ಸಾಲು ಮರದ ತಿಮ್ಮಕ್ಕ ಬಗ್ಗೆ ವದಂತಿ: ಕ್ಯಾಬ್ ಚಾಲಕನ ಬಂಧನ
ಬೆಂಗಳೂರು, ಮೇ 29: ಸಾಲು ಮರದ ತಿಮ್ಮಕ್ಕ ಸಾವನ್ನಪ್ಪಿದ್ದಾರೆಂದು ಸುಳ್ಳು ವದಂತಿ ಹಬ್ಬಿಸಿದ ಆರೋಪ ಪ್ರಕರಣ ಸಂಬಂಧ ಕಾರು ಚಾಲಕನೊಬ್ಬನನ್ನು ಸಿಸಿಬಿ ವಿಭಾಗದ ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಸಾಲಿಗ್ರಾಮ ಹೋಬಳಿಯ ಹರದನಹಳ್ಳಿ ಗ್ರಾಮದ ಪ್ರದೀಪ್(26) ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನ ಬ್ಯಾಡರಹಳ್ಳಿಯ ಬಾಲಾಜಿ ಲೇಔಟ್ ನಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
‘ಮನಸ್ಸುಗಳ ಮಾತು ಮಧುರ’ ಹೆಸರಿನ ಫೇಸ್‌ಬುಕ್ ಗುಂಪಿನಲ್ಲಿ ಡಾ.ಸಾಲುಮರದ ತಿಮ್ಮಕ್ಕ ಬಗ್ಗೆ ಸುಳ್ಳು ವದಂತಿ ನೋಡಿದ ಆರೋಪಿ ಪ್ರದೀಪ್, ತನ್ನ ಫೇಸ್‌ಬುಕ್ ಖಾತೆಯಿಂದ ಸ್ನೇಹಲೋಕ ಹೆಸರಿನ ಗುಂಪಿಗೆ ಹಾಕಿದ್ದಾನೆ. ಅಲ್ಲದೆ, ಆರೋಪಿ ‘ಮನಸ್ಸುಗಳ ಮಾತು ಮಧುರ’ ಗುಂಪಿನಲ್ಲೂ ಸದಸ್ಯನಾಗಿದ್ದು, ಇತರೆ ಸದಸ್ಯರ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ತನಿಖೆ ಮುಂದುವರೆಸಲಾಗಿದೆ.
ಪ್ರಕರಣದ ಹಿನ್ನಲೆ: ಸಾಲು ಮರದ ತಿಮ್ಮಕ್ಕ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ವದಂತಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಬ್ಬಿಸುವವರ ವಿರುದ್ಧ ಮೇ 25 ರಂದು ಸಿಸಿಬಿ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.
ಸಾಲು ಮರದ ತಿಮ್ಮಕ್ಕ ಅವರ ಪುತ್ರ ಉಮೇಶ್ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿ, ಯಾವುದೇ ಆಧಾರವಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಎಂದು ವದಂತಿ ಹಬ್ಬಿಸಿರುವುದಲ್ಲದೆ, ಬೇರೆ ವೃದ್ಧೆಯ ಪೋಟೋ ಹಾಕಿ ವೈರಲ್ ಮಾಡಿರುವ ಬಗ್ಗೆ ಸೈಬರ್ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದರು.
ಎಚ್ಚರಿಕೆ ಇರಲಿ
‘ಸಾಮಾಜಿಕ ಜಾಲತಾಣ ಬಳಕೆದಾರರು ಯಾವುದೇ ವಿಚಾರಗಳ ಬಗ್ಗೆ ತಮ್ಮ ಖಾತೆಯಲ್ಲಿ ಪೋಸ್ಟ್, ಲೈಕ್, ಶೇರ್, ಟ್ಯಾಗ್ ಮಾಡುವ ಮುನ್ನ ಮಾಹಿತಿ ಸತ್ಯವೇ ಎಂದು ಪರಿಶೀಲಿಸಿ. ಒಂದು ವೇಳೆ ತಪ್ಪಿದ್ದಲ್ಲಿ, ಕಾನೂನು ಕ್ರಮ ಕೈಗೊಳ್ಳಲಾಗುವುದು’
-ಸೈಬರ್ ಕ್ರೈಂ ಪೊಲೀಸರು, ಬೆಂಗಳೂರು