×
Ad

ಜೂ.5ರಿಂದ ವಿಶ್ವ ಪರಿಸರ ವನ-ವನಮಹೋತ್ಸವ: ಧಾರವಾಡ ಡಿ.ಸಿ ಬೊಮ್ಮನಹಳ್ಳಿ

Update: 2018-05-30 20:27 IST

ಧಾರವಾಡ, ಮೇ 30: ಪ್ರತಿ ವರ್ಷದ ವಾಡಿಕೆಯಂತೆ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ವರ್ಷದ ವಿಶೇಷತೆ ಎಂದರೆ ‘ಬೀಟ್ ಪ್ಲಾಸ್ಟಿಕ್ ಪೊಲ್ಯೂಷನ್’ ಧ್ಯೇಯವಾಕ್ಯದಡಿ ವಿಶ್ವ ಪರಿಸರ ದಿನದೊಂದಿಗೆ ವನಮಹೋತ್ಸವವನ್ನು ಭಾರತದ ಆತಿಥ್ಯದಡಿ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣಧಲ್ಲಿ ವಿಶ್ವ ಪರಿಸರ ದಿನ ಹಾಗೂ ವನ ಮಹೋತ್ಸವ ನಿಮಿತ್ತ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ಕ್ರಿಯಾ ಯೋಜನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧಾರವಾಡ ಜಿಲ್ಲೆಯಾದ್ಯಂತ ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ಪ್ಲಾಸ್ಟಿಕ್ ರೇಡ್ ಕಾರ್ಯವನ್ನು ಹಾಗೂ ವಿವಿಧ ಕಾರ್ಯ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಧಾರವಾಡ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಿ ಮಾಡಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಭಾರತದ ಆತಿಥ್ಯದಲ್ಲಿ ಈ ವರ್ಷದ ವಿಶ್ವ ಪರಿಸರ ದಿನಾಚರಣೆ ನಡೆಯುತ್ತಿರುವುದರಿಂದ ಅರಣ್ಯ ಇಲಾಖೆ ಹಾಗೂ ರಾಜ್ಯ ಪರಿಸರ ನಿಯಂತ್ರಣ ಮಂಡಳಿ ನೇತೃತ್ವದಲ್ಲಿ ವಿವಿಧ ಇಲಾಖೆ ಹಾಗೂ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆ, ಸಂಘಗಳ ಸಹಯೋಗದಲ್ಲಿ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಪರಿಸರಕ್ಕೆ ವಿಷಕಾರಿ ಆಗಿರುವ ಮತ್ತು ಜೀವಹಾನಿಗೆ ಕಾರಣವಾಗುತ್ತಿರುವ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜನಜಾಗೃತಿ ಹಾಗೂ ಅದರ ನಿಯಂತ್ರಣ ಕುರಿತು ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು

ಜೂನ್ 5ರಿಂದ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಜೂನ್ ಮಾಸಾಂತ್ಯದವರೆಗೆ ಪ್ಲಾಸ್ಟಿಕ್ ರೇಡ್ ಡ್ರೈವ್ ಆಯೋಜಿಸಲಾಗುತ್ತದೆ. ಈ ಮೂಲಕ ನಿಷೇಧಿತ ಪ್ಲಾಸ್ಟಿಕ್ ಬಳಸುವ ಅಂಗಡಿ, ಹೊಟೇಲ್ ಹಾಗೂ ಇತರ ವ್ಯಾಪಾರ ವಹಿವಾಟು ಕೇಂದ್ರಗಳ ಮೇಲೆ ದಾಳಿ ಮಾಡಿ, ಕಾನೂನು ಅನುಸಾರ ದಂಡ ಹಾಗೂ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಬೊಮ್ಮನಹಳ್ಳಿ ಹೇಳಿದರು.

ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ಅವಳಿ ನಗರದಲ್ಲಿರುವ ಕಲ್ಯಾಣ ಮಂಟಪ, ಹೊಟೇಲ್, ಲಾಡ್ಜ್ ಮತ್ತು ಸಮುದಾಯ ಭವನಗಳ ಮುಖ್ಯಸ್ಥರ ಸಭೆ ಜರುಗಿಸಿ, ಆಯಾ ಕಟ್ಟಡ, ಪ್ರದೇಶ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಸೂಕ್ತ ಕ್ರಮ ಜರುಗಿಸಿ ‘ಪ್ಲಾಸ್ಟಿಕ್ ಮುಕ್ತ ಪ್ರದೇಶ’ ಎಂಬ ನಾಮಫಲಕ ಅಳವಡಿಸಲು ಕ್ರಮ ತೆಗೆದುೊಳ್ಳಬೇಕೆಂದು ಅವರು ತಿಳಿಸಿದರು.

ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲ ವಿಶ್ವವಿದ್ಯಾಲಯ, ಅವುಗಳ ಅಧೀನ ಕಾಲೇಜುಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆ, ಸರಕಾರಿ ಇಲಾಖೆಗಳ ಕಚೇರಿ ಮುಖ್ಯಸ್ಥರು ಸುತ್ತೋಲೆ ಹೊರಡಿಸುವ ಮೂಲಕ ತಮ್ಮ ವ್ಯಾಪ್ತಿಯ ಎಲ್ಲ ಶಾಲಾ ಕಾಲೇಜು, ಕಚೇರಿಗಳು ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್‌ವಾಗಿ ರೂಪಗೊಳ್ಳಲು ಸೂಕ್ತ ಕ್ರಮ ಜರುಗಿಸಿ ವರದಿ ಸಲ್ಲಿಸಲು ಸೂಚಿಸಿದರು. ಮತ್ತು ಕಡ್ಡಾಯವಾಗಿ ಪ್ಲಾಸ್ಟಿಕ್ ಮುಕ್ತ ಪ್ರದೇಶವೆಂದು ಫಲಕ ಅಳವಡಿಸಲು ಅವರು ತಿಳಿಸಿದರು.

ದೇವಾಲಯ, ಮಸೀದಿ, ಚರ್ಚ್ ಸೇರಿದಂತೆ ಎಲ್ಲ ಪೂಜಾ ಸ್ಥಳಗಳು ಮತ್ತು ಜಿಲ್ಲೆಯಲ್ಲಿ ಬರುವ ಪ್ರವಾಸಿ ತಾಣಗಳು ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಲು ಸಂಬಂಧಿತ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಬೊಮ್ಮನಹಳ್ಳಿ ಸೂಚಿಸಿದರು.

ಸಭೆಯಲ್ಲಿ ಧಾರವಾಡ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮಹೇಶ್‌ಕುಮಾರ್, ಮಹಾನಗರ ಪಾಲಿಕೆ ಪರಿಸರ ಎಂಜಿನಿಯರ್ ನಯನಾ, ಜಿ.ಪಂ. ಸಿಇಓ ಸ್ನೇಹಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News