×
Ad

ಹದಿನೈದು ದಿನಗಳಲ್ಲಿ ನಿರ್ಧಾರ ಪ್ರಕಟ: ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ

Update: 2018-05-30 19:32 IST

ಬೆಂಗಳೂರು, ಮೇ 30: ರಾಜ್ಯದಲ್ಲಿನ ರೈತರ ಬೆಳೆ ಸಾಲಮನ್ನಾ ಮಾಡಲು ರಾಜ್ಯ ಸರಕಾರ ಬದ್ಧ ಎಂದು ಪುನರುಚ್ಚರಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ರೈತರ ಸಾಲದ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ ಇನ್ನು 15 ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಘೋಷಿಸಿದ್ದಾರೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಪ್ರತಿನಿಧಿಗಳು, ರೈತ ಸಂಘಟನೆಗಳ ಮುಖಂಡರು, ವಿಪಕ್ಷ ನಾಯಕರೊಂದಿಗೆ ಸುಧೀರ್ಘ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವುದರ ಜೊತೆಗೆ ರೈತರ ಹಿತರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದರು.

2009ರ ಎಪ್ರಿಲ್ 1ರಿಂದ 2017ರ ಡಿಸೆಂಬರ್ 31ರ ಅವಧಿಯೊಳಗಿನ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು. ಅಲ್ಲದೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲದ ಬಗ್ಗೆ ಬ್ಯಾಂಕುಗಳ ಉನ್ನತ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

4ಲಕ್ಷ ರೂ.ಗಳಿಗೂ ಹೆಚ್ಚಿನ ಆದಾಯ ತೆರಿಗೆ ಪಾವತಿಸುವವರು, ನಗರ ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಮಾಡಿರುವವರು, ಕೃಷಿ ಸಾಲ ಪಡೆದು ಆ ಹಣದಲ್ಲಿ ಬೇರೆ ವ್ಯವಹಾರ ನಡೆಸುವವರು, ಜನಪ್ರತಿನಿಧಿಗಳು ಪಡೆದಿರುವ ಸಾಲಮನ್ನಾ ಮಾಡುವ ಬಗ್ಗೆ ತಜ್ಞರಿಂದ ಸಲಹೆ ಪಡೆದ ಬಳಿಕ ನಿರ್ಧಾರ ಪ್ರಕಟಿಸಲಾಗುವುದು ಎಂದರು.

ಎರಡು ಹಂತದಲ್ಲಿ ಸಾಲಮನ್ನಾ: ಮೊದಲ ಹಂತದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರ ಬೆಳೆ ಸಾಲಮನ್ನಾ ಮಾಡಲಾಗುವುದು. ಎರಡನೆ ಹಂತದಲ್ಲಿ ರೈತರು ಟ್ರಾಕ್ಟರ್, ಕೃಷಿ ಯಂತ್ರೋಪಕರಣ ಸೇರಿದಂತೆ ಕೃಷಿ ಚಟುವಟಿಕೆಗಳಿಗಾಗಿನ ಸಾಲಮನ್ನಾ ಬಗ್ಗೆ ಆಯಾ ಜಿಲ್ಲಾಧಿಕಾರಿಗಳನ್ನೇ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಿದ್ದು, ರೈತರು 10-15ದಿನಗಳೊಳಗೆ ತಮ್ಮ ಸಾಲದ ವಿವರವನ್ನು ಅವರಿಗೆ ನೀಡಬೇಕು ಎಂದು ಸೂಚಿಸಿದರು.

ರಾಜ್ಯದಲ್ಲಿ ರೈತರು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಒಟ್ಟು 52 ಸಾವಿರ ಕೋಟಿ ರೂ.ಸಾಲ ಮಾಡಿದ್ದು, ಅದು ಸೇರಿ ಒಟ್ಟಾರೆ 1.14 ಲಕ್ಷ ಕೋಟಿ ರೂ.ರೈತರ ಸಾಲವಿದ್ದು, ಇದರಲ್ಲಿ ಕೇಂದ್ರ ಸರಕಾರದ್ದು ಪಾಲಿದೆ ಎಂದ ಅವರು, ಸಾಲಮನ್ನಾ ಮಾಡುವುದರ ಜತೆಗೆ ಅವರು ಸಾಲಗಾರರಾಗದಂತೆ ಬದುಕು ಕಟ್ಟಿಕೊಳ್ಳಲು ಬೇಕಾದ ನೀತಿಯನ್ನು ರೂಪಿಸಲು ಸಮ್ಮಿಶ್ರ ಸರಕಾರ ಕ್ರಮವಹಿಸಲಿದೆ ಎಂದು ಪ್ರಕಟಿಸಿದರು.

ಋಣಮುಕ್ತ ಪತ್ರ: ರೈತರ ಕೃಷಿ ಸಾಲಮನ್ನಾ ಯಾವುದೇ ಕಾರಣಕ್ಕೂ ದುರ್ಬಳಕೆ ಆಗಬಾರದು, ಸಾಲಮನ್ನಾದ ಲಾಭ ಮಧ್ಯವರ್ತಿಗಳಿಗೂ ಆಗಬಾರದು ಎಂಬ ದೂರದೃಷ್ಟಿಯನ್ನಿಟ್ಟುಕೊಂಡಿದ್ದು, ರೈತ ಸಾಲದಿಂದ ಋಣಮುಕ್ತನನ್ನಾಗಿ ಮಾಡಿ ‘ಋಣಮುಕ್ತ’ ಪತ್ರವನ್ನು ರೈತನ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದರು.

ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಸಚಿವ ಸಂಪುಟ ರಚನೆಯಾಗಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ನಾಲ್ಕೈದು ದಿನಗಳಲ್ಲಿ ಪ್ರವಾಸ ಮುಗಿಸಿ ಆಗಮಿಸಲಿದ್ದು, ಅವರೊಂದಿಗೂ ಸಮಾಲೋಚನೆ ನಡೆಸಿ ರೈತರ ಸಾಲಮನ್ನಾ ಮಾಡಲಾಗುವುದು ಎಂದರು.

ಮಳೆ, ನೀರಿನ ಲಭ್ಯತೆ ಆಧರಿಸಿ ಬೆಳೆ ಪದ್ಧತಿ ಅನುಸರಿಸುವ ಸಂಬಂಧ ಕೃಷಿ ಇಲಾಖೆ ಸಲಹೆ-ಸೂಚನೆಗಳನ್ನು ರೈತರು ಪಾಲಿಸಬೇಕು. ಇದರಿಂದ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಬೀದಿಗೆ ಸುರಿಯುವುದು ತಪ್ಪಲಿದೆ. ಅಲ್ಲದೆ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಕ್ರಮಕೈಗೊಳ್ಳಲಿದೆ ಎಂದರು. ರಾಜ್ಯದ ಬಜೆಟ್ 2 ಲಕ್ಷ ಕೋಟಿ ರೂ., ರೈತರ ಸಾಲಮನ್ನಾಕ್ಕೆ 52 ಸಾವಿರ ಕೋಟಿ ರೂ.ಗಳು. ಕೃಷಿ, ನೀರಾವರಿ, ಸಮಾಜ ಕಲ್ಯಾಣ, ಆರೋಗ್ಯ ಸೇವೆಗಳಿಗೆ ಹಣಕಾಸಿನ ನೆರವು ನೀಡಬೇಕು. ಅಲ್ಲದೆ, ರಾಜ್ಯದ ಎಲ್ಲ ಹಳ್ಳಿಗಳಿಗೆ ಕೊಳವೆಬಾವಿ ನೀರಿನ ಮೂಲದ ಬದಲಿಗೆ ನದಿ ಮೇಲೈನೀರು ಒದಗಿಸಲು 40ಸಾವಿರ ಕೋಟಿ ರೂ.ಗಳಷ್ಟು ಅನುದಾನದ ಅಗತ್ಯವಿದೆ ಎಂದು ಹೇಳಿದರು.

ಕಾರಜೋಳಗೆ ತರಾಟೆ: ವಿಪಕ್ಷ ಉಪ ನಾಯಕ ಗೋವಿಂದ ಕಾರಜೋಳ, ಮುಧೋಳ್, ಜಮಖಂಡಿ ಸೇರಿ ವಿಜಯಪುರ ಜಿಲ್ಲೆಯ ಕೆಲ ತಾಲೂಕುಗಳ ಸ್ಥಳೀಯ ಸಮಸ್ಯೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದಕ್ಕೆ ರೈತರು ಆಕ್ಷೇಪಿಸಿದರು. ಕೇವಲ ಸಾಲ ಮನ್ನಾಕ್ಕಷ್ಟೇ ಸೀಮಿತವಾಗಿ ಮಾತನಾಡಿಯೆಂದು ಪಟ್ಟು ಹಿಡಿದರು. ಇದರಿಂದ ಕೆಲಕಾಲ ಸಭೆಯಲ್ಲಿ ಗೊಂದಲ ಸೃಷ್ಟಿಯಾಗಿತ್ತು.

ಸಭೆಯಲ್ಲಿ ವಿಪಕ್ಷ ಉಪ ನಾಯಕ ಗೋವಿಂದ ಎಂ.ಕಾರಜೋಳ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ರೈತ ಮುಖಂಡರಾದ ಮಾರುತಿ ಮಾನ್ಪಡೆ, ಕೋಡಿಹಳ್ಳಿ ಚಂದ್ರಶೇಖರ್, ಬಸವರಾಜಪ್ಪ, ಸುನಂದ ಜಯರಾಂ, ಚಾಮರಸ ಮಾಲಿ ಪಾಟೀಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಚಿಲ್ಲರೆ ರಾಜಕಾರಣ ಕೈಬಿಡಿ:

‘ಸಾಲಮನ್ನಾ ಕುರಿತು ಸಮಾಲೋಚನೆ ನಡೆಸಲು ರೈತ ಮುಖಂಡರ ಸಭೆಗೆ ವಿಪಕ್ಷ ನಾಯಕ ಬಿಎಸ್‌ವೈ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಅವರ ಮಂಗಳೂರು ಭೇಟಿ ನೆಪದಲ್ಲಿ ಬಂದಿಲ್ಲ. ಆದರೆ, ಅವರು ಮನೆಯಲ್ಲಿ ಕೂತು ರೈತರ ವಿಚಾರದಲ್ಲಿ ಚಿಲ್ಲರೆ ರಾಜಕಾರಣದಲ್ಲಿ ತೊಡಗುವುದನ್ನು ನಿಲ್ಲಿಸಬೇಕು’

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಕೃಷಿ ಸಾಲ ಪರಶೀಲನೆಗೆ ತಜ್ಞರ ಸಮಿತಿ ಅಗತ್ಯ: 
‘ರೈತರ ಸಾಲಮನ್ನಾ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ರೈತರ ಸಾಲಮನ್ನಾಕ್ಕೆ ಕಾಂಗ್ರೆಸ್ ಬದ್ಧ. ರೈತರ ಕೃಷಿ ಸಾಲ ಪರಿಶೀಲನೆಗೆ ತಜ್ಞರ ಸಮಿತಿ ಅಗತ್ಯ. ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗಬೇಕು. ರೈತ, ಕಾರ್ಮಿಕರು ಹಾಗೂ ಯುವಕರು ನೆಮ್ಮದಿಯಿಂದ ಜೀವನ ನಡೆಸಬೇಕು. ಆ ನಿಟ್ಟಿನಲ್ಲಿ ಅಭಿವೃದ್ಧಿಗಾಗಿ ಸಮ್ಮಿಶ್ರ ಸರಕಾರ ಒಗ್ಗಟ್ಟಿನಿಂದ ಶ್ರಮಿಸಲಿದೆ’
-ಡಾ.ಜಿ.ಪರಮೇಶ್ವರ್ , ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News