×
Ad

‘ಯಶಸ್ವಿನಿ ಯೋಜನೆ’ ಮುಂದುವರಿಕೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-05-30 20:04 IST

ಬೆಂಗಳೂರು, ಮೇ 30: ಮೇ 31ರಂದು ಅಂತ್ಯಗೊಳ್ಳುವ ಯಶಸ್ವಿನಿ ವಿಮಾ ಯೋಜನೆಯನ್ನು ಮುಂದುವರೆಸಬೇಕೆಂಬ ರೈತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯದ ರೈತರ ಹಿತದೃಷ್ಟಿಯಿಂದ ‘ಯಶಸ್ವಿನಿ ಯೋಜನೆ’ಯನ್ನು ಮುಂದುವರೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತರ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಾಲಮನ್ನಾ ಸಂಬಂಧದ ಸಭೆಯಲ್ಲಿ ಮಾತನಾಡಿದ ಅವರು, ರೈತರು ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂಬುದು ತಮ್ಮ ಬಯಕೆ ಎಂದು ಅಪೇಕ್ಷೆಪಟ್ಟರು.

ನೀರು ಲಭ್ಯತೆಯನ್ನು ಆಧರಿಸಿ ಯಾವ ಋತುಮಾನಕ್ಕೆ ಯಾವ ಬೆಳೆ ಬೆಳೆಯಬಹುದು? ಎಂಬುದರ ಕುರಿತು ಸರಕಾರದ ಅಧಿಕಾರಿಗಳು ರೈತರ ಜಮೀನಿಗೆ ಬಂದು ಸಲಹೆ ನೀಡುತ್ತಾರೆ. ಬೆಳೆ ಬೆಳೆಯುವ ಮುನ್ನವೇ ತಮಗೆ ದೊರೆಯುವ ನ್ಯಾಯಯುತ ಬೆಲೆಯ ಬಗ್ಗೆ ಪೂರ್ವ ಮಾಹಿತಿ ಪಡೆದು ರೈತರು ನಿಶ್ಚಿಂತರಾಗಿರಬೇಕು ಎಂದು ಅವರು ಹೇಳಿದರು.

ರೈತರಿಗೆ ನ್ಯಾಯಯುತ ಬೆಲೆ ಖಚಿತಪಡಿಸುವ ಮಾದರಿ ಹಾಗೂ ಪ್ರಾಯೋಗಿಕ ಯೋಜನೆಯನ್ನು ದೇಶದಲ್ಲೆ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಜಾರಿಗೆ ತರಲು ಯೋಜಿಸಿದ್ದೇನೆ ಎಂದ ಅವರು, ರೈತರು ಇನ್ನು ಆತಂಕ ಪಡುವ ಅಗತ್ಯವಿಲ್ಲ. ನಮ್ಮದು ಧ್ವನಿ ಇಲ್ಲದ ರೈತರಿಗೆ ಧ್ವನಿಯಾಗಿರುವ ಸರಕಾರ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ನಮ್ಮ ಸರಕಾರ ತಮ್ಮ ಜೊತೆಗಿದೆ. ಸರಕಾರಕ್ಕೆ ತಮ್ಮ ಸಹಕಾರ ಇರಲಿ ಎಂದು ಮನವಿ ಮಾಡಿದ ಅವರು, ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಗೂ ಕೊಳವೆ ಮೂಲಕ ಶುದ್ಧ ನೀರು ಒದಗಿಸುವ ಕನಸು ನಮ್ಮದಾಗಿದೆ. ಜಲಮೂಲಗಳ ಶೋಧನೆಯ ಜೊತೆಗೆ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಅರವತ್ತರ ದಶಕದಲ್ಲಿ ಭಾರತದಲ್ಲಿ ಅನ್ನವಿಲ್ಲದೆ ಸಾಯುತ್ತಿದ್ದರು. ಆದರೆ, ಎಂಭತ್ತರ ದಶಕದ ವೇಳೆಗೆ ತನ್ನ ದುಡಿಮೆಯಿಂದ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ ಎಲ್ಲರಿಗೂ ತಿನ್ನಲು ಅನ್ನ ಕೊಟ್ಟ ಅನ್ನದಾತನ ಕೊಡುಗೆಯನ್ನು ನಾವು ಎಂದೂ ಮರೆಯುವಂತಿಲ್ಲ ಎಂದು ಹೇಳಿದರು.

ಸಾಲಮನ್ನಾಕ್ಕೆ ಒಕ್ಕೊರಲ ಧ್ವನಿ: ರೈತರ ಸಾಲಮನ್ನಾಕ್ಕೆ ಕಿಕ್ಕಿರಿದ ಸಭಾಂಗಣದಲ್ಲಿ ಒಕ್ಕೊರಲ ಧ್ವನಿ ಮೊಳಗಿತ್ತಾದರೂ ತಮ್ಮ ಅಭಿಪ್ರಾಯವನ್ನು ಮಂಡಿಸಿದ ಹಲವು ರೈತ ಮುಖಂಡರು ಸಂಪೂರ್ಣ ಸಾಲಮನ್ನಾ ರಾಜ್ಯ ಸರಕಾರಕ್ಕೆ ಹೊರೆಯಾಗುತ್ತದೆ. ಕೇಂದ್ರ ಸರಕಾರದ ನೆರವನ್ನೂ ಪಡೆಯಬೇಕು ಎಂದು ರೈತ ಪ್ರತಿನಿಧಿಗಳು ಮನವಿ ಮಾಡಿದರು.

ರೈತರು ತಮ್ಮ ಭೂಮಿ ಹಾಗೂ ಆಭರಣಗಳನ್ನು ಒತ್ತೆ ಇಟ್ಟು ಖಾಸಗಿ ಲೇವಾದೇವಿಗಾರರಿಂದ ಪಡೆದ ಸಾಲವನ್ನೂ ಮನ್ನಾ ಮಾಡಬೇಕೆಂದು ಕೆಲ ರೈತರು ಆಗ್ರಹಿಸಿದರು. ರೈತರ ಬಾಳನ್ನು ಹಸನು ಮಾಡುವ ಡಾ.ಸ್ವಾಮಿನಾಥನ್ ವರದಿ ಜಾರಿಯಾಗಬೇಕು ಎಂಬ ಒತ್ತಾಯವೂ ಕೇಳಿಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News