಾದನೆಗೂ ನೆರವಾಗುತ್ತದೆ. ಆದ್ದರಿಂದ ಕೊಬ್ಬಿನ ಕೊರತೆಯೂ ಆಗಾಗ್ಗೆ ಹಸಿವನ್ನುಂಟು ಮಾಡುತ್ತದೆ.

►ನಿರ್ಜಲೀಕರಣ

ನಮ್ಮ ಶರೀರದ ಮೂರನೇ ಎರಡು ಭಾಗವು ನೀರನ್ನು ಹೊಂದಿದೆ. ಶರೀರವು ಸರಿಯಾಗಿ ಕಾರ್ಯ ನಿರ್ವಹಿಸಲು ನೀರು ಮುಖ್ಯವಾಗಿದೆ. ಪ್ರತಿದಿನ ಸಾಕಷ್ಟು ನೀರನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಡಿಮೆಯಾಗುವ ಜೊತೆಗೆ ಅದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನೂ ಆರೋಗ್ಯಯುತವಾಗಿರಿಸುತ್ತದೆ. ಅದು ಹೊಟ್ಟೆಯನ್ನು ತಣಿಸುವ ಜೊತೆಗೆ ಹೆಚ್ಚಿನ ಹಸಿವನ್ನುಂಟು ಮಾಡುವುದಿಲ್ಲ.

►ನಾರಿನ ಕೊರತೆ

ಪದೇ ಪದೇ ಹಸಿವಾಗಲು ನಾವು ಸೇವಿಸುವ ಆಹಾರದಲ್ಲಿ ನಾರಿನ ಕೊರತೆಯೂ ಒಂದು ಕಾರಣವಾಗಿದೆ. ಅಧಿಕ ನಾರಿನಂಶವನ್ನು ಹೊಂದಿರುವ ಆಹಾರಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವುದರಿಂದ ಹಸಿವನ್ನು ನಿಯಂತ್ರಿಸುವಲ್ಲಿ ನೆರವಾಗುತ್ತವೆ. ನಾರು ಹಸಿವನ್ನು ತಗ್ಗಿಸುವ ಹಾರ್ಮೋನ್‌ಗಳ ಬಿಡುಗಡೆಗೆ ನೆರವಾಗುವ ಜೊತೆಗೆ ಹೊಟ್ಟೆಯನ್ನು ತಣಿಸುವ ಫ್ಯಾಟಿ ಆ್ಯಸಿಡ್‌ಗಳ ಉತ್ಪಾದನೆಯನ್ನೂ ಹೆಚ್ಚಿಸುತ್ತದೆ.

►ಅನ್ಯಮನಸ್ಕತೆ

ಇಂದಿನ ಗಡಿಬಿಡಿಯಿಂದ ಕೂಡಿದ ಜಗತ್ತಿನಲ್ಲಿ ಹೆಚ್ಚಿನವರು ಒಂದಲ್ಲ ಒಂದು ಕೆಲಸದಲ್ಲಿ ವ್ಯಸ್ತರಾಗಿರುವುದರಿಂದ ಊಟಕ್ಕೆ ಸರಿಯಾದ ಗಮನವನ್ನು ನೀಡಲೂ ಸಾಧ್ಯವಾಗುವುದಿಲ್ಲ. ಊಟದ ಹೊತ್ತಿನಲ್ಲಿ ಕಂಪ್ಯೂಟರ್,ಲ್ಯಾಪ್‌ಟಾಪ್ ಅಥವಾ ಮೊಬೈಲ್,ಟಿವಿ ವೀಕ್ಷಣೆಯಂತಹ ಅನ್ಯಮನಸ್ಕತೆಯು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಇದರಿಂದಾಗಿ ಹೆಚ್ಚಿನ ಕ್ಯಾಲರಿಗಳು ನಮ್ಮ ಶರೀರವನ್ನು ಸೇರುವ ಸಾಧ್ಯತೆಗಳು ಹೆಚ್ಚು. ನೀವು ಎಷ್ಟು ಆಹಾರವನ್ನು ಸೇವಿಸಿದ್ದೀರಿ ಎನ್ನುವುದು ನಿಮಗೇ ಗೊತ್ತಾಗುವುದಿಲ್ಲ ಮತ್ತು ಶರೀರವು ಹೊಟ್ಟೆ ತುಂಬಿದ ಅನುಭವವನ್ನು ಗ್ರಹಿಸಲು ವಿಫಲಗೊಳ್ಳುತ್ತದೆ ಹಾಗೂ ಪದೇ ಪದೇ ಹಸಿವಿನ ಸೂಚನೆಯನ್ನು ನೀಡುತ್ತಿರುತ್ತದೆ.

►ವ್ಯಾಯಾಮ

ನೀವು ನಿಯಮಿತವಾಗಿ ವ್ಯಾಯಾಮವನ್ನು ಮಾಡುತ್ತಿದ್ದರೆ ಅದು ಪದೇ ಪದೇ ಹಸಿವಿಗೆ ಕಾರಣವಾಗಬಲ್ಲದು. ನಿಮ್ಮ ಶರೀರವು ಕೊಬ್ಬನ್ನು ದಹಿಸುವ ಕಾರ್ಯದಲ್ಲಿ ತೊಡಗಿಕೊಂಡಾಗ ಅದು ಸಾಕಷ್ಟು ಪ್ರಮಾಣದಲ್ಲಿ ಕೊಬ್ಬನ್ನು ಕಳೆದುಕೊಳ್ಳುತ್ತದೆ. ಇದರಿಂದ ಚಯಾಪಚಯ ಪ್ರಕ್ರಿಯೆಯ ವೇಗವು ಹೆಚ್ಚುತ್ತದೆ ಮತ್ತು ಹಸಿವನ್ನು ತೀವ್ರಗೊಳಿಸುತ್ತದೆ. ಕೆಲವರಿಗೆ ಆಗಾಗ್ಗೆ ಹಸಿವೆಯಾಗುತ್ತಲೇ ಇರುತ್ತದೆ.

►ಮದ್ಯಪಾನ

ಅತಿಯಾದ ಮದ್ಯಪಾನ ಆರೋಗ್ಯವನ್ನು ಕೆಡಿಸುತ್ತದೆ. ಹೀಗಿದ್ದರೂ ಹೆಚ್ಚಿನವರು ಅದಕ್ಕೆ ಅಂಟಿಕೊಂಡಿರುತ್ತಾರೆ. ಅತಿಯಾದ ಮದ್ಯಪಾನವು ಮೆದುಳಿನ ಕಾರ್ಯವನ್ನು ಕುಂಠಿತಗೊಳಿಸುತ್ತದೆ ಮತ್ತು ಪದೇ ಪದೇ ಹಸಿವೆಯನ್ನು ಅನುಭವಿಸುವಂತೆ ಮಾಡುತ್ತದೆ. ಅದು ಹಸಿವನ್ನು ಪ್ರಚೋದಿಸುವ ಗುಣವನ್ನು ಹೊಂದಿದೆ ಮತ್ತು ಹೊಟ್ಟೆ ತುಂಬಿದ ಅನುಭವವನ್ನು ನೀಡುವ ಹಾರ್ಮೋನ್‌ಗಳ ಉತ್ಪಾದನೆಯನ್ನು ತಗ್ಗಿಸುತ್ತದೆ.

►ಪಾನೀಯಗಳು

ಬೆಸಿಗೆಯ ದಿನಗಳಲ್ಲಿ ಧಗೆಯಿಂದ ಪಾರಾಗಲು ತಂಪು ಪಾನೀಯಗಳು ಮತ್ತು ಹಣ್ಣಿನ ರಸಗಳ ಸೇವನೆಯು ಹೆಚ್ಚಾಗಿರುತ್ತದೆ. ಆದರೆ ಇಂತಹ ಪಾನೀಯಗಳ ಸೇವನೆಯ ಬಳಿಕ ಹಸಿವಿನ ಅನುಭವವಾಗುತ್ತದೆ. ದ್ರವ ಆಹಾರಗಳು ಘನ ಆಹಾರಗಳಿಗಿಂತ ಬೇಗ ಜೀರ್ಣವಾಗುವುದು ಇದಕ್ಕೆ ಕಾರಣ. ಹೀಗಾಗಿ ಇಂತಹ ಪಾನೀಯಗಳ ಅತಿಯಾದ ಸೇವನೆ ಪದೇ ಪದೇ ಹಸಿವನ್ನುಂಟು ಮಾಡುತ್ತದೆ.

►ಒತ್ತಡ

ಮಾನಸಿಕ ಒತ್ತಡವು ದೈಹಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವ ಜೊತೆಗೆ ಆಹಾರ ಸೇವನೆಯ ತುಡಿತವನ್ನುಂಟು ಮಾಡುವ ಕಾರ್ಟೊಸಿಲ್ ಹಾರ್ಮೋನ್‌ನ ಹೆಚ್ಚಿನ ಸ್ರವಿಸುವಿಕೆಯನ್ನೂ ಉತ್ತೇಜಿಸುತ್ತದೆ. ಹೀಗಾಗಿ ನಿರಂತರ ಹಸಿವನ್ನು ನಿಯಂತ್ರಿಸಲು ಬಯಸುತ್ತೀರಾದರೆ ನೀವು ಮನಸ್ಸಿನ ಒತ್ತಡವನ್ನು ಕಳೆದುಕೊಳ್ಳುವುದು ಅಗತ್ಯವಾಗುತ್ತದೆ.

►ಔಷಧಿಗಳ ಪ್ರತಿವರ್ತನೆ

ನಿಮಗೆ ಪದೇ ಪದೇ ಹಸಿವೆಯಾಗುತ್ತಿದ್ದರೆ ನೀವು ಸೇವಿಸುತ್ತಿರುವ ಔಷಧಿಗಳು ಅದಕ್ಕೆ ಕಾರಣವಾಗಿರಬಹುದು. ಕೆಲವು ಔಷಧಿಗಳು ಅಡ್ಡಪರಿಣಾಮವಾಗಿ ಹಸಿವನ್ನು ಹೆಚ್ಚಿಸುತ್ತವೆ.

ಅವಸರದಿಂದ ಊಟ ಮಾಡುವುದು,ಅನಾರೋಗ್ಯ ಇವೂ ಪದೇ ಪದೇ ಹಸಿವೆಯುಂಟಾಗಲು ಕಾರಣಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News