×
Ad

ನವೀಕೃತ ಐಟಿಐ ದತ್ತಾಂಶ ಕೇಂದ್ರ ಕಾರ್ಯಾರಂಭ: ಎಸ್.ಗೋಪು

Update: 2018-05-29 21:08 IST

ಬೆಂಗಳೂರು, ಮೇ 29: ಕಳೆದ 10 ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು, ಕಾರ್ಪೋರೇಟ್ ಹಾಗೂ ಸರಕಾರಿ ಸಂಸ್ಥೆಗಳಂತ ಪ್ರಮುಖ ಗ್ರಾಹಕರಿಗೆ ಐಟಿಐ ದತ್ತಾಂಶ ಕೇಂದ್ರ ಸೌಲಭ್ಯವನ್ನು ಒದಗಿಸುತ್ತಾ ಬಂದಿದೆ ಎಂದು ಐಟಿಐ ಲಿಮಿಟೆಡ್‌ನ ಅಧ್ಯಕ್ಷ ಎಸ್.ಗೋಪು ತಿಳಿಸಿದ್ದಾರೆ.

ಮಂಗಳವಾರ ಕೆ.ಆರ್.ಪುರ ಸಮೀಪದ ದೂರವಾಣಿ ನಗರದಲ್ಲಿರುವ ಐಟಿಐ ಸಂಸ್ಥೆ ಆವರಣದಲ್ಲಿ ನವೀಕೃತ ದತ್ತಾಂಶ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಈಗ ಐಟಿಐ ತನ್ನ ದತ್ತಾಂಶ ಕೇಂದ್ರವನ್ನು ವಿಸ್ತರಿಸಿದ್ದು, ಬೆಂಗಳೂರಿನಲ್ಲಿ 1000 ರ್ಯಾಕ್‌ಗಳ ಸೇರ್ಪಡೆ ಹಾಗೂ ನೈನಿಯಲ್ಲಿ 200 ರ್ಯಾಕ್‌ಗಳ ಹೊಸ ಘಟಕವನ್ನು ಸ್ಥಾಪಿಸಿದೆ. ಐಟಿಐ ದತ್ತಾಂಶ ಕೇಂದ್ರದ ಈ ಹೊಸ ಹೆಚ್ಚುವರಿ ಸಾಮರ್ಥ್ಯ ಭಾರತದಲ್ಲಿ ಸಾರ್ವಜನಿಕ ಕ್ಷೇತ್ರದ ಅತಿದೊಡ್ಡ ದತ್ತಾಂಶ ಕೇಂದ್ರವನ್ನಾಗಿಸಿದೆ ಎಂದು ಅವರು ಹೇಳಿದರು.

ಈಗಾಗಲೆ ಹಲವಾರು ಸಂಸ್ಥೆಗಳು ಐಟಿಐ ಲಿಮಿಟೆಡ್‌ನ ದತ್ತಾಂಶ ಕೇಂದ್ರದಲ್ಲಿ ತಮ್ಮ ದತ್ತಾಂಶವನ್ನು ಶೇಖರಿಸಿಡಲು ಆಸಕ್ತಿ ತೋರಿವೆ ಎನ್ನುವುದು ಸಂತಸದ ಸಂಗತಿ. ಈ ದತ್ತಾಂಶ ಕೇಂದ್ರದ ವಿಸ್ತರಣೆ ಕಾರ್ಯವು, ದೇಶದ 'ಡಿಜಿಟಲ್ ಇಂಡಿಯಾ', 'ಮೇಕ್ ಇನ್ ಇಂಡಿಯಾ' ಹಾಗೂ 'ಸ್ಮಾರ್ಟ್ ಸಿಟಿ'ಗಳಂತ ಪ್ರಮುಖ ಉಪಕ್ರಮಗಳಿಗೆ ಐಟಿಐ ಬದ್ಧತೆಯ ಪ್ರತೀಕವಾಗಿದೆ ಎಂದು ಅವರು ತಿಳಿಸಿದರು.

ಐಟಿಐ ಒದಗಿಸುವ ವಿಶಿಷ್ಟ ವೌಲ್ಯವರ್ಧಿತ ಸೇವೆಯು ಬಹು ಸಾಂಧ್ರತೆಯುಳ್ಳ, ಬಹಳ ಸುಭದ್ರವಾದ ಮತ್ತು ಸ್ಥಿತಿಸ್ಥಾಪಕ ದತ್ತಾಂಶ ಕೇಂದ್ರವಾಗಿದ್ದು, ಗ್ರಾಹಕರ ಹೂಡಿಕೆಗೆ ಗರಿಷ್ಠ ಲಾಭ ತಂದುಕೊಡುವಂತದ್ದು, ಭೌತಿಕ ಭದ್ರತೆ, ಬಯೋಮೆಟ್ರಿಕ್ ದೃಢೀಕರಣ, ಕೇಜಿಂಗ್ ಮತ್ತು ತಾರ್ತಿಕ ಭದ್ರತೆಯಂತ ಹಲವಾರು ಪದರಗಳ ಸುಭದ್ರತೆಯನ್ನು ದತ್ತಾಂಶ ಕೇಂದ್ರದಲ್ಲಿ ಅಳವಡಿಸಲಾಗಿದೆ ಎಂದು ಅವರು ಹೇಳಿದರು.

ಐಟಿಐನ ಅತ್ಯಾಧುನಿಕ ದತ್ತಾಂಶ ಕೇಂದ್ರವು ಪ್ರಸಕ್ತ 2 ಲಕ್ಷ ಚ.ಅಡಿ ವಿಸ್ತೀರ್ಣದಲ್ಲಿ ವಿಶ್ವದರ್ಜೆ ಮಟ್ಟದ ಸೌಕರ್ಯಗಳೊಂದಿಗೆ ಹರಡಿಕೊಂಡಿದೆ. ಸಾವಿರಾರು ಐಟಿ ಮೂಲಭೂತಸೌಕರ್ಯ ಒದಗಿಸುವ ಸಾಮರ್ಥ್ಯ ಹೊಂದಿದ್ದು, ಅತ್ಯಂತ ಸುಭದ್ರ ಹಾಗೂ ಸದೃಢ ಪರಿಸರದಲ್ಲಿ ವೌಲ್ಯವರ್ಧಿತ ಸೇವೆಗಳನ್ನು ಒದಗಿಸುವಷ್ಟು ಸಾಮರ್ಥ್ಯದಿಂದ ಸಜ್ಜಿತವಾಗಿದೆ ಎಂದು ಗೋಪು ತಿಳಿಸಿದರು.

ಡಿಜಿಟಲ್ ಮೂಲಭೂತ ಸೌಕರ್ಯ ವ್ಯವಸ್ಥೆಗೆ ದತ್ತಾಂಶ ಕೇಂದ್ರಗಳೆ ಬೆನ್ನೆಲುಬು. ಗ್ರಾಹಕರು ತಮ್ಮ ವ್ಯಾಪಾರದ ಧ್ಯೇಯೋದ್ದೇಶಗಳನ್ನು ಈಡೇರಿಸಿಕೊಳ್ಳಲು ಮುಂದಿನ ಪೀಳಿಗೆಯ ದತ್ತಾಂಶ ಕೇಂದ್ರ ಹಾಗೂ ಕ್ಲೌಡ್ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ಕ್ರಾಂತಿಕಾರಿ ಉಪಕ್ರಮಕ್ಕೆ ಮುಂದಾಗಿದೆ ಎಂದು ಅವರು ಹೇಳಿದರು.

 2017-18ನೆ ಸಾಲಿನಲ್ಲಿ ಐಟಿಐ 102 ಕೋಟಿ ರೂ.ಲಾಭಗಳಿಸಿದೆ. ಕಳೆದ 16 ವರ್ಷಗಳಿಂದ ಆರ್ಥಿಕವಾಗಿ ಸೊರಗಿಹೋಗಿದ್ದ ಈ ಸಂಸ್ಥೆ ಈಗ ಚೇತರಿಕೆ ಕಾಣುತ್ತಿದೆ. ಭಾರತ ಸರಕಾರದ ಟೆಲಿ ಕಮ್ಯುನಿಕೇಷನ್ಸ್ ಇಲಾಖೆ, ಸಂವಹನ ಮತ್ತು ಐಟಿ ಸಚಿವಾಲಯದೊಂದಿಗೆ ಐಟಿಐ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅವರು ತಿಳಿಸಿದರು.

ದೇಶಿಯ ಟೆಲಿಕಾಂ ಉಪಕರಣಗಳನ್ನು ಅಳವಡಿಸಿಕೊಳ್ಳಲು ಮತ್ತು ರಕ್ಷಣಾ ಇಲಾಖೆಯ ಭಾರತ್ ನೆಟ್‌ಫೇಸ್, ನೆಟ್‌ವರ್ಕ್ ಫಾರ್ ಸ್ಪೆಕ್ಟ್ರಂ ಮತ್ತು ಎನ್ಕ್ರಿಪ್ಷನ್ ಯೋಜನೆಗಳಂತ ರಾಷ್ಟ್ರೀಯ ಮಹತ್ವವುಳ್ಳ ಯೋಜನೆಗಳಿಗೆ ಕೇಂದ್ರ ಸರಕಾರದ ಅನುದಾನ ಹೊಂದಿರುವ ಯೋಜನೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಗೋಪು ತಿಳಿಸಿದರು.

ಉತ್ಪಾದನೆ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಕೆ.ಅಳಗೇಶನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News