ಯಶಸ್ವಿನಿ ಹಿಂಪಡೆಯುತ್ತಿರುವ ವಿಚಾರ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2018-05-29 15:51 GMT

ಬೆಂಗಳೂರು, ಮೇ 29: ಯಶಸ್ವಿನಿ ಯೋಜನೆ ಅಡಿಯಲ್ಲಿ ಲಭ್ಯವಾಗುತ್ತಿರುವ ಪ್ರಯೋಜನಗಳನ್ನು ಮೇ 31ರಿಂದ ಹಿಂಪಡೆಯುತ್ತಿರುವ ವಿಚಾರ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಮೈಸೂರು ನಿವಾಸಿ ಟಿ.ಆರ್. ವಿದ್ಯಾಸಾಗರ್ ಮತ್ತು ಹಾಸನದ ಮಹಿಳೆ ಮಹದೇವಿ ಜತ್ತಿ ಸಲ್ಲಿಸಿದ್ದ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಹಕಾರ ಇಲಾಖೆಗೆ ನೋಟಿಸ್ ಜಾರಿ ಮಾಡಿತು. ಹಾಗೆಯೇ ಯಶಸ್ವಿನಿ ಕೋ ಆಪರೇಟಿವ್ ಹೆಲ್ತ್ ಕೇರ್ ಟ್ರಸ್ಟ್‌ಗೆ ತುರ್ತು ನೋಟಿಸ್‌ಗೆ ನೀಡಿ, ಅರ್ಜಿ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು.

ರಾಜ್ಯ ಸರಕಾರವು ವಿವಿಧ ಆರೋಗ್ಯ ನೀತಿಗಳನ್ನು ಏಕೀಕರಿಸಿ ಸಮಗ್ರ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿದ್ದು, ಮೇ 31ರಿಂದ ಯಶಸ್ವಿನಿ ಯೋಜನೆಯಡಿ ಕಲ್ಪಿಸುತ್ತಿರುವ ಪ್ರಯೋಜನಗಳನ್ನು ಹಿಂಪಡೆಯುತ್ತಿದೆ. ಈ ಸಂಬಂಧ 2018ರ ಮಾರ್ಚ್ 1ರಂದು ಆರೋಗ್ಯ ಇಲಾಖೆ ನೋಟಿಫಿಕೇಷನ್ ಹೊರಡಿಸಿದೆ. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಆರೋಗ್ಯ ಕರ್ನಾಟಕ ಯೋಜನೆಯಡಿ ರಿಯಾಯಿತಿ ದರದಲ್ಲಿ ವಿಶೇಷ ಆರೋಗ್ಯ ಸೇವೆಗಳು ಲಭ್ಯವಾಗುವುದಿಲ್ಲ. ವಿಮೆ ಸ್ವರೂಪದಿಂದ ಕೂಡಿಲ್ಲ. ಶೇ.70 ರಿಂದ 100ರಷ್ಟು ಶುಲ್ಕದ ಪಾವತಿಸಿ ಆರೋಗ್ಯ ಸೌಲಭ್ಯ ಪಡೆಯಬೇಕಿದೆ. ಮೂರು ಹಂತದ ವ್ಯವಸ್ಥೆಯಲ್ಲಿ ಆರೋಗ್ಯ ಸೇವೆ ಪಡೆಯಬೇಕಿದೆ. ಆರೋಗ್ಯ ನೀತಿಗಳನ್ನು ಏಕೀಕರಿಸುವ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸುವ ನೆಪದಲ್ಲಿ ಯಶಸ್ವಿನಿ ಯೋಜನೆಯಡಿ ಅರ್ಹ ಫಲಾನುಭವಿಗಳು ಆರೋಗ್ಯ ಸೇವೆ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಮೇಲಾಗಿ ಯಶಸ್ವಿನಿ ಯೋಜನೆ ಹಿಂಪಡೆಯುತ್ತಿರುವುದು ಅಕ್ರಮವಾಗಿದ್ದು, ಆ ಕುರಿತ ಸರಕಾರದ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಹಾಗೆಯೇ, ಯಶಸ್ವಿ ಯೋಜನೆ ಮುಂದುವರಿಸುವಂತೆ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News