×
Ad

ಮೇ 30ರಿಂದ ಬ್ಯಾಂಕ್ ನೌಕರರ ಮುಷ್ಕರ

Update: 2018-05-29 18:43 IST

ಬೆಂಗಳೂರು, ಮೇ 29: ವೇತನ ಪರಿಷ್ಕರಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಮೇ 30-31 ರಂದು ದೇಶದಾದ್ಯಂತ ಬ್ಯಾಂಕ್ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದು, ಹಣಕಾಸು ವಹಿವಾಟಿನಲ್ಲಿ ವ್ಯತ್ಯಯವಾಗಲಿದೆ.

ಕಳೆದ ಮೂರು ವರ್ಷಗಳಿಂದ ಕೇಂದ್ರ ಸರಕಾರದ ಯೋಜನೆಗಳಾದ ಜನ್‌ಧನ್, ಅಟಲ್ ಪಿಂಚಣಿ ಯೋಜನೆ, ಮುದ್ರ ಹಾಗೂ ನೋಟು ಅಮಾನ್ಯೀಕರಣ ಸೇರಿದಂತೆ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ಸಲುವಾಗಿ ಗರಿಷ್ಠ ಪ್ರಮಾಣದಲ್ಲಿ ಕೆಲಸ ನಿರ್ವಹಿಸಿದ್ದೇವೆ. ಆದರೆ, ಸರಕಾರ ಬ್ಯಾಂಕ್ ನೌಕರರ ವೇತನವನ್ನು ಹೆಚ್ಚಳ ಮಾಡಿಲ್ಲ. ಅಲ್ಲದೆ, ಶೇ.2 ರಷ್ಟು ಮಾತ್ರ ಹೆಚ್ಚಳ ಮಾಡುತ್ತೇವೆ ಎಂದು ಭಾರತೀಯ ಬ್ಯಾಂಕುಗಳ ಸಂಸ್ಥೆ ಹೇಳಿದೆ. ಇದನ್ನು ಖಂಡಿಸಿ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಭಾರತೀಯ ಬ್ಯಾಂಕುಗಳ ಸಂಸ್ಥೆ ಕಳೆದ ನ.1, 2012 ರಿಂದ ಅ.31, 2017 ರವರೆಗೂ ಶೇ.15 ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಆದರೂ, ಇಂದಿನ ಬೆಲೆ ಹೆಚ್ಚಳದಲ್ಲಿ ಇಷ್ಟು ಪ್ರಮಾಣದ ಹೆಚ್ಚಳ ಸರಿದೂಗುವುದಿಲ್ಲ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದು, ಮಷ್ಕರಕ್ಕೆ ಮುಂದಾಗಿದ್ದಾರೆ.

ವೇತನ ಪರಿಷ್ಕರಣೆ ಸಂಬಂಧ ಯುಎಫ್‌ಬಿಯು ಜೊತೆಗೆ 2017 ರ ಮೇ ತಿಂಗಳಿನಿಂದ ಹಲವು ಬಾರಿ ದ್ವಿಪಕ್ಷೀಯ ಮಾತುಕತೆ ಮಾಡಲಾಗಿದೆ. ಆದರೆ, ವೇತನ ಪರಿಷ್ಕರಣೆ ಸಂಬಂಧ ಆರೋಗ್ಯಕರವಾದ ಪ್ರಸ್ತಾವನೆಯನ್ನು ಭಾರತೀಯ ಬ್ಯಾಂಕುಗಳ ಸಂಸ್ಥೆ ಮಾಡಿಲ್ಲ ಎಂದು ಅಸಮಾಧಾನಗೊಂಡಿರುವ ನೌಕರರು ಅನಿವಾರ್ಯವಾಗಿ ಮುಷ್ಕರ ನಡೆಸಲು ಮುಂದಾಗಿದ್ದಾರೆ.

ಇಂದು ಮತ್ತು ನಾಳೆ ಬ್ಯಾಂಕ್ ನೌಕರರು ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ವ್ಯವಹಾರ ಸ್ಥಗಿತಗೊಳ್ಳಲಿದೆ. ಇದರಿಂದಾಗಿ, ತಿಂಗಳ ಕೊನೆಯಾಗಿರುವುದರಿಂದ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ವೇತನ ಸಿಗುವುದು ಕಷ್ಟಕರವಾಗಲಿದ್ದು, ಮಧ್ಯಮ ವರ್ಗದವರಿಗೆ ತೀವ್ರ ತೊಂದರೆಯಾಗಲಿದೆ. ಹಾಗೂ ಮುಷ್ಕರದ ಹಿನ್ನೆಲೆಯಲ್ಲಿ ಎಟಿಎಂಗಳಲ್ಲಿ ಭಾರಿ ಪ್ರಮಾಣದ ಹಣದ ಕೊರತೆ ಎದುರಾಗಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News