ದಲಿತರ ಬಡಾವಣೆಗಳಿಗೆ ನೀರು ಪೂರೈಸಿ: ಖಾಲಿ ಕೊಡ ಪ್ರದರ್ಶಿಸಿ ಬೃಹತ್ ಪ್ರತಿಭಟನೆ

Update: 2018-05-29 15:30 GMT

ಬೆಂಗಳೂರು, ಮೇ 29: ಬಿಬಿಎಂಪಿ ವ್ಯಾಪ್ತಿಯ ಯಲಹಂಕ ವಲಯದಲ್ಲಿ ವಾಸಿಸುವ ದಲಿತ ಕುಟುಂಬಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಿಕೊಡುವಂತೆ ದಲಿತ ಸಂಘರ್ಷ ಸಮಿತಿ(ಸಮತಾವಾದ) ಒತ್ತಾಯಿಸಿದೆ.

ಮಂಗಳವಾರ ದಲಿತ ಸಂಘರ್ಷ ಸಮಿತಿ ಸಮತಾವಾದದ ಸದಸ್ಯರು ಯಲಹಂಕ ಉಪನಗರದ ಡೈರಿ ವತ್ತದಿಂದ ಯಲಹಂಕ ಉತ್ತರ ಭಾಗದ ನೀರು ಮತ್ತು ಒಳಚರಂಡಿ ಮಂಡಳಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಕಚೇರಿ ಮುಂಭಾಗದಲ್ಲಿ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಯಲಹಂಕ ವಲಯದ ಡಾ.ಬಿ.ಆರ್.ಅಂಬೇಡ್ಕರ್‌ನಗರ, ಕೊಂಡಪ್ಪಬಡಾವಣೆ, ಮಾರಮ್ಮ ಬಂಡೆ ಜಾಗ, ಕೋಗಿಲು ಬಡಾವಣೆ, ಅಂಬೇಡ್ಕರ್ ನಗರ, ಪಕೀರ್ ಲೇಔಟ್, ಜೈಭೀಮ್‌ನಗರ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ನಗರದಲ್ಲಿ ವಾಸಿಸುವ ದಲಿತ ಕುಟುಂಬಗಳಿಗೆ ಸಮರ್ಪಕವಾಗಿ ಕಾವೇರಿ ನೀರಿನ ವ್ಯವಸ್ಥೆಯನ್ನು ಮಾಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹೆಚ್.ಮಾರಪ್ಪ, ದಲಿತ ಬಡಾವಣೆಗಳಲ್ಲಿ ನಿವಾಸಿಗಳು ಪ್ರತಿನಿತ್ಯ ಕುಡಿಯುವ ನೀರಿಗಾಗಿ ಭವಣೆ ಪಡುತ್ತಿದ್ದಾರೆ. ಅಂಬೇಡ್ಕರ್ ನಗರದಲ್ಲಿ ಎರಡು ಕೊಳವೆಬಾವಿಗಳು ಕೆಟ್ಟಿವೆ. 250ಕುಟುಂಬಗಳಿದ್ದು ಏಳು ಎಂಟು ದಿನಕ್ಕೆ ಒಂದು ಸಲ ನೀರು ಬಿಡುತ್ತಿದ್ದಾರೆ ಎಂದು ಆರೋಪಿಸಿದರು.

ಕೆಲವೆಡೆ ಕೊಳವೆ ಬಾವಿಗಳು ಇದ್ದರೂ ಸರಿಯಾಗಿ ನೀರು ಪೂರೈಸುತ್ತಿಲ್ಲ. ಇನ್ನು ಕೆಲವೆಡೆ ನೀರಿನ ಪೈಪ್ ಲೈನ್ ಅಳವಡಿಸಿಲ್ಲ. ಕೆಲವೊಂದು ಪ್ರದೇಶಗಳಲ್ಲಿ ಬಿಂದಿಗೆ ನೀರಿಗೆ ಒಂದು ರೂ. ಕೊಟ್ಟು ನೀರು ಪಡೆಯಬೇಕಾಗಿದೆ. ಕೊಂಡಪ್ಪಬಡಾವಣೆಯಲ್ಲಿ ವಾಲ್‌ಮೆನ್ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ದಲಿತ ಕಾಲನಿಯಲ್ಲಿನ ಸಮಸ್ಯೆ ಕುರಿತು ದೂರು ನೀಡಿದ್ದರೂ ಸಹ ಸಮಸ್ಯೆ ಬಗೆಹರಿಸಲು ಮೇಲಾಧಿಕಾರಿಗಳು ಮುಂದಾಗಿಲ್ಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಉಪಪ್ರಧಾನ ಸಂಚಾಲಕರಾದ ಎಂ.ಮುನಿಬೈರಪ್ಪಡಿ.ಎಸ್.ಎಸ್ ಸಮತಾವಾದದ ಬೆಂಗಳೂರು ನಗರ ಜಿಲ್ಲಾ ಪ್ರಧಾನ ಸಂಚಾಲಕರಾದ ಆರ್. ವೆಂಕಟಾಚಲಪತಿ, ದಲಿತ ಮುಖಂಡರಾದ ಮುನಿ ಕೃಷ್ಣಪ್ಪ, ನಾಗಣ್ಣ, ಹೆಚ್.ಭೀಮರಾಜ್, ಮಾವಳ್ಳಿಪುರ ಕೆಂಪಣ್ಣ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.

ಅಂಬೇಡ್ಕರ್ ನಗರ, ಕೊಂಡಪ್ಪ ಬಡಾವಣೆಯಲ್ಲಿ ಸೇರಿದಂತೆ ದಲಿತ ಬಡಾವಣೆಗಳಿಗೆ ಮೂರು ತಿಂಗಳೊಳಗೆ ಕಾವೇರಿ ನೀರು ಪೂರೈಸಲಾಗುವುದು. ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಇರುವುದು ನಮ್ಮ ಗಮನಕ್ಕೆ ಬಂದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳುತ್ತೇವೆ.

-ಜಯಶಂಕರ್, ಕಾರ್ಯ ನಿರ್ವಹಣಾಧಿಕಾರಿ, ಬೆಂಗಳೂರು ನೀರು ಮತ್ತು ಒಳಚರಂಡಿ ಮಂಡಳಿ ಯಲಹಂಕ ಉತ್ತರ ವಿಭಾಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News