ಮದುವೆಯಾಗುವುದಾಗಿ ನಂಬಿಸಿ ದೇವಸ್ಥಾನದ ಅರ್ಚಕನಿಂದ ಮಹಿಳೆಯ ಅತ್ಯಾಚಾರ: ಆರೋಪ

Update: 2018-05-30 09:53 GMT

ರಾಜಕೋಟ್, ಮೇ 30: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರನ್ನು ಅತ್ಯಾಚಾರ ಎಸಗಿದ ಆರೋಪದಲ್ಲಿ ದೇವಸ್ಥಾನದ ಮುಖ್ಯ ಅರ್ಚಕನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.

ಗುಜರಾತ್ ರಾಜ್ಯದ ಪ್ರಾಚಿ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಖ್ಯಾತ ಮಾಧವರೈಜಿ ದೇವಸ್ಥಾನದ ಮುಖ್ಯ ಅರ್ಚಕ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಕಳೆದ ಒಂದೂವರೆ ವರ್ಷಗಳಿಂದ ಸತತ ಅತ್ಯಾಚಾರವೆಸಗಿದ್ದಾನೆಂದು ಮಹಿಳೆ ಆರೋಪಿಸಿದ್ದಳು.

ರಿಷಿಗಿರಿ ಗೋಸ್ವಾಮಿ ಎಂಬ ಹೆಸರಿನ ಆ ಅರ್ಚಕ ತನ್ನನ್ನು ಆಗಸ್ಟ್ 2016ರಿಂದ ಅತ್ಯಾಚಾರವೆಸಗಿದ್ದಾನೆ ಎಂದು ತಲಾಲ ತಾಲೂಕಿನ ಅಂಕೋಲವಾಡಿ ಗ್ರಾಮದ ನಿವಾಸಿಯಾಗಿರುವ ಮಹಿಳೆ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾಳೆ. ಮಹಿಳೆ  ಪ್ರಾಚಿ ಗ್ರಾಮದ ವ್ಯಕ್ತಿಯೊಬ್ಬನನ್ನು ಆರು ವರ್ಷಗಳ ಹಿಂದೆ ವಿವಾಹವಾದ ನಂತರ ಆಗಾಗ ಮಾಧವರೈಜಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಳು. ಈ ವೇಳೆ ಗೋಸ್ವಾಮಿಯ ಪರಿಚಯ ಆಕೆಗಾಗಿತ್ತು. ಹೀಗೆ ಪರಿಚಯ ಪ್ರೇಮಕ್ಕೆ ತಿರುಗಿದಾಗ ಅರ್ಚಕ ಆಕೆಯಿಂದ ದೈಹಿಕ ಸಂಪರ್ಕ ಬಯಸಿದ್ದ. ಆಕೆ ನಿರಾಕರಿಸಿದಾಗ ದೇವಸ್ಥಾನದ ಪಕ್ಕದಲ್ಲಿದ್ದ ಮುಖ್ಯ ಅರ್ಚಕನ ಕೊಠಡಿಯಲ್ಲಿ ಆತ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು 25 ವರ್ಷದ ಯುವತಿ ಆರೋಪಿಸಿದ್ದಾಳೆ.

ತನ್ನನ್ನು ಮದುವೆಯಾಗು ಎಂದು ಆಕೆ ಆತನಿಗೆ ಹೇಳಿದಾಗ ಪತಿಯಿಂದ ವಿಚ್ಛೇದನ ಪಡೆಯುವಂತೆ ಆತ ಆಗ್ರಹಿಸಿದ್ದ ಎಂದೂ ಆಕೆ ದೂರಿದ್ದಾಳೆ. ಮೇ 7ರಂದೂ ಆತ ಆಕೆಯನ್ನು ಬಲವಂತಗೈದಾಗ ಆಕೆ  ಪ್ರತಿರೋಧ ತೋರಿದ್ದು ಆತ ಆಕೆಯನ್ನು ನಿಂದಿಸಿ ಹಲ್ಲೆಗೈದಿದ್ದಾನೆ ಎಂದು ಆರೋಪಿಸಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News