ಸಿಬಿಐ ತನಿಖೆಗೆ ಏಕೆ ಒಪ್ಪಿಸಬಾರದು: ರಾಜ್ಯ ಸರಕಾರವನ್ನು ಪ್ರಶ್ನಿಸಿದ ಹೈಕೋರ್ಟ್

Update: 2018-05-29 16:54 GMT

ಬೆಂಗಳೂರು, ಮೇ 28: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಆಶ್ರಮದಲ್ಲಿ ಸಾವೀಗಿಡಾಗಿದ್ದ ಸಂಗೀತಾ ಹೆಸರಿನ ಭಕ್ತೆಯ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಏಕೆ ಒಪ್ಪಿಸಬಾರದು ಎಂದು ಹೈಕೋರ್ಟ್ ರಾಜ್ಯ ಸರಕಾರವನ್ನು ಪ್ರಶ್ನಿಸಿದೆ. ಈ ಕುರಿತಂತೆ ಸಾವಿಗೀಡಾಗಿರುವ ಭಕ್ತೆ ಸಂಗೀತಾ ಅವರ ತಾಯಿ ಝಾನ್ಸಿ ರಾಣಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರನ್ನು ನ್ಯಾಯಮೂರ್ತಿಗಳು, ಏಕೆ ನೀವು ಇನ್ನೂ ಈ ಕುರಿತ ದೂರಿನ ಅನುಸಾರ ಎಫ್‌ಐಆರ್ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪೊನ್ನಣ್ಣ, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ವಿಕ್ಟೋರಿಯಾ ಆಸ್ಪತ್ರೆಯ ಪೆಥಾಲಿಜಿ ವಿಭಾಗದ ತಜ್ಞ ವೈದ್ಯರು ಪ್ರಮಾಣೀಕರಿಸಿದ್ದಾರೆ. ಆಕೆ ಸಾಯುವ ಮುನ್ನ ಅವಳ ಮೈಮೇಲೆ ಯಾವುದೇ ಗಾಯದ ಅಥವಾ ಪೆಟ್ಟಿನ ಗುರುತುಗಳಿಲ್ಲ. ಹೀಗಾಗಿ, ಇದರಲ್ಲಿ ಸಂಶಯಪಡುವ ಅಗತ್ಯವಿಲ್ಲ ಎಂದರು. ಆದರೆ, ನ್ಯಾಯಮೂರ್ತಿಗಳು, ಸಂಗೀತಾ ಅವರ ಸಾವು ಮೇಲ್ನೋಟಕ್ಕೆ ಸಂಶಯಾಸ್ಪದವಾಗಿ ಕಾಣುತ್ತಿದೆ. ಹೀಗಾಗಿ, ಈ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಏಕೆ ಒಪ್ಪಿಸಬಾರದು ಎಂದು ಪ್ರಶ್ನಿಸಿದರು. ವಿಚಾರಣೆಯನ್ನು ಜೂನ್ 11ಕ್ಕೆ ಮುಂದೂಡಲಾಗಿದೆ. ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News