ಫುಟ್ಬಾಲ್ ಪಂದ್ಯದ ವೇಳೆ ನಡೆದ ಘರ್ಷಣೆಯನ್ನು ಮುಸ್ಲಿಮರು ನಡೆಸಿದ ಹಿಂಸಾಚಾರ ಎಂದು ಬಿಂಬಿಸಿದ ಕಿಡಿಗೇಡಿಗಳು

Update: 2018-05-30 09:34 GMT

“ರಮಝಾನ್  ಸಂದರ್ಭ ಬರ್ಮಿಂಗ್ ಹ್ಯಾಮ್ ನಲ್ಲಿ ಮುಸ್ಲಿಮರಿಂದ ಹಿಂಸಾಚಾರ. ರಸ್ತೆಗಳಲ್ಲಿ ಆಹಾರ ಸೇವಿಸಲು ಅವರು ರಸ್ತೆ ಬಂದ್ ಮಾಡ ಬಯಸುತ್ತಿದ್ದಾರೆ''….. ಇಂತಹ ಒಂದು ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜತೆಗೆ ಕೆಲವು ಜನರು ರಸ್ತೆಯಲ್ಲಿರುವ ಕಾರುಗಳಿಗೆ ಹಾನಿಯೆಸಗುತ್ತಿರುವ ದೃಶ್ಯದ ವೀಡಿಯೋ ಕೂಡ ಇದೆ. ಈ ಘಟನೆ ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ರಮಝಾನ್ ಉಪವಾಸ ತೊರೆಯುವ ವೇಳೆ ಅವರಿಗೆ ರಸ್ತೆಯಲ್ಲಿಯೇ ಆಹಾರ ಸೇವಿಸಬೇಕೆಂಬ ಬೇಡಿಕೆಯೊಂದಿಗೆ ದಾಂಧಲೆ ನಡೆಸಿದ್ದಾರೆಂದೂ ಸಂದೇಶದಲ್ಲಿ ಹೇಳಲಾಗಿದೆ. ಈ ವೀಡಿಯೋ ಯುಟ್ಯೂಬ್, ಟ್ವಿಟರ್, ಫೇಸ್ ಬುಕ್ ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇದೇ ವಿಡಿಯೋ ಮತ್ತು ಸಂದೇಶವನ್ನು ರೇಣುಕಾ ಜೈನ್ ಎಂಬವರು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಈ ರೇಣುಕಾ ಜೈನ್ ಎಂಬವರನ್ನು ಪ್ರಧಾನಿ ಮೋದಿ ಕೂಡ ಫಾಲೋ ಮಾಡುತ್ತಿದ್ದಾರೆ.  ಹೀಗೆಯೇ ಹಲವರು ಈ ಸಂದೇಶ ಮತ್ತು ವಿಡಿಯೋ ಶೇರ್ ಮಾಡುತ್ತಿದ್ದಾರೆ. ಯುಟ್ಯೂಬಿನಲ್ಲಿ ಈ ವಿಡಿಯೋಗೆ ``ರಮಝಾನ್ ತಿಂಗಳಲ್ಲಿ ಲಂಡನ್ ನಲ್ಲಿ ಮುಸ್ಲಿಮರಿಂದ ಹಿಂಸೆ'' ಎಂಬ ಶೀರ್ಷಿಕೆ ನೀಡಲಾಗಿದೆ.

Altnews.in ಈ ವೀಡಿಯೋವನ್ನು ಗೂಗಲ್ ಮೂಲಕ ರಿವರ್ಸ್ ಸರ್ಚ್ ಮಾಡಿದಾಗ ಇದು ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಘಟನೆಯಲ್ಲ. ಬದಲಾಗಿ ಸ್ವಿಜರ್ಲೆಂಡ್ ನ ಬಾಸೆಲ್ ನಲ್ಲಿ ನಡೆದಿದ್ದು, ಅದಕ್ಕೂ ಇಸ್ಲಾಂ ಅಥವಾ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ಸ್ಪಷ್ಟಗೊಂಡಿದೆ. ಬಾಸೆಲ್ ಮತ್ತು ಲುಸೆರ್ನೆ ಕ್ಲಬ್ ಗಳ ನಡುವೆ ನಡೆದ ಫುಟ್ಬಾಲ್ ಪಂದ್ಯದ ವೇಳೆ ಈ ಹಿಂಸಾಚಾರ ಮೇ 19ರಂದು ಬಾಸೆಲ್ ನ ಬಿರ್ಸಟ್ರೆಸ್ಸೆಯಲ್ಲಿ ನಡೆದಿದೆ. ಸುಮಾರು 90 ಜನರು ಹಿಂಸಾಚಾರದಲ್ಲಿ ತೊಡಗಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದರು.

ಒಂದು ವೀಡಿಯೋ, ಹಲವು ವಿವರಣೆಗಳು:

ಈ ವಿಡಿಯೋವನ್ನು ಯುಟ್ಯೂಬ್  ಚಾನೆಲ್ ರೆಡೆಬ್ರೇಸಿಲ್.ನೆಟ್ ಶೇರ್ ಮಾಡಿದ್ದು, ಬ್ರೆಜಿಲ್ ನಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದ್ದರೆ, ಇನ್ನೊಂದು ವಿವರಣೆಯ ಪ್ರಕಾರ ಬರ್ಮಿಂಗ್ ಹ್ಯಾಮ್ ನಲ್ಲಿ ಇದು ಪಾಕಿಸ್ತಾನೀಯರ ಕೃತ್ಯವೆಂಬಂತೆ ಬಿಂಬಿಸಲಾಗಿದೆ.

ಕೃಪೆ: Altnews.in 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News