ವಿದ್ವತ್ ಮೇಲಿನ ಹಲ್ಲೆ ಪ್ರಕರಣ: ನಲಪಾಡ್ ಜಾಮೀನು ಅರ್ಜಿ ವಜಾ
ಬೆಂಗಳೂರು, ಮೇ 30: ವಿದ್ವತ್ ಮೇಲಿನ ಹಲ್ಲೆ ಕೇಸ್‌ನಲ್ಲಿ ಮೂರು ತಿಂಗಳಗಳಿಂದ ಜೈಲು ವಾಸ ಅನುಭವಿಸುತ್ತಿರುವ ಶಾಸಕ ಎನ್.ಎ.ಹಾರಿಸ್ ಪುತ್ರ ಮೊಹಮದ್ ನಲಪಾಡ್ ಹಾರಿಸ್‌ಗೆ ಜಾಮೀನು ನೀಡಲು ಸೆಷನ್ಸ್ ಕೋರ್ಟ್ ನಿರಾಕರಿಸಿದೆ.
ಪ್ರಕರಣ ನಡೆದ ನಂತರ ಬಂಧನಕ್ಕೊಳಗಾಗಿದ್ದ ಮೊಹಮದ್ ನಲಪಾಡ್ ಗೆ ಈ ಹಿಂದೆಯೂ ಸೆಷನ್ಸ್ ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಚಾರ್ಜ್‌ಶೀಟ್ ದಾಖಲಿಸಿದ ನಂತರ ಸಲ್ಲಿಸಲಾಗಿದ್ದ ಅರ್ಜಿಯನ್ನೂ ಈಗ ವಜಾ ಮಾಡಿ ಆದೇಶ ನೀಡಲಾಗಿದೆ. ನಲಪಾಡ್ ಈಗ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಲೇಬೇಕಾಗಿದೆ. ಫೆ. 17 ರಂದು ಫರ್ಜಿ ಕೆಫೆಯಲ್ಲಿ ನಡೆದಿದ್ದ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮದ್ ನಲಪಾಡ್ ನನ್ನು ಫೆ. 19ರಂದು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದರು.
ಯಾಕೆ ಸಿಗಲಿಲ್ಲ ಜಾಮೀನು: ನಲಪಾಡ್ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದಕ್ಕೆ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅವರು ತಮ್ಮ ಆದೇಶದಲ್ಲಿ ಹಲವು ಕಾರಣಗಳನ್ನು ನೀಡಿದ್ದಾರೆ. ಆರೋಪಿ ಹಿಂದೆಯೂ ಈ ರೀತಿಯ ಕೃತ್ಯಗಳನ್ನೆಸಗಿದ್ದಾನೆ. ಆರೋಪಿ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡಿಲ್ಲ. ಜಾಮೀನು ಸಿಕ್ಕ ಮೇಲೆ ತಪ್ಪಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ. ಪ್ರಕರಣದ ಒಬ್ಬ ಆರೋಪಿಗೆ ಜಾಮೀನು ನೀಡಲಾಗಿದೆ ಎಂಬ ಅಂಶದ ಆಧಾರದ ಮೇಲೆ ಮುಖ್ಯ ಆರೋಪಿಗೆ ಜಾಮೀನು ಕೊಡಬೇಕೆಂದೇನೂ ಇಲ್ಲ. ಈ ಅಂಶಗಳನ್ನು ತಮ್ಮ ಆದೇಶದಲ್ಲಿ ಉಲ್ಲೇಖಿಸಿರುವ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ, ಜಾಮೀನು ನೀಡಲು ನಿರಾಕರಿಸಿದ್ದಾರೆ.
ನಲಪಾಡ್‌ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿ ಆದೇಶ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವಿದ್ವತ್ ಪರ ವಕೀಲ ಶ್ಯಾಂ ಸುಂದರ್, ಆರೋಪಿ ಎಸಗಿರುವ ಕೃತ್ಯ ಗಂಭೀರವಾಗಿದೆ. ಫರ್ಜಿ ಕೆಫೆಯಲ್ಲಿ ನಲಪಾಡ್ ನಡೆಸಿದ ಗೂಂಡಾಗಿರಿ ಮತ್ತು ಆಸ್ಪತ್ರೆಯಲ್ಲಿ ನಲಪಾಡ್ ದಾಂಧಲೆ ಬಗ್ಗೆ ಒಟ್ಟು 27 ಜನ ಸಾಕ್ಷಿ ಹೇಳಿದ್ದಾರೆ. ನಲಪಾಡ್‌ನ ಅಟ್ಟಹಾಸ ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ನಲಪಾಡ್ ಬಿಡುಗಡೆಯಾದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬಾರದು ಎಂಬ ವಾದ ಮಾಡಿದ್ದೆವು. ನಮ್ಮ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ ಎಂದಿದ್ದಾರೆ.