ಅಕಾಡೆಮಿಗಳ ಅಧ್ಯಕ್ಷರ ರಾಜೀನಾಮೆಗೆ ಸೂಚನೆ ಅಕ್ಷಮ್ಯ: ಸಿ.ಎನ್.ರಾಮಚಂದ್ರನ್ ವಿಷಾದ

Update: 2018-05-29 15:33 GMT

ಬೆಂಗಳೂರು, ಮೇ 29: ಸರಕಾರ ಬದಲಾದಂತೆ ಅಕಾಡೆಮಿ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರ ರಾಜೀನಾಮೆಗೆ ಸೂಚನೆ ನೀಡುವುದು ಒಳ್ಳೆಯ ಬೆಳವಣೆಗೆಯಲ್ಲವೆಂದು ಹಿರಿಯ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ವಿಷಾದಿಸಿದರು.

ಮಂಗಳವಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ನಗರದ ನಯನ ಸಭಾಂಗಣದಲ್ಲಿ ‘2017ನೆ ಸಾಲಿನ ಗೌರವ ಪ್ರಶಸ್ತಿ’ಯನ್ನು ಸ್ವೀಕರಿಸಿ ಮಾತನಾಡಿದ ಅವರು, 30ವರ್ಷಗಳ ಹಿಂದೆ ಅಕಾಡೆಮಿಗಳ ಅಧ್ಯಕ್ಷರ ಮೇಲೆ ಸರಕಾರಗಳ ಹಸ್ತಕ್ಷೇಪ ಇರಲಿಲ್ಲ. ಆದರೆ, ಕಳೆದ 10-15ವರ್ಷಗಳ ನಂತರ ಸರಕಾರ ಬದಲಾದ ತಕ್ಷಣ ಅಕಾಡೆಮಿ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರುಗಳಿಗೆ ರಾಜೀನಾಮೆಗೆ ಸೂಚನೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರಕಾರ ಬದಲಾದರೆ ವಿಶ್ವವಿದ್ಯಾಲಯಗಳ ಉಪಕುಲಪತಿ, ಕುಲಸಚಿವರ ರಾಜೀನಾಮೆಗೆ ಯಾರು ಸೂಚಿಸುವುದಿಲ್ಲ. ಆದರೆ, ಅಕಾಡೆಮಿ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರ ಮೇಲೇಕೆ ಸರಕಾರಗಳ ಕೆಂಗೆಣ್ಣು ಬೀರುತ್ತವೆ. ಹೀಗೆ ಮಾಡುವುದರಿಂದ ಅಕಾಡೆಮಿಗಳ ಅಧ್ಯಕ್ಷರು ಒಂದು ಸರಕಾರದ ಅಧೀನದಂತೆ ಕಾರ್ಯನಿರ್ವಹಿಸುತ್ತವೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ವೈಜ್ಞಾನಿಕ ರೀತಿಯಲ್ಲಿ ಕರ್ನಾಟಕ ಸರಕಾರದ ಸಾಂಸ್ಕೃತಿಕ ನೀತಿ ವರದಿ ರೂಪಿಸಿದೆ. ಈ ವರದಿಯನ್ನು ರಾಜ್ಯ ಸರಕಾರ ಶೀಘ್ರವೆ ಜಾರಿ ಮಾಡಬೇಕು. ಇದರಿಂದ ಅಕಾಡೆಮಿ ಹಾಗೂ ನಿಗಮಗಳ ಕಾರ್ಯನೀತಿ ಹಾಗೂ ಯೋಜನೆಗಳ ಮೇಲೆ ಸರಕಾರ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಬಹುದು ಎಂದು ಅವರು ಆಶಿಸಿದರು.

ಅಕಾಡೆಮಿ ಹಾಗೂ ಪ್ರಾಧಿಕಾರಗಳಿಂದ ಪ್ರತಿವರ್ಷ ಸಾವಿರಾರು ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ. ಈ ಪುಸ್ತಕಗಳ ಪ್ರಕಟನೆಗೆ ಸರಕಾರದಿಂದ ಆರ್ಥಿಕ ಅನುದಾನವು ಸಿಗುತ್ತಿದೆ. ಆದರೆ, ಈ ಪುಸ್ತಕಗಳು ಓದುಗರಿಗೆ ತಲುಪದೆ ಕೇವಲ ಅಕಾಡೆಮಿಗಳ ಕಟ್ಟಡಗಳಲ್ಲಿಯೆ ಉಳಿಯುತ್ತಿವೆ. ಇದರಿಂದ ಅಕಾಡೆಮಿ, ಲೇಖಕರ ಶ್ರಮ, ಜ್ಞಾನಕ್ಕೆ ಯಾವುದೆ ಮಾನ್ಯತೆ ಇಲ್ಲವಾಗಿದೆ. ಹೀಗಾಗಿ ಸರಕಾರವೆ ಅಕಾಡೆಮಿ ಹಾಗೂ ಪ್ರಾಧಿಕಾರಿಗಳು ಪ್ರಕಟಿಸುವ ಪುಸ್ತಕಗಳನ್ನು ಸಗಟು ದರದಲ್ಲಿ ಖರೀದಿಸಿ ಶಾಲಾ-ಕಾಲೇಜುಗಳಿಗೆ ಉಚಿತವಾಗಿ ಹಂಚಬೇಕು ಎಂದು ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶುಕುಮಾರ್ ಮಾತನಾಡಿ, ಅಕಾಡೆಮಿ ಹಾಗೂ ಪ್ರಾಧಿಕಾರಗಳು ಪ್ರಕಟಿಸಿರುವ ಪುಸ್ತಕಗಳನ್ನು ಸಗಟು ದರದಲ್ಲಿ ಖರೀದಿಸಲು ಸರಕಾರ ಒಪ್ಪಿಗೆ ಸೂಚಿಸಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯ ಇಲಾಖೆಯೊಂದಿಗೆ ಸಭೆಗಳು ನಡೆದಿವೆ. ಇನ್ನು ಕೆಲವೆ ದಿನಗಳಲ್ಲಿ ರಾಜ್ಯದಲ್ಲಿ ಎಲ್ಲ ಶಾಲಾ-ಕಾಲೇಜುಗಳಿಗೂ ಅಕಾಡೆಮಿ ಪುಸ್ತಕಗಳು ತಲುಪಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವಿಮರ್ಶಕರಾದ ಪ್ರೊ.ಸಿ.ಎನ್.ರಾಮಚಂದ್ರನ್, ಡಾ.ಎಚ್.ಎಸ್.ಶ್ರೀಮತಿ, ಪ್ರೊ.ಓ.ಎಲ್.ನಾಗಭೂಷಣಸ್ವಾಮಿ, ಪ್ರೊ.ಧರಣೇಂದ್ರ ಕುರಕುರಿ, ಕೆ.ಕೆ.ಗಂಗಾಧರನ್‌ಗೆ 2016ನೆ ಸಾಲಿನ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಾಗೂ ಅನುವಾದಕರಾದ ಬಿ.ಎಸ್.ಜಯಪ್ರಕಾಶ್ ನಾರಾಯಣ್, ವಿಠಲರಾವ್ ಗಾಯಕ್ವಾಡ, ಟಿ.ಡಿ.ರಾಜಣ್ಣ ತಗ್ಗಿ, ಡಿ.ಎಸ್.ಶ್ರೀನಾಥ್, ಎಂ.ಉಷಾ, ರಶ್ಮಿ ತೇರದಾಳ ಮತ್ತಿತರರಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಸಮಗ್ರ ಬರಹಗಳ ಸಂಪುಟಗಳ ಮರು ಮುದ್ರಣಕ್ಕೆ ಹಲವು ದಿನಗಳ ಹಿಂದೆಯೆ ಸಿದ್ಧಗೊಂಡಿತ್ತು. ಆದರೆ, ಚುನಾವಣೆ ಇದ್ದ ಹಿನ್ನೆಲೆಯಲ್ಲಿ ಮುದ್ರಣ ಕಾರ್ಯ ತಡವಾಯಿತು. ಈಗ ಮುಂದಿನ ಕೆಲವೆ ದಿನಗಳಲ್ಲಿ ಮುದ್ರಣಗೊಂಡು ಓದುಗರ ಕೈ ಸೇರಲಿದೆ. ಇದರ ಜೊತೆಗೆ ಕನ್ನಡದಿಂದ ಇತರೆ ಭಾಷೆಗಳಿಗೆ ಹಾಗೂ ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡಿರುವ 60ಪುಸ್ತಕಗಳು ಪ್ರಕಟಗೊಳ್ಳಲಿವೆ.

-ಡಾ.ಕೆ.ಮರುಳ ಸಿದ್ದಪ್ಪ ಅಧ್ಯಕ್ಷ, ಕುವೆಂಪು ಭಾರತಿ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News